Audio by Mrs. Nandini Sripad
ಶ್ರೀಗೋಪಾಲದಾಸಾರ್ಯ ವಿರಚಿತ
ಹರಿಸ್ವತಂತ್ರ ಸುಳಾದಿ
(ಸಕಲವೂ ಅನಿತ್ಯ , ಅಸಾರ . ಡೊಂಬನ ಗೂಡಿನಂತೆ ಇರುವುದನ್ನು ನಂಬಬೇಡ. ಸಕಲವೂ ಹರಿಯಾಧೀನವೆಂದು ಚಿಂತಿಸು. )
ರಾಗ ಮಧ್ಯಮಾವತಿ
ಧ್ರುವತಾಳ
ಎಲ್ಲೆ ಗೇಹ ಎಲ್ಲೆದೈಯ್ಯಾ ವೃತ್ತಿ ಕ್ಷೇತ್ರ
ಎಲ್ಲೆದಯ್ಯಾ ಗ್ರಾಮ ಸ್ಥಳವು ಎಲ್ಲೆದಯ್ಯಾ ದೇಶವಾಸ
ಎಲ್ಲೆದಯ್ಯಾ ಧನವು ಧಾನ್ಯ ಎಲ್ಲೆದಯ್ಯಾ ಸತಿಯು ಸುತರು
ಎಲ್ಲೆದಯ್ಯಾ ವಸನ ಪಶುವು ಎಲ್ಲೆದಯ್ಯಾ ಬಂಧು ಬಳಗ
ಎಲ್ಲೆದಯ್ಯಾ ಒಡವಿಗಳು ಎಲ್ಲೆದಯ್ಯಾ ಕರಿ ಊಷ್ಟ್ರಗಳು
ಎಲ್ಲೆದಯ್ಯಾ ಆಳು ವೇಳ್ಯಾ ಎಲ್ಲೆದಯ್ಯಾ ಕೂಪ ತಟಾಕ
ಎಲ್ಲೆದಯ್ಯಾ ಸಿಲಿ ವೃಕ್ಷಗಳು ಎಲ್ಲೆದಯ್ಯಾ ಮುತ್ತು ಮಾಣಿಕ್ಯಾ
ನಿಲ್ಲದೆ ಪೋಗೊ ನೀರ ಗುಳ್ಳಿಯಂತೆ ದೇಹಕ್ಕೆ
ಇಲ್ಲದ ಕರ್ತೃತ್ವ ಇನ್ನೆಲ್ಲಿಂದ ಪಚ್ಚಿಕೊಂಬಿ
ಸಲ್ಲದು ನಿನಗೀ ವಾಕು ಎಲ್ಲಿ ಪೋದರು ಅನ್ಯ
ಗೆಲ್ಲಲಾರಿಯೊ ಜೀವ ಬಲ್ಲವಿಕೆಲ್ಲ ನಿನಗೆ
ಎಲ್ಲ ನನ್ನದೆಂಬೋದು ಒಳಿತಲ್ಲವೊ ನಿನಗೆ
ನಿಲ್ಲಿಸಿ ನಿನ್ನ ಮುಂದೆ ಎಲ್ಲವು ಹೋಹಾಗಲಿ
ಕಲ್ಲು ಹೊಡೆದಂತೆ ನೀ ಮೆಲ್ಲನೆ ನೋಡುತಿಪ್ಪೆ
ನಿಲ್ಲದೆ ನೀನು ಬಿಟ್ಟು ಚಲ್ಲಿ ಹೋಗುವಾಗಲಿ
ಹುಲ್ಲು ಕಡ್ಡಿಯನ್ನು ನೀ ಬಾಯಲ್ಲಿ ಕೊಂಡು ಹೋಗುವ್ಯಾ
ಎಲ್ಲ ರೂಪದಲ್ಲಿ ಶ್ರೀವಲ್ಲಭ
ಅಲ್ಲಲ್ಲಿ ತಾನೆ ಇದ್ದು ಜೀವನೆಲ್ಲರ ಪಾಲಿಸಿನ್ನು
ಗುಲ್ಲು ಎಬ್ಬಿಸಿ ಪ್ರಳಯದಲ್ಲಿ ಎಲ್ಲರ ನುಂಗೊ
ಬಲ್ಲಿದ ರಂಗ ನಮಗೆಲ್ಲರಿಗೊಡಿಯ ಕಾಣೊ
