Audio by Mrs. Nandini Sripad
ಶ್ರೀವಿಜಯದಾಸಾರ್ಯ ವಿರಚಿತ ಶ್ರೀನಾರಾಯಣವರ್ಮ ಸುಳಾದಿ
(ಶ್ರೀ ನಾರಾಯಣವರ್ಮ ಪ್ರಕ್ರಿಯೆ, ದೇಶಕಾಲ ನಿಯಾಮಕನಾದ ಶ್ರೀಹರಿಯ ರೂಪ ಚಿಂತನೆ, ಕಾಲೋಪಾಸನೆ , ಧ್ಯಾನ)
ರಾಗ ನಾದನಾಮಕ್ರಿಯಾ
ಧ್ರುವತಾಳ
ರಕ್ಷಿಸುವ ಭಕ್ತರ ನಾನಾ ರೂಪದಿಂದ
ಅಕ್ಷರ ಪುರುಷ ರಮಣ ಕರುಣಾಂಬುಧಿ
ಅಕ್ಷಿ ಮೊದಲಾದ ಕಾರ್ಯದಲ್ಲಿದ್ದು ಭಕ್ತರ
ಶಿಕ್ಷೆ ಮಾಡುವ ಉಕ್ಕು ತಗ್ಗಿಸುವ
ಈಕ್ಷಿಸುತಿಪ್ಪನು ಒಳಗೆ ಹೊರಗಿದ್ದು ಬಿಡದೆ
ದೀಕ್ಷಾ ಬದ್ಧನಾಗಿ ದೀನಬಂಧು
ಅಕ್ಷಯ ಕೊಡುತಲಿ ಆವಾವ ಕಾಲಕ್ಕೆ
ಮೋಕ್ಷಕ್ಕೆ ಸಾಧನ ಮಾಡಿಸುತ್ತ
ಲಕ್ಷಣ ಮೂರುತಿ ಕೇವಲ ನಂಬಿದವರು
ಲಕ್ಷ ಕೋಟಿ ಜನರ ನಡುವೆ ಇರಲು
ಲಕ್ಷ್ಮೀ ಸಹಿತ ಬಂದು ಕಾವೋನು ಆಪದ್ಧರ್ಮ
ರಕ್ಷಕನೆಂಬೋ ಬಿರುದು ಕೂಗುತಿದಕೋ
ಭಿಕ್ಷುಕ ಭಾಗ್ಯವಂತನೆಂಬೊ ವೈಷಮ್ಯವಿಲ್ಲಾ
ಲಕ್ಷಾ ಇಟ್ಟು ಮೇಲೆ ಒಪ್ಪಿಸಿ ಕೊಡನೋ
ವಕ್ಷಸ್ಥಳದ ಮೇಲೆ ಒದ್ದ ಬ್ರಾಹ್ಮಣನ ಉ -
ಪೇಕ್ಷ ಮಾಡದಲೆ ಮನ್ನಿಸಿದ ನೋಡು
ಈ ಕ್ಷಿತಿ ಮಧ್ಯದಲಿ ಇನ್ನೊಂದು ದೈವವುಂಟೆ
ತ್ರ್ಯಕ್ಷ ಜನಕ ಮೊದಲಾದವರು
ರಕ್ಷಿಸಬೇಕೆಂದು ಕರವ ಜೋಡಿಸಿ ಅ -
ಪೇಕ್ಷದಿಂದಲೆ ಸ್ತುತಿಸಿ ಬೆಂಡಾಹರೋ
ತೀಕ್ಷಣವಾಗಿ ಹರಿಯ ಕಾಣಬೇಕೆನೆ ಪ್ರ -
ತ್ಯಕ್ಷ ಸೋಮನ ಶ್ರುತಿಯಲಿ ಕಾಣಿರೊ
ವೃಕ್ಷ ಸ್ಥಾವರ ಜಂಗಮ ನಾಲ್ಕು ಎಂಭತ್ತು
ಲಕ್ಷ ಜೀವಿಗಳನ್ನು ಚಕ್ರದಂತೆ
ಚಕ್ಷು ಲವ ನೋಟದಿಂದ ಬೊಮ್ಮಾಂಡಾವರಣ ಮಹಾ
ಲಕ್ಷ್ಮೀ ಸಮೇತ ಸದಾ ಸರಸರಗಿದ್ಧಾನೆ
ಆ ಕ್ಷಣದಿಂದಲಿ ತೃಣಮಯಾದಂದದಿ ಪ -
ರೋಕ್ಷ ತಾನಾಗಿ ಇನಿತು ತಿರುಗಿಸುವ
