Saturday, 1 May 2021

ಏನೆಂದು ಬಣ್ಣಿಸಲೋ ಮುಖ್ಯಪ್ರಾಣ ankita venkatanatha

" ಶ್ರೀ ಮುಖ್ಯಪ್ರಾಣದೇವರ ಸ್ತೋತ್ರ "

ರಚನೆ : ಆಚಾರ್ಯ ನಾಗರಾಜು ಹಾವೇರಿ 

ಮುದ್ರಿಕೆ : ವೇಂಕಟನಾಥ 


ಏನೆಂದು ಬಣ್ಣಿಸಲೋ ಮುಖ್ಯಪ್ರಾಣ ।

ನಿನ್ನ ಮಹಿಮೆ ಅಪಾರ ಜಗತ್ರಾಣ ।। ಪಲ್ಲವಿ ।।


ತ್ರೇತೆಯಲಿ ಹನುಮನಾಗಿ ಶ್ರೀರಾಮನ ಸೇವಿಸಿ ।

ಪ್ರಥಮಾಂಗನೇ ಶ್ರೀ ಹರಿಯ -

ಪ್ರತೀಕ ನೀನಹುದೋ ।। ಚರಣ ।।


ದ್ವಾಪರ ಯುಗದೊಳು ಭೀಮನಾಗಿ ।

ದ್ವಾರಕಾಪತಿ ಶ್ರೀ ಕೃಷ್ಣನ ಪೂಜಿಸಿದ ।। ಚರಣ ।।


ಮುನಿಕುಲೋತ್ತಮ ಮುದತೀರ್ಥ -

ಪ್ರಥಮ ಕುಲದಲಿ ಜನಿಸಿ ।

ಮುನಿಮಾನಸ ಹಂಸನ ಮತ -

ಪ್ರತಿಷ್ಠಾಪಿಸಿದ ।। ಚರಣ ।।


ಪರಿಶುದ್ಧ ಭಾಗವತ -

ಧರ್ಮದ ಸಾಕಾರ ಮೂರ್ತಿ।

ಭಾರತೀ ಪತಿ ನಿನ್ನ ಅನಂತ-

ವೇದಗಳು ಪೊಗಳುತಿರೆ ।। ಚರಣ ।।


ಅಂಬುಜನಾಭ ಅಂಬುಜನೇತ್ರ-

ವೇಂಕಟನಾಥನ ದಯದಿ ।

 ಅಂಬುಜ ಸಂಭವ  -

ಪದಾರ್ಹನೇ ನಮೋ ।। ಚರಣ ।।

****


ಜಗದ ಜೀವರ ಜೀವ ಶ್ರೀ ಮುಖ್ಯಪ್ರಾಣದೇವರು. 

ಅನಂತ ಜೀವ ನಿಯಾಮಕರು.

ಋಜು ಯೋಗಿಗಳು. 

ಕುಳಿತಲ್ಲಿಯೇ ವಿಶ್ವ ದರ್ಶಿಗಳು. 

ಸರ್ವಜ್ಞರೂ, ಜೀವೋತ್ತಮರು ಮತ್ತು ಶ್ರೀಮನ್ನಾರಾಯಣನ ಪುತ್ರರು. 

ಭಾವಿ ಬ್ರಹ್ಮದೇವರು - ಸಕಲರ ಶ್ವಾಸದೊಡೆಯರು ಹಾಗೂ ಪ್ರಾಣಪತಿಗಳು. 

ಶ್ರೀಮನ್ನಾರಾಯಣನಿಂದ " ವಿಶ್ವಗುರು " ಸ್ಥಾನವನ್ನು ಪಡೆದವರು. 

ಜಗದ ಹುಟ್ಟು - ಪಾಲನ - ಪೋಷಣ - ಲಯ - ನಿಯಮನಗಳು ಶ್ರೀ ಮುಖ್ಯಪ್ರಾಣದೇವರಿಂದಲೇ ಆಗುತ್ತದೆ. 

ಶ್ರೀ ಮುಖ್ಯಪ್ರಾಣದೇವರು ಶ್ರೀ ಭಾರತೀದೇವಿಯರ ಪತಿ ಮತ್ತು ಸಕಲ ವೇದ್ಯ ಪ್ರತಿಪಾದರು. 

ಸದಾ ಕೃತಯುಗದ ಧರ್ಮ ಪಾಲಕರು ಮತ್ತು ಪರಿಶುದ್ಧ ಭಾಗವತ ಧರ್ಮದ ಮೂರ್ತಿಗಳು. 

ಶ್ರೀಮನ್ನಾರಾಯಣನ ಸೇವೆಗೆ ಮೂರು ಯುಗದಲ್ಲೂ ಅವತರಿಸಿದ ಸಾಧಕೇಶರು. 

ಬ್ರಹ್ಮಚರ್ಯ - ಗೃಹಸ್ಥ ಮತ್ತು ಸಂನ್ಯಾಸ - ಮೂರು ಆಶ್ರಮಗಳಿಂದಲೂ - ಶ್ರೀ ರಾಮ - ಶ್ರೀ ಕೃಷ್ಣ - ಶ್ರೀ ವೇದವ್ಯಾಸದೇವರ ಸೇವೆಯನ್ನು ಶ್ರೀ ಹನುಮ - ಶ್ರೀ ಭೀಮ - ಶ್ರೀ ಆಚಾರ್ಯ ಮಧ್ವ ರೂಪಗಳಿಂದ ಮಾಡಿದವರು ಶ್ರೀ ಮುಖ್ಯಪ್ರಾಣದೇವರು. 

ಅನಾದಿಯಾದ ಪರಂಪರಾ ಪ್ರಾಪ್ತವಾದ ಶ್ರೀಮದ್ವೈಷ್ಣವ ಸಿದ್ಧಾಂತ ಪ್ರತಿಷ್ಠಾಪಕರು ಶ್ರೀ ಮುಖ್ಯಪ್ರಾಣದೇವರು. 

ಶ್ರೀ ಮುಖ್ಯಪ್ರಾಣದೇವರ ಚರಿತ್ರೆ ವಾನ್ಗ್ಮಯವೇ ಅನಂತ ವೇದಗಳು!

ಚತುರಶ್ಚತುರಾನನಃ ಸ್ವಯಂ 

ಪವನೋ ವಾ ವ್ರತಿರೂಪ ಆವ್ರಜನ್ ।

ಶ್ರುತಿನಾಥದಿಧೃಕ್ಷಯಾನ್ಯಥಾ ನ ಖಲು 

ಸ್ಯಾನ್ನಿಖಿಲಾಗ್ರ್ಯಲಕ್ಷ್ಮವಾನ್ ।। 

ಶ್ರುತಿನಾಥರಾದ ಶ್ರೀ ವೇದವ್ಯಾಸದೇವರನ್ನು ಕಾಣುವ ಬಯಕೆಯಿಂದ ಸ್ವತಃ ಚತುರ್ಮುಖ ಬ್ರಹ್ಮದೇವರೋ ಅಥವಾ ವಾಯುದೇವರೋ ಯತಿ ರೂಪದಿಂದ ಬರುತ್ತಿರುವಂತಿದೆ. 

ಇಲ್ಲವಾದಲ್ಲಿ ಹೀಗೆ ಸಕಲ ಲಕ್ಷಣಗಳನ್ನು ಹೊಂದಿರಲು ಸಾಧ್ಯವಿಲ್ಲ.

by Acharya Nagaraju Haveri, ಗುರು ವಿಜಯ ಪ್ರತಿಷ್ಠಾನ

*****


No comments:

Post a Comment