ಶ್ರೀ ಶ್ಯಾಮಸುಂದರದಾಸರ ಮತ್ತೊಬ್ಬ ಗುರುಗಳಾದ ಶ್ರೀ ಅಭಿಮನ್ಯುನ ಅವತಾರರಾದ ಶ್ರೀ ಅಸ್ಕಿಹಾಳ ಗೋವಿಂದದಾಸರು
ರಾಗ : ಮೋಹನ ತಾಳ : ತ್ರಿವಿಡಿ
ನಿಂದೆ ಯಾಕೆ ಮಾಡುವೆ ।
ಮಂದ ಮಾನವನೇ । ಗೋ ।
ವಿಂದದಾಸಾರ್ಯರನ್ನ ।।
ಎಂದೆಂದಿಗೀಮಾತು ।
ಇಂದಿರೇಶನ ಭಕುತ ।
ವೃಂದ ಮೆಚ್ಚುವುದಿಲ್ಲವೋ
ಮೂಢಾ ।। ಪಲ್ಲವಿ ।।
ಬಾಲಕತನದಾರಾಭ್ಯ ।
ಶೀಲ ಸದ್ಭಕ್ತಿಯಲಿ ।
ತಾಳ ತಂಬೂರಿ ಪಿಡಿದು ।
ಶ್ರೀಲೋಲ ಮಹಿಮೆಗಳ ।।
ಪೇಳುತಲಿ ಸತತ ।
ಗೋಪಾಲ ವೃತ್ತಿಯನು
ಮಾಡಿ ।
ಕಾಲವನು ಕಳೆದವರ ।। ಚರಣ ।।
ಕುಸುಮಶರ ವಟ್ಟುಳಿಗೆ ।
ವಶವಾಗದಿರಿಯೆಂದು ।
ಉಸುರುತಲಿ ಶಿಷ್ಯ ಗಣಕೆ ।
ಅಸುರಾರಿ ಮಹಿಮೆಯನು ।।
ರಸವತ್ಕವಿತೆಯಲಿಂದ ।
ನಿಶಿ ಹಗಲು ವರ್ಣಿಸಿದ ।
ಅಸಿಗ್ಯಾಳು ನಿಲಯರನ ।। ಚರಣ ।।
ಆಶೆ ಕ್ರೋಧವ ತೊರೆದು ।
ಕ್ಲೇಶ ಶುಭ ಸಮ ತಿಳಿದು ।
ಲೇಸಾಗಿ ಗುರು ಸೇವೆಗೈದು ।
ವಾಸವಾನುಜನಾದ ।।
ಶ್ರೀ ಶ್ಯಾಮಸುಂದರನ ।
ವಾಸ ಸ್ಥಾನಕೆ । ತೆರಳಿ ।
ದ ಸುಗುಣರನು ವ್ಯರ್ಥ ।। ಚರಣ ।।
****
ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ
ಶ್ರೀ ಜಗನ್ನಾಥದಾಸರನ್ನೇ ನಿತ್ಯದಲ್ಲೂ ನಂಬಿದ್ದ ಶ್ರೀ ಗುಂಡಾಚಾರ್ಯರು ರಾಯಚೂರು ಜಿಲ್ಲೆಯ " ಅಸ್ಕಿಹಾಳ " ಯೆಂಬ ಗ್ರಾಮಕ್ಕೆ ಬಂದರು.
ಅಲ್ಲಿ ಶ್ರೀ ಗೋವಿಂದದಾಸರೆಂಬ ಜ್ಞಾನಿಗಳಿದ್ದರು.
ಸಾತ್ವಿಕರಾದ ದೀನ ಜನರ ಉದ್ಧಾರಕಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟ ಧನ್ಯ ಜೀವಿಗಳು ಶ್ರೀ ಗೋವಿಂದದಾಸರು.
