Sunday, 17 January 2021

ಆವ ಕರ್ಮಗಳಿನ್ನು gopala vittala ankita suladi ಪ್ರಮೇಯ ಸುಳಾದಿ AVA KARMAGALINNU PRAMEYA SULADI

 

Audio by Mrs. Nandini Sripad


ಶ್ರೀ ಗೋಪಾಲದಾಸಾರ್ಯ ವಿರಚಿತ   ಪ್ರಮೇಯ ಸುಳಾದಿ 


 ರಾಗ ದರ್ಬಾರಿಕಾನಡ 


 ಧ್ರುವತಾಳ 


