Monday, 24 May 2021

ಯಾಕೆಲೋ ರಂಗ ನಿನ್ನರಸಿಯೊಳು ಮುನಿದಿರುವೆ ankita mahipati

 ರಾಗ – : ತಾಳ – 


ಯಾಕೆಲೋ ರಂಗ l ನಿನ್ನರಸಿಯೊಳು ಮುನಿದಿರುವೆ l

ಲೋಕವೀರೇಳು ರಕ್ಷಿಪ ಮುದ್ದು ರಂಗಾ ll ಪ ll


ನಾಲ್ಕನೆಯ ಅವತಾರದಲಿ ಉಗ್ರವಾಗಿರೆ l

ಆ ಕಮಲಜ ಮುಖ್ಯ ಬೆದರುತಿರಲು l

ಲಕುಮಿ ತಾಕಂಡು ತೊಡೆಮೇಲೆ ಕುಳ್ಳಿರಲು l

ಈ ಲೋಕದೊಳು ಶಾಂತನೆನಿಸಿದಳೊ ನಿನ್ನರಸಿ ll 1 ll


ಗುಂಜೆಯಮಾಲೆ ಕೊರಳಿಗೆ ಹಾಕಿ ಗೋವಳರ l

ಎಂಜಲ ತಿನುತ ಗೋಗಳ ಕಾಯುತಿರಲು l

ಕಂಜನಯನೆಯು ಬಂದು ಸಕಲ ಶಿರಿಯಿಂದಲಿ l

ರಂಜಿಸಿದಳೊ ಜಗದೊಳಗೆ ನಿನ್ನ ಅರಸಿ ll 2 ll


ಇಂತರಿದು ನಾನಾಪರಿಯಿಂದ ನಿನ್ನ ಮೇಲೆ l

ಸಂತತ ಉಪಕಾರ ಮಾಡಿರೆ ನೀನು l

ಕಂತುಮಾತೆಯ ತಪ್ಪು ನೋಡುವರೇನೋ l ಆ-

ನಂತನೇ ಏಳು ಮಹಿಪತಿನಂದನೊಡೆಯಾ ll 3 ll

***


No comments:

Post a Comment