ನೂರಾರು ಹರಿಜನರನ್ನು ಸನ್ಮಾರ್ಗ ಪ್ರವೃತ್ತರನ್ನಾಗಿ ಮಾಡಿ ಅವರಿಗೆ ವೈಷ್ಣವ ದೀಕ್ಷೆಯನ್ನು ನೀಡಿ ಸಾಧನೆಯ ಮಾರ್ಗವನ್ನು ತೋರಿಸಿಕೊಟ್ಟ ಮಹಾನ್ ಕ್ರಾಂತಿ ಪುರುಷರು ಶ್ರೀ ಗೋವಿಂದದಾಸರು!
ಶ್ರೀ ದಾಸರ ಬೇಟೆಗಾಗಿ ಶ್ರೀ ಗುಂಡಾಚಾರ್ಯರು ಅವರ ಮನೆಗೆ ಬಂದರು.
ಶ್ರೀ ದಾಸರು ಸ್ನಾನಕ್ಕಾಗಿ ಬಾವಿಗೆ ಹೋಗಿರುವುದಾಗಿ ತಿಳಿದು ತಾವೂ ಬಾವಿಯ ಕಡೆಗೆ ಹೋದರು.
ತಮ್ಮ ಕಡೆಗೆ ಬರುತ್ತಿದ್ದ ಶ್ರೀ ಗುಂಡಾಚಾರ್ಯರನ್ನು ಕಂಡು ಶ್ರೀ ದಾಸರು ಕೋಪಗೊಂಡವರಂತೆ ಚಿಕ್ಕ ಕಲ್ಲನ್ನು ತೆಗೆದುಕೊಂಡು ಶ್ರೀ ಆಚಾರ್ಯರ ಮೇಲೆ ಎಸೆದರು.
ಅದು ಅವರ ತಲೆಗೆ ಬಡೆದು ಗಾಯವಾಗಿ ರಕ್ತ ಸುರಿಯಿತು.
ಶ್ರೀ ಗೋವಿಂದದಾಸರು ಮಮತೆಯಿಂದ ರಕ್ತವನ್ನು ಒರೆಸಿ ಶ್ರೀ ಆಚಾರ್ಯರ ಬೆನ್ನನ್ನು ಸವರಿದರು.
ಶ್ರೀ ಗುಂಡಾಚಾರ್ಯರ ತಲೆಯಿಂದ ರಕ್ತದೊಟ್ಟಿಗೆ ಉಳಿದ ಅಲ್ಪಸ್ವಲ್ಪ ಅಜ್ಞಾನವೂ ಹೊರಟು ಹೋಯಿತು.
ಶ್ರೀ ದಾಸರ ಅನುಗ್ರಹವೂ ಆಯಿತು.
ಜ್ಞಾನಿಗಳ ಕೋಪ ತಾಪಗಳು ಸಹ ಜನರ ಉದ್ಧಾರಕ್ಕೆ ಕಾರಣವಾಗುತ್ತದೆ.
ವಿಶ್ವಾಮಿತ್ರನ ಕೋಪ ಹರಿಶ್ಚಂದ್ರನಿಗೆ ಶಾಶ್ವತವಾದ ಕೀರ್ತಿಯನ್ನು ತಂದು ಕೊಟ್ಟಿತು.
ಕೊನೆಗೆ ಎಲ್ಲಾ ದೇವತೆಗಳ ಅನುಗ್ರಹವೂ ಅಭ್ಯವಾಯಿತು.
ಇಂದು ಸತ್ಯಕ್ಕೆ ಹರಿಶ್ಚಂದ್ರನು ಉದಾಹರಣೆಯಾಗಿದ್ದಾನೆ.
ಶ್ರೀ ಗೋವಿಂದದಾಸರ ನಾಟಕೀಯ ಕೋಪವು ಶ್ರೀ ಗುಂಡಾಚಾರ್ಯರ ಅಪೂರ್ವ ಜ್ಞಾನದ ಉದಯಕ್ಕೆ ಕಾರಣವಾಯಿತು.
ಅಂದಿನಿಂದ ಶ್ರೀ ಗುಂಡಾಚಾರ್ಯರ ಸರ್ವ ಕಾರ್ಯ ಕಲಾಪಗಳು ಭಗವಂತನಿಗೆ ಮೀಸಲಾಯಿತು.
****
No comments:
Post a Comment