ಕುಕ್ಷಿಗೋಸುಗವಲ್ಲ ಸರ್ವ ಸ್ವಾತಂತ್ರ ನಿತ್ಯ
ದಕ್ಷಕ ಸುಖ ಸಂಪೂರ್ಣ ಇಂಥವರನ್ನ
ಲಕ್ಷಿಗೆ ತಾಹನೇನೊ ಸ್ವರತಾ ನಿರ್ದೋಷಮಣಿ
ಅಕ್ಷೀಣ ಬಲವಂತ ಸ್ವಪ್ರಕಾಶಾ
ಸಾಕ್ಷಾತ್ಕಾರ ಸ್ವಭಾವ ಕಾಲಾದಿಯಲ್ಲೀ ಸಮ
ಕಕ್ಷಿಗಳಿಲ್ಲ ಕಾಣೊ ಚಿಂತಿಸಿದರು
ನಕ್ಷತ್ರ ಗಣ ಪುಲಿನರಾಶಿ ಪರಾಗ ಸಂಖ್ಯ
ನೀಕ್ಷಿಸಿ ಎಣಿಸಬಹುದೋ ಇದು ತೀರದು
ಸಾಕ್ಷಿ ಪ್ರೇರಕ ಕರ್ತ ಕಾರಯಿತ ಅನಾದಿಯಿಂದ
ಸೂಕ್ಷ್ಮ ಶರೀರದೊಳು ಮಹಾತಮ ತರದೀ
ಪಕ್ಷಿನಾಮಕದೇವ ವಾಸವಾಗಿಪ್ಪ ವಿಶ್ವ
ಚಕ್ಷು ನಾರಾಯಣಾ ಬಿಂಬ ವ್ಯಾಪ್ತಿ
ದಕ್ಷಣಾದೇವಿ ರಮಣ ವಿಜಯವಿಟ್ಠಲ ಬಲು
ಪಕ್ಷಪಾತಿ ಕಾಣೊ ಒಮ್ಮೆ ನೆನಿಸಿದರೂ ॥ 1 ॥
ಮಟ್ಟತಾಳ
ಸ್ಥಳದಲ್ಲಿ ವಾಮನ ಅಟವ್ಯದಿ ನರಸಿಂಹ
ಜಲದಲ್ಲಿ ಮತ್ಸ್ಯ ಗಗನದಿ ತ್ರಿವಿಕ್ರಮಾ
ಕುಲಗಿರಿಯಲ್ಲಿ ಪರಶುರಾಮನು ಮಾರ್ಗ -
ದಲಿ ಭೂವರಾಹಾತ್ಮಾ ಬಲು ಪ್ರವಾಸದಲಿ
ಸಲಕ್ಷ್ಮಣ ಭರತಾಗ್ರಜ ಜಾನಕಿಪತಿ ರಾಮಾ
ತಿಳಿವದು ಈ ವಿಧದಿ ರಕ್ಷಕ ಮೂರ್ತಿಗಳ
ಬಲಿಮರ್ದನ ಪಾದ ವಿಜಯವಿಟ್ಠಲರೇಯ
ಒಲಿದು ಸಂಗಡಿಲಿದ್ದು ಸುಖವೇ ಕೊಡುತಿಪ್ಪಾ ॥ 2 ॥
ತ್ರಿವಿಡಿತಾಳ
ಮತ್ತೆ ನಿಖಿಳ ಪ್ರಮಾದ ರಕ್ಷಕ ಶುಭ
ಮೂರ್ತಿ ನಾರಾಯಣಾತ್ಮಕನು ಉ -
ನ್ಮತ್ತ ಉನ್ಮಾದ ಹ್ರಾಸಕನೆ ನರನಾಮಕ ಸ್ವಾಮಿ
ದತ್ತನೂ ಅ ಯೋಗದ್ರಕ್ಷಕನಾಗಿಪ್ಪಾ
ಮೊತ್ತ ಕರ್ಮಾಕರ್ಮ ಬಂಧ ಮೋಚಕ ಕಪಿಲಾತ್ಮಕ ಸ -
ನತ್ಕುಮಾರನು ಯೋಗ್ಯತಾವ ಕಾಮಕೆ ಇನ್ನು (ತಾಪಸಕಾಮ ಎನ್ನು)
ಭೃತ್ಯಧರ್ಮವೇ ಮರೆದು ಪತಿದೇವ ಹೇಳನ
ಕೃತ್ತೀಗೆ ಹಯಗ್ರೀವ ಪಾಲಿಸುತಿಪ್ಪನು
ತತ್ವೇಶರ ಕೂಡ ಅರ್ಚನೆ ಮಾಡದೆ ಹರಿಗೆ
ತುತ್ತು ಈಯದೆ ಲಕ್ಷಣ ಕರ್ಮ ಸ್ಮರಣ ರ -