ಮಲ್ಲಮರ್ದನ ರಂಗ ಗೋಪಾಲವಿಟ್ಠಲ ತಾ
ಬಲ್ಲದೆ ಮಾಡಿದವ ಎಲ್ಲ ಕಾಲದಲಿನ್ನು ॥ 1 ॥
ಮಟ್ಟತಾಳ
ಖಣದ ವೊಳಗೆ ಧಾನ್ಯ ವಣಗ ಹಾಕಿದರೆ
ಮನಿಗೆ ತರಲಾಗಿ ಖಣದಲಿ ಉಳಿದವೆಷ್ಟು
ವನಕಿಯಿಂದಲಿ ಧಾನ್ಯ ಘನವಾಗಿ ಕುಟ್ಟಿದರೆ
ವನಕಿ ನುಂಗಿದವೆಷ್ಟು ಅನವರಿತು ನೋಡಿ
ಶುಣಕಗೆ ಪುಷ್ಕರಣಿ ಮಲ್ಕರ್ಣಿ ಇರಲು
ದಣಿ ಕುಡುವದೆ ಉದಕ ಕೊನೆ ನಾಲಿಗಿಯಲ್ಲದೆ
ಮಣಕಕೆ ಸೇರು ತುಪ್ಪ ಮನಿಯೊಳಗಾದರೆ
ಮಣಕಕೆ ಬಂದದೇನು ಮಡಿಯ ಮಾತ್ರ
ಕನಸಿನೊಳಗೆ ಹಣವು ಕಂಡ್ಹಾಗೆ ಕೊಟ್ಟರೆ
ಎಣಿಸಿ ಕೊಡಬಲ್ಲ್ಯಾ ಋಣದವ ಬೇಡಿದರೆ
ಮುನಸು ಗುಟ್ಟಿದವನ ಮುದ್ದಾಡಿದರಿನ್ನು
ಮನಸಿಗೆ ಹರುಷತ್ವ ಮದಡ ಜೇವವೆ ಕೇಳು
ಧನ ತೂಗೋ ತಕ್ಕಡಿ ಮನೆಯೊಳಗಿರಲಿಕ್ಕೆ
ಧನ ಹೋದರೆ ತಕ್ಕಡಿನ್ನ ಕೇಳೊರುಂಟೆ
ಗುಣಹೀನ ಜೀವ ನಿನಗೆ ಅಲ್ಲದವೆಲ್ಲ ನನಗೆ
ನನ್ನದೆಂಬೋದೆನಿತು ನೀತಿಯ ಕಾಣೋ
ಸನಕಾದಿಗಳೊಡೆಯ ಗೋಪಾಲವಿಟ್ಠಲನ್ನ
ಅನುವಾಗಿ ನೀ ತಿಳಿದು ಗುಣ ಉಪಾಸನೆ ಮಾಡು ॥ 2 ॥
ತ್ರಿವಿಡಿತಾಳ
ಆರಿಗೆ ವಶವಲ್ಲದ ಲೆಂಕಿಯ ಕಟ್ಟಿದ
ಧೀರರಾದಂಥ ಸುರರಿಂದ ಪೂಜೆಯಗೊಂಡ
ಆ ರಾವಣನನು ಕಡಿಗೆ ಆದ ತೆರನು ನೋಡು
ಆರಾದರು ಅವಗೆ ಆಯುಷ್ಯವಿತ್ತರೆ
ಆರಿಂದ ಮರಣವು ಆಗಲಿಕ್ಕಿಲ್ಲವೆಂದು
ಆ ರುದ್ರನಿಂದ ವರವನು ಪಡಿದಿದ್ದಂಥ
ಆ ರಕ್ಕಸ ಹಿರಣ್ಯಕರಾದರುಳಹಿದರೆ
ಆರಿಗೆ ಆರಿಲ್ಲ ಹಾರದಿರಲೊ ಬರಿದೆ
ಕ್ರೂರ ಕಂಸನ ನೋಡು ದುರಿಯೋಧನರ ನೋಡು
ಆರು ಇವರಿಗೆ ತನ್ನವರು ಇದ್ದಿಲ್ಲವೇ
