Saturday, 1 May 2021

ನಾನೇನು ನಿನಗಂದೆನೋ ಬಿಡದೆ ಪವಮಾನ ankita shyamasundara

 ರಾಗ : ಆನಂದಭೈರವಿ    ತಾಳ : ಅಟ್ಟ

 

ನಾನೇನು ನಿನಗಂದೆನೋ ಬಿಡದೆ । ಪವ ।

ಮಾನ ಪಾಲಿಸೋ ಎನ್ನನು ।। ಪಲ್ಲವಿ ।।


ದೀನರ ಪಾಲಿಪ 

ದಾನವಾಂತಕ ನಿನ್ನ ।

ಜ್ಞಾನಾನಂದದ ನಾಮ 

ಧ್ಯಾನವಗೈದೆನೋ ।। ಅ ಪ ।।


ಎರಡನೇ ಯುಗದಲ್ಲಿ 

ಶರಧಿ ಲಂಘಿಸಿ । ರಘು ।

ವರನ ಕುಶಲ ವಾರ್ತೆ 

ಧರಿಜಾತಗೆ ।

ಅರುಹಿ ದಶಾಶ್ಯನ 

ಪುರವ ದಹಿಸಿದಂಥ ।

ಪರಮ ಸಮರ್ಥನೆಂ-

ದರಿತು ಕೊಂಡಾಡಿದೆ ।

ತರುಚರವರನೆಂದೆನೇ 

ಪತ್ನಿಯ ಸುಖ - ।।

ವಿರಹಿತಾದವನೆಂದೆನೆ 

ಶಿರದಿ । ಕಲ್ಲು ।

ಧರಿಸಿ ತಂದವನೆಂದೆನೆ 

ಬ್ರಹ್ಮಾಸ್ತ್ರಕೆ ।

ಭರದಿ ಸಿಲ್ಕಿಡಿ 

ಯೆ೦ದೆನೆ ಭಕ್ತಿಲಿ । ಭಾವಿ ।

ಸರಸಿಜಾಸನನೆಂದು

ಸ್ಮರಿಸಿದೆನಲ್ಲದೆ ।। ಚರಣ ।।


ತೃತೀಯ ಯುಗಾದಿ 

ಕುಂತಿ ಸುತನಾಗಿ ಜನಿಸುತ ।

ರತಿಪಿತನಂಘ್ರಿ ಭಜಿಸುತಲಿ ।

ಕ್ಷಿತಿ ಭಾರ ಖಳತತಿಯ 

ಸಂಹರಿಸಿದಾ ।

ಪ್ರತಿಮಲ್ಲ ನೀನೆಂದು 

ಸ್ತುತಿಸಿದೆಬಲ್ಲದೇ ।

ಖತಿವಂತ ನೀನೆಂದೆನೆ 

ದನುಜಾತೆಗೆ ।।

ಪತಿಯಾದವನೆಂದೆನೆ 

ಅವಳ ಕೂಡಿ ।

ಸುತನ ಪೆತ್ತವನೆಂದೆನೆ 

ಯಾಮಿನಿಯಲ್ಲಿ ।

ಸತಿಯೆನಿಸಿದ ಎಂದೆನೆ 

ನಿನ್ನನು ಬಿಟ್ಟು ।

ಗತಿ ನಮಗಿಲ್ಲೆಂದು 

ಸ್ತುತಿಸಿದೆನಲ್ಲದೆ ।। ಚರಣ ।।


ನಡುಮನಿ ಸುತನಾಗಿ 

ಪೊಡವಿಯೊಳಗೆ ಪುಟ್ಟಿ ।

ಉಡುಪಿ ಕ್ಷೇತ್ರದಿ ಶ್ಯಾಮಸುಂದರನ ।

ದೃಢವಾಗಿ ಸ್ಥಾಪಿಸಿ 

ಜಡಕು ಮಾಯ್ಗಳ ಗೆದ್ದ ।

ಸಡಗರ ಮುನಿಯೆಂದು 

ನುಡಿದೆ ನಾನಲ್ಲದೆ - 

ಹುರಳಿಮೆದ್ದ ।

ಬಡ ದ್ವಿಜ ಶಿಶು 

ಎಂದೆನೆ ಎತ್ತಿನ ಬಲ ।।

ಹಿಡಿದೋಡಿದವನೆಂದೆನೇ 

ಬೇಸರದಿಂದ ।

ಮಡದಿ ಬಿಟ್ಟವನೆಂದೆನೇ 

ಕಡೆಗೆ । ಬೋರೆ ।

ಗಿಡವ ಸೇರಿದೆನೆಂದನೆ 

ಒಲಿದು ನಿನ್ನ ।

ಒಡೆಯನ ತೋರೆಂದು 

ಅಡಿಗಳಿಗೆರಗಿದೆ ।। ಚರಣ ।।

*****


ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

ಈ ಕೃತಿಯನ್ನು ಶ್ರೀ ಶ್ಯಾಮಸುಂದರದಾಸರು ಶ್ರೀ ಕ್ಷೇತ್ರ ಗಣಧಾಳದಲ್ಲಿ ರಚಿಸಿದ ಸರಳ ಸುಂದರವಾದ ಪುರಾಣ ಇತಿಹಾಸಗಳಿಂದ ಕೂಡಿದ ನಿಂದಾ ಸ್ತುತಿ ಮತ್ತು ಸ್ತೋತ್ರ ರೂಪವಾದ ಕೃತಿ. 