ಹಿತ್ತವಾಗಿದ್ದ ಪೂಜಿಯ ದೋಷ ಮಹಿದಾ -
ಸಾತ್ಮಕ ಹರಿಯೆನ್ನು ಅಶೇಷ ನಿರಯವಾ
ಉತ್ತರಿಸುವಾ ಕೂರ್ಮ ಧನ್ವಂತರಿದೇವಾ
ಪತ್ಯ ರಕ್ಷಕಾ ದ್ವಂದ್ವಾ ಭಯ ಪರಿಹಾರಕ
ಕೀರ್ತಿ ಪುರುಷ ಋಷಭ ಯಜ್ಞಕೃತ ಫಲದಲ್ಲಿ
ನಿತ್ಯ ಯಜ್ಞಾತ್ಮಕಾ ಸುರನಾಯಕಾ
ವೃತ್ತಿ ಕ್ರೋಧಾವೇಶ ಕಳೆದ ಬಲಭದ್ರಾತ್ಮಕಾ
ಸತ್ಯಸಂಕಲ್ಪನೋ ಪರಮಾತ್ಮನೋ
ಸತ್ಯವತೀಸೂನು ಸಂಪ್ರಮೋಹ ಬಿಡಿಪಾ
ಮಿಥ್ಯಾಜ್ಞಾನಿಗಳ ಸಂಗವ ಹರಿಸುವ ಬುದ್ಧಿ
ಚಿತ್ತಾದಿಯಲಿ ಕಲಿಯ ಕಲ್ಮಷವಿರೆ ನು -
ಗ್ಗೊತ್ತುವಾ ಕಲ್ಕಿ ರೂಪವೆನಿಸಿ
ಸತ್ಯಪರಾಯಣ ಸ್ವಾಮಿ ವಿಜಯವಿಟ್ಠಲ ಸ -
ರ್ವತ್ರದಲ್ಲಿ ಇದ್ದು ಅಘನಾಶ ಮಾಡುವಾ ॥ 3 ॥
ಅಟ್ಟತಾಳ
ಪದ ಜಾನು ಉರು ರಕ್ಷಕ ಅಜ ಅಣಿಮಾ ಯಜ್ಞ
ಮೃದು ಕಟಿ ಅಚ್ಯುತಾ ಜಠರಾ ಹಯಗ್ರೀವಾ
ಪದುಮನಾಭ ನಾಭಿ ಗುಹ್ಯೇಂದ್ರಿಯನಿರುದ್ಧಾ
ಹೃದಯ ವಕ್ಷಸ್ಥಳ ಕೇಶವಾ ಈಶಾನಾ
ಇದೇ ಸಿದ್ಧಾಕರ ಸ್ವ ಆತ್ಮ (ಕಂಠಸ್ವಾತ್ಮಕ) ಭುಜೆ ವಿಷ್ಣು
ವದನ ಉರುಕ್ರಮಾ ಶಿರೋ ಈಶ್ವರನೆನ್ನು
ಎದುರಿಗೆ ಚಕ್ರಿಯಾತ್ಮಕ ಪೃಷ್ಠಭಾಗಕ್ಕೆ
ಗದಾಧರ ಪಾರ್ಶ್ವಕ್ಕೆ ಧನುರ್ಧಾರಿ ಕಾಣೊ
ತದುಪರಿ ಉಪೇಂದ್ರ ಕ್ಷಿತಿಗೆ ತಾರಕ್ಷನೋ
ಮುದದಿಂದಲಿ ಸಮಾ ಅಂತಿಗೆ ಹಲಧರಾ
ಒದಗಿ ಇಂದ್ರಿಯಗಳಿಗೆ ಹೃಷಿಕೇಶ
ಸದಮಲ ಪ್ರಾಣ ಚಿತ್ತಾ ಮನೋಬುದ್ಧಿಗೆ
ಪದುಮೇಶ ನಾರಾಯಣ ದೇವ, ಶ್ವೇ -
ತದ್ವೀಪವಾಸಿ ಯೋಗೇಶ್ವರ ಪ್ರಶ್ನಿಗರ್ಭ (ಪ್ರಶನಿಗರ್ಭ)
ಇದೇ ಸತ್ಯವೆನ್ನಿ ಆತ್ಮನಿಗೆ ಪರಶುರಾಮಾ
ಪದೋಪದಿಗೆ ಕ್ರೀಡಾ ಶಯನಾ ವ್ರಜಾಸೀನಾ
ವಿಧಕ್ಕೆ ಗೋವಿಂದ ಮಾಧವ ವೈಕುಂಠ ಶ್ರೀಪತಿ
ಪದ ಪ್ರದಾತಾ ನಮ್ಮ ವಿಜಯವಿಟ್ಠಲ ಸ -