ದೂರು ಮಾತ್ರವೆ ತನ್ನವರು ತನ್ನದೆಂಬೋದು
ಆರಿಗಾರಿಲ್ಲ ವಿಚಾರವ ಮಾಡಲು
ಮೂರು ದಿನದ ಭಾಗ್ಯ ಸ್ಥಿರವೆಂದು ನಂಬಿ ನೀ
ಕಾರಣ ಕರ್ತನ ಮರಿಯದಿರು
ಸೇರು ಈತನ ವರ ದ್ವಾರದ ಬಳಿಯಲ್ಲಿ
ಕಾರುಣ್ಯದಿ ಪಾಲಿಸುವ ಕರುಣಾಕರ ರಂಗ
ಮಾರಜನಕ ಚಲುವ ಗೋಪಾಲವಿಟ್ಠಲನ್ನ
ಆರು ಮೂರು ಭಕ್ತಿಲಿ ಬಾರಿ ಬಾರಿಗೆ ಸ್ಮರಿಸೊ ॥ 3 ॥
ಅಟ್ಟತಾಳ
ನಷ್ಟವೆಂಬೊದು ನನ್ನದೆಂಬೊದು ಬಲು ನಷ್ಟ
ಇಷ್ಟರೊಳಗೆ ಕೃಷ್ಣ ನೀನೆ ಎಂಬೋದು
ನಿಷ್ಠ ಕಷ್ಟದೊಳಗೆ ಪುನಃ ಹುಟ್ಟಿ ಹೋಹೋದೆ ಕಷ್ಟ
ನಿಷ್ಠೆಯೊಳಗೆ ಹರಿಸ್ಮರಣೆ ಮಾಡೋದೆ ನಿಷ್ಟಾ
ಅಷ್ಟ ಕರ್ತೃತ್ವವು ಶ್ರೀಹರಿಯ ಅಧೀನವೆಂದು
ಭ್ರಷ್ಟ ಸಂಸಾರವು ದಾಟುವವನೆ ಧಿಟ್ಟ
ಸೃಷ್ಟಿಗೊಡಿಯನಾದ ಗೋಪಾಲವಿಟ್ಠಲ
ಮುಟ್ಟಿ ಪೂಜಿಸುವರ ಬಿಟ್ಟೆನೆಂದರು ಬಿಡ ॥ 4 ॥
ಆದಿತಾಳ
ಧರಿಯೊಳು ಇದ್ದಂಥ ಈ ಪರಿಪರಿ ಪದಾರ್ಥ
ಹರಿಯಿಂದ ನಿರ್ಮಿತಕರವಾದವು ಎಲ್ಲ
ಅರಿದು ನೋಡಿ ಇನ್ನು ಕರಕರೆಗಳು ಬಿಟ್ಟು
ಕರಣ ಶುದ್ಧಿಯಲಿನ್ನು ಕರವಡ್ಡಿ ಕೊಂಡು ನಿಂದು
ವರ ಉದಕದಲಿಂದ ಹರಿಗರ್ಪಿತವೆಂದು
ಹರುಷದಲಿ ತಿನ್ನು ಸ್ಥಿರ ಪದವಿರ ಪಡಿ
ಬರಿದೆ ನನ್ನದು ಎಂಬೊ ಮರುಳ ಕರ್ತೃತ್ವವ
ಮರದು ದುರ್ವೃತ್ತಿಯ ತೊರೆದು ಲೌಕಿಕವ
ಕರುಣಾಕರ ರಂಗ ಗೋಪಾಲವಿಟ್ಠಲನ್ನ
ಶರಣರ ಮರೆಬಿದ್ದು ನೆರೆ ಬದುಕನುಗಾಲಾ ॥ 5 ॥
ಜತೆ
ಡೊಂಬನ ಗೂಡಿನಂತೆ ನಂಬದೀರೀ ದೇಹ
ನಂಬು ಗೋಪಾಲವಿಟ್ಠಲನಂಬುಜ ಚರಣ ॥
********
No comments:
Post a Comment