Friday, 8 January 2021

ಶ್ರೀಪತಿಯೆ ಎನ್ನ gurushreesha vittala ankita suladi ಹರಿ ಪ್ರಾರ್ಥನಾ ಸುಳಾದಿ SRIPATIYE ENNA HARI PRARTHANA SULADI

Audio by Mrs. Nandini Sripad


 

ಶ್ರೀ ಗುರುಶ್ರೀಶವಿಠಲ ದಾಸಾರ್ಯ ವಿರಚಿತ ಶ್ರೀಹರಿಯ ಪ್ರಾರ್ಥನಾ ಸುಳಾದಿ 


 ರಾಗ ರೀತಿಗೌಳ 


 ಧ್ರುವತಾಳ 


ಶ್ರೀಪತಿಯೆ ಎನ್ನ ಆಪನಿತು ನಾ ಬೇಡುವೆ 

ನೀ ಪಾಲಿಸಬೇಕು ಎನ್ನ ಮಾತು

ಗೋಪಿಜನಜಾರ ಗೋಪಾಲ ಗೋವಿಂದ

ಗೋಪತಿ ಪೂಜ್ಯಪಾದ ಗೋಕುಲದರಸೆ

ಶ್ರೀಪುರುಷೋತ್ತಮ ಬೊಮ್ಮಾದಿ ತೃಣಾಂತ

ಆ ಪುರುಷರ ಪಾದಸ್ಮರಣೆಯನ್ನು

ಸ್ತ್ರೀಪುರುಷರ ತಾರತಮ್ಯ ತತ್ವೇಶರ ಸ್ವ -

ರೂಪ ಸಾಂಶ ಅಂಶ ವಿಹೀನರ

ಈ ಪರಿ ದೇಹದಲ್ಲಿ ಪ್ರೇರಕರಾದವರ 

ವ್ಯಾಪಕರಾಗಿ ನಿನ್ನ ಸೇವಿಪರ

ಪಾಪರಹಿತರಾಗಿ ಧರಿಯಲ್ಲಿ ಪುಟ್ಟಿ ಸ್ವ -

ರೂಪ ವ್ಯಕ್ತ ಅವ್ಯಕ್ತರಾದವರ

ವ್ಯಾಪಕನಾದ ನಿನ್ನ ರೂಪ ತಿಳಿದು ಸರ್ವ -

ವ್ಯಾಪಾರ ಆನಂದದಿ ತುತಿಸುವರ

ಶ್ರೀಪರಮಾತ್ಮನೆ ಇಂತಿಪ್ಪ ಭಕುತರ

ನಾ ಪಾಡಿ ಪೊಗಳುವಂತೆ ಜ್ಞಾನವಿತ್ತು

ನೀ ಪೋಷಿಸಯ್ಯಾ ಅವರಲ್ಲಿ ನಿಂತು ಎನ್ನ

ಆ ಪಾರಾಂಬುಧಿ ಸಂಸಾರದಿಂದ

ನೀ ಪಾರು ಮಾಡಿಸಿ ನಿನ್ನವರೊಳಗಿಟ್ಟು

ಭೂಪತಿ ನಿನ್ನ ದಿವ್ಯ ರೂಪ ತೋರೊ

ಉಪಾಯ ಕಾಣೆನೋ ಇವರ ಬಿಟ್ಟು ಏ -

ಸುಪಾಯ ಮಾಡಿನೋಡೆ ಸುಜ್ಞಾನಕ್ಕೆ

ಆಪಗಾದಿ ತೀರ್ಥಸ್ನಾನ ಕ್ಷೇತ್ರಗಳ ಯಾತ್ರಿ

ಆಪರಿಮಿತ ಸತ್ಕರ್ಮಂಗಳು

ಸೋಪಾನವಿಲ್ಲದ ಗೋಪುರ ಏರಿದಂತೆ

ತಾ ಪರಿಹರಿಸುವವೆ ಜನ್ಮಗಳ

ವಿಪಗಮನ ಗುರುಶ್ರೀಶವಿಟ್ಠಲನೆ ಬಿ -

ನ್ನಪ ಲಾಲಿಸು ಸುಜನ ಸಂಗವೀಯೊ ॥ 1 ॥ 