ನ್ನಿಧಿಯಾಗಿ ಇರುತಿಪ್ಪಾ ಆನಂದ ಕೊಡುತಲಿ ॥ 4 ॥
ಆದಿತಾಳ
ಮುನ್ನೆ ಕೇಳುವದು ಭೋಕ್ತಾ ರಕ್ಷಕ ಯಜ್ಞ ಭೋಕ್ತ
ಉನ್ಮಾದಾ ಅಪಸ್ಮಾರ ಅರ್ಭಕ ಗೃಹಾ ಯಾತೂ
ಧನ್ಯ ಕೂಷ್ಮಾಂಡ ಭೂತ ಪ್ರೇತ ಪೈಶಾಚಿ ಡಾ -
ಕಿನ್ಯ ಶಾಕಿನಿ ದೇಹ ಪ್ರಾಣೇಂದ್ರಿಯಗಳಲ್ಲಿ
ಭಿನ್ನಾ ದುಃಸ್ವಪ್ನ ದುಷ್ಟ ಮಹೋತ್ಪಾತಾ ಬಾಲ ಯೌ -
ವ್ವನ ವೃದ್ಧಾಪ್ಯ ವಿಡಿದು ನಾನಾ ಭಯ ವಿಚಿತ್ರಾ
ಘನ್ನವಾಗಿ ಬಂದಿರೆ ವಿಶ್ವನಾಮಕನ
ಚೆನ್ನಾಗಿ ನೆನಿಸುವದು ಯಮ ನೇಮನದಿಂದ
ಇನ್ನು ಈ ವಿಚಾರಕ್ಕೆ ಸುಲಭ ಮಾರ್ಗವೆ ಉಂಟು
ಅನಂತ ರೂಪಗಳು ಸರ್ವದಲ್ಲಿ ಇಪ್ಪವು
ಇನಿತು ಜ್ಞಾನದಲ್ಲಿ ಇದರೊಳಗಾವದು ಒದಗೆ
ನಿನ್ನ ಚಿತ್ತಕ್ಕೆ ಬಂದದ್ದು ಸ್ಮರಿಸೆ ನಿರ್ಭಯವೋ
ಧನ್ಯನಾಗೆಲೊ ಜೀವಿ ಈ ಬಗೆ ಕೊಂಡಾಡಿ
ಪುಣ್ಯ ಸಂಪಾದಿಸು ಅರಿಷ್ಟ ಪೋಗಾಡು
ಸಣ್ಣೋಪಾಯವೆ ಉಂಟು ಒಂದೆರಡು ಮೂರು ನಾಲ್ಕು
ಭಿನ್ನ ಅರೇಳು ಎಂಟು ಒಂಭತ್ತು ಈರೈದು
ಹನ್ನೊಂದು ಹನ್ನೆರಡು ಈ ಪ್ರಕಾರವೆ ಹರಿಯಾ
ಉನ್ನತ ಪ್ರೇರಣೆ ಸ್ವಾಮಿತ್ವ ತಿಳಿಯಬೇಕು
ತಿನ್ನಲಾಗಿ ಮೇಲಿದ್ದ ರಸ ಪೋದ ಮಾವಿನ
ಹಣ್ಣಿನಂದದಿ ಎಲ್ಲ ಅನುಭವ ನೋಡಿಕೊಳಿರಿ
ಮನ್ನಿಸಿ ಓದಿ ಕೇಳಿ ಲಾಲಿಸಿದವರಿಗೆ
ಇನ್ನಿತು ಆಗುವದು ದೀಪದಿಂದಲಿ ದೀಪವ
ಬಿನ್ನಾಣದಲಿ ಪಚ್ಚಿಕೊಂಡು ಪೋದಂತೆ ಇದು
ಪುಣ್ಯತಂದು ಕೊಡುವದು ಹರಿಕಥಾಮೃತ ನಿತ್ಯ
ಪೂರ್ಣ ಗುಣಾರ್ಣವ ಹರಿ ವಿಜಯವಿಟ್ಠಲ
ತನ್ನ ತೋರಿಸಿ ತನ್ನ ಪದವಿಯ (ನೀವಾ) ಕೊಡುವಾ ॥ 5 ॥
ಜತೆ
ಭಗವನ್ಮೂರ್ತಿಗಳನ್ನು ಚಿಂತಿಸು ಅಲ್ಲಲ್ಲಿ
ಅಘ ನಿರ್ಲೇಪನಾಗು ವಿಜಯವಿಟ್ಠಲ ಪೊಳಿವಾ ॥
****
No comments:
Post a Comment