ಎರಡನೇ ಯುಗ = ತ್ರೇತಾಯುಗ 

ಧರೆಜಾತೆಗೆ = ಭೂ ಪುತ್ರಿಯಾದ ಶ್ರೀ ಸೀತಾದೇವಿಗೆ 

ತರುಚರ = ವೃಕ್ಷಗಳ ಮೇಲೆ ಸಂಚರಿಸುವ ಕಪಿಗಳು 

ತರುಚರವರ = ಕಪಿ ಶ್ರೇಷ್ಠರಾದ ಶ್ರೀ ಹನೂಮಂತದೇವರು 

" ಶಿರದಿ ಕಲ್ಲು "

ಸೇತು ನಿರ್ಮಾಣದ ಕಾರ್ಯದಲ್ಲಿ ಇತರ ಕಪಿಗಳೊಂದಿಗೆ ಸಮುದ್ರಕ್ಕೆ ಪರ್ವತದ ಕಲ್ಲುಗಳನ್ನು ಕಿತ್ತು ತಂದು ಹಾಕಿದ್ದು. 

" ಬ್ರಹ್ಮಾಸ್ತ್ರಕೆ "

ಇಂದ್ರಜಿತುವಿನಿಂದ ಪ್ರಯೋಗಿಸಲ್ಪಟ್ಟ ಬ್ರಹ್ಮಾಸ್ತ್ರಕ್ಕೆ ಸಿಲುಕಿದಂತೆ ಬಂಧನಕ್ಕೊಳಗಾದರು

ಭಾವಿ ಸರಸಿಜಾಸನ = ಭಾವಿ ಬ್ರಹ್ಮ ಪದವಿಗೆ ಬರುವ ಅಂದರೆ ಭಾವಿ ಬ್ರಹ್ಮದೇವರು  

ತೃತೀಯ ಯುಗದಿ = ದ್ವಾಪರದಲ್ಲಿ 

ರತಿ ಪತಿ ಪಿತ  = ರತಿ ಪತಿಯಾದ ಮನ್ಮಥನ ಜನಕನಾದ ಶ್ರೀ ಕೃಷ್ಣ ಪರಮಾತ್ಮ 

ಕ್ಷಿತಿ ಭಾರಕೆ = ಭೂಮಿಗೆ ಭಾರವಾದ 

ಖಳತತಿಯ = ದುಷ್ಟರಾದ ರಾಕ್ಷಸರ ಸಮೂಹ 

ಅಪ್ರತಿಮಲ್ಲ =ಅಸದೃಶ ಸಾಹಸವಂತ 

ಖತಿವಂತ = ಕೋಪಿಷ್ಠ 

ದನುಜಾತೆಗೆ = ರಾಕ್ಷಸರ ಕುಲದಲ್ಲಿ ಹುಟ್ಟಿದ ಹಿಡಂಬೆ 

ಸುತನ ಪೆತ್ತನೆಂದೆನೇ = ಹಿಡಂಬಾ ಮಗನಾದ ಘಟೋತ್ಕಚನನ್ನು ಪಡೆದವ ಎಂದೆನೆ 

" ಯಾಮಿನಿಯಲ್ಲಿ ಪತಿಯೆನಿಸಿದೆಯೆಂದನೆ "

ರಾತ್ರಿಯಲ್ಲಿ ಸ್ತ್ರೀ ರೂಪದಲ್ಲಿ ಕೀಚಕ ವಧೆ ಮಾಡಿದ ಪ್ರಸಂಗ 

ನಡುಮನಿ ಸುತನಾಗಿ = ಶ್ರೀ ಮಧ್ಯಗೇಹ ಭಟ್ಟರ ಮಗನಾಗಿ 

ಜಡ = ಹುರುಳಿಲ್ಲದ, ದುರ್ವಾದಿಗಳ ಮತ 

" ಮಡದಿ ಬಿಟ್ಟವ "

ಶ್ರೀ ಭಾರತೀದೇವಿಯಂಥಾ ಪತ್ನಿಯನ್ನು ಬಿಟ್ಟು ಯತ್ಯಾಶ್ರಮ ಧರಿಸಿದವರು 

" ಕಡೆಗೆ ಬೋರೆಗಿಡವ ಸೇರಿದಿ ಎಂದೆನೆ "

ಬೋರೆ ಗಿಡದ ಅಡಿಯಲ್ಲಿ ಕುಳಿತು ಉಪದೇಶ ಮಾಡುತ್ತಿರುವ ಶ್ರೀ ಕ್ಷೇತ್ರ ಬದರೀ ವಾಸ - ಜಗದೊಡೆಯನಾದ ಶ್ರೀ ವೇದವ್ಯಾಸದೇವರ ಸಮೀಪವನ್ನು ಸೇರಿದವರು ಶ್ರೀಮನ್ಮಧ್ವಾಚಾರ್ಯರು.

***

No comments:

Post a Comment