 ಮಟ್ಟತಾಳ 


ಹರಿದಾಸರ ಸ್ಮರಣಿ ದುರಿತವು ಪರಿಹಾರ

ದರುಶನವೇ ಸಕಲ ತೀರ್ಥಕ್ಷೇತ್ರ ಯಾತ್ರೆ

ವರಪಾದ ಪ್ರಕ್ಷಾಲನ ಜಲಮಾರ್ಜನವು

ಸುರನದಿ ಮೊದಲಾದ ಸಕಲತೀರ್ಥ ಸ್ನಾನ

ಅರಲವ ಸಂಭಾಷಣ ಪರತತ್ವಬೋಧ

ಶಿರಬಾಗಿ ವಂದನ ತ್ರಯತಾಪವು ದೂರ

ಹರುಷದಿಂದಲಿ ಅವರ ಅರ್ಚಿನಿ ಹರಿಪೂಜಿ

ಸುರಸ ಭೋಜನ ಮಾಡಿಸೆ ಶ್ರೀಹರಿನೈವೇದ್ಯ

ಪರಿಪರಿವಿನ ಯಾದರ ಶ್ರೀಪತಿಗೆ ಆರುತಿ

ಸರಸ ಮಾತುಗಳೆಲ್ಲಾ ಹರಿಮೂರ್ತಿಗಳಿವರು

ಕುರುಹು ಬಲ್ಲವರಿಗೆ ದೊರಕರು ಅನ್ಯರಿಗೆ

 ಗುರುಶ್ರೀಶವಿಠಲ ಇವರ ಸೇವಿಯೊಳಿರಿಸೊ ॥ 2 ॥ 


 ತ್ರಿವಿಡಿತಾಳ 


ಜ್ಞಾನವಿಲ್ಲದ ಸ್ನಾನ ದಾನ ಯಜ್ಞಂಗಳಿಗೆ

ಶ್ರೀನಿವಾಸನು ಪ್ರೀತನಲ್ಲವೆಂದು

ಅನಂತ ಶ್ರುತಿ ಸ್ಮೃತಿ ವಾಕ್ಯಗಳು ಇಹವೆಂದು

ಜ್ಞಾನಿಗಳು ತಿಳಿದು ಪೇಳುವರು

ದೀನರಿಂದಲೆ ಜ್ಞಾನಭಕುತಿವೈರಾಗ್ಯ ಭಾಗ್ಯ

ಈ ನುಡಿಗಳು ಶಾಸ್ತ್ರ ಸಮ್ಮತವು

ಆನಾದಿಯಿಂದಲಿ ಹೀಗೆ ಇದ್ದದರಿಂದ

ನಾನು ಬೇಡುವೆ ನಿನ್ನವರ ಅನುಗ್ರಹವು

ಶ್ರೀನಾಥ ನೀ ದಯಮಾಡಬೇಕಲ್ಲದೆ

ನಾನ್ಯಾತರವನಲ್ಲ ಗುರುಶ್ರೀಶವಿಟ್ಠಲ ॥ 3 ॥ 


 ಅಟ್ಟತಾಳ 


ನಾರದರಿಂದ ಪ್ರಲ್ಹಾದಗೆ ಬೋಧ ಶ್ರೀ -

ನಾರಸಿಂಹ ನಿನ್ನ ಕರುಣಾ ದರುಶನವು

ಆರಿಂದ ವಾಲ್ಮೀಕಿ ಋಷಿ ಎನಿಸಿದನಯ್ಯಾ

ಆ ರಹುಗಣರಾಯ ಗುರುಪದೇಶ ಆದಾರಿಂದ

ಆರಣ್ಯಕೆ ಪೋದ ಧ್ರುವಗೆ ಸಂಪದ ಹ್ಯಾಗೆ

ಆರು ವರಣಿಪರಯ್ಯಾ ಅನಂತ ಭಕ್ತರ

ಮಾರಾರಿ ಮೊದಲಾದ ದೇವತೆಗಳಿಗೆಲ್ಲ

ಭಾರತಿಪತಿಯಿಂದ ಗತಿಯೆಂದ ಮ್ಯಾಲಿನ್ನು

ಭಾರಿ ಭಾರಿಗೆ ಪೇಳಲೇನು ಶ್ರೀಕೃಷ್ಣಯ್ಯಾ

ತಾರಕರು ಇವರೇ ಇದೆ ನಿನ್ನ ಸಂಕಲ್ಪ

ಮಾರಮಣನೆ ನಿನಗಿಂತ ನಿನ್ನವರಲಿ ಅ -

ಪಾರ ಭಕ್ತಿಯ ಕೊಡು ಗುರುಶ್ರೀಶವಿಟ್ಠಲ ॥ 4 ॥ 


 ಆದಿತಾಳ 


ವಿದ್ಯ ಶ್ರೀಪ್ರಾಣದೇವರಿಂದಲಿ

ಬುದ್ಧಿ ಬ್ರಹ್ಮನ ರಾಣಿಯಿಂದಲಿ

ಶುದ್ಧಭಕುತಿ ಭಾರತಿಯಿಂದ

ರುದ್ರನಿಂದಲಿ ಮನವು ಎರಗಲಿಬೇಕು

ಮುದ್ದು ಕೃಷ್ಣಯ್ಯಾ ತತ್ವಗಳಲ್ಲಿ

ಇದ್ದು ಈವರವೆ ಸಲಹಬೇಕು ಎನ್ನ

ಮಧ್ವಪತಿ ಗುರುಶ್ರೀಶವಿಠಲ 

ಉದ್ಧರಿಸಬೇಕು ನಿನ್ನವರಿಂದಲಿ ॥ 5 ॥ 


 ಜತೆ 


ಹರಿ ನಿನ್ನ ದಾಸರ ದಾಸನೆಂದೆನಿಸೆನ್ನ

 ಗುರುಶ್ರೀಶವಿಠಲ ಮರೆಯಾದೆ ಸಲಹೊ ॥



 ಶ್ರೀ ಗುರುಶ್ರೀಶವಿಟ್ಠಲದಾಸರ ಕಿರುಪರಿಚಯ : 


ರಾಯಚೂರು ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ಗ್ರಾಮದಲ್ಲಿ ಜನಿಸಿದ ಶ್ರೀನರಸಿಂಹದಾಸರು , ಶ್ರೀಜಗನ್ನಾಥದಾಸರಲ್ಲಿ 12 ವರ್ಷ ಶಿಷ್ಯತ್ವ ವಹಿಸಿ ಅವರನ್ನು ಸೇವಿಸಿದರು. ಗುರುಗಳು ಅನುಗ್ರಹಿಸಿ , ಅವರ ಆಜ್ಞೆಯ ಪ್ರಕಾರ ಶ್ರೀ ಶ್ರೀಶವಿಠಲಾಂಕಿತ ಹುಂಡೇಕಾರ ದಾಸರಿಂದ  " ಗುರುಶ್ರೀಶವಿಠಲ " ಎಂಬ ಅಂಕಿತ ಪಡೆದರು. ಗಂಗಾವತಿ ತಾಲೂಕಿನ ಕುಂಟೋಜಿ ಎಂಬ ಗ್ರಾಮದಲ್ಲಿ ಇದ್ದುದರಿಂದ ಇವರಿಗೆ ಕುಂಟೋಜಿ ದಾಸರೆಂದೂ ಕರೆಯುವರು. ಇವರು 6 ಸುಳಾದಿಗಳನ್ನು ರಚಿಸಿದ್ದಾರೆ. ಸಂಖ್ಯೆ ಕಡಿಮೆಯಾದರೂ ಅಸಂಖ್ಯ ಅಂತಃಶಕ್ತಿ ಈ ಸುಳಾದಿಗಳಲ್ಲಿ ಅಡಗಿದೆ.

ಶ್ರೀ ಗುರುಶ್ರೀಶವಿಟ್ಠಲದಾಸರಿಂದ ರಚಿತವಾದ ಶ್ರೀಗುರುರಾಜರ ಸ್ತೋತ್ರಪದ " ಬಾರೊ ಗುರುರಾಘವೇಂದ್ರ " ಮತ್ತು ಶ್ರೀಶ್ರೀನಿವಾಸ ದೇವರ ನಕ್ಷತ್ರಮಾಲಿಕಾ " ಸ್ತುತಿರತ್ನಮಾಲಾ - ಶ್ರೀನಿವಾಸ ದಯಾನಿಧೆ " ಎಂಬ ಪದ ಅಬಾಲ ವೃದ್ಧರಿಗೂ ಪರಿಚಿತವಾದುದು.

*******


No comments:

Post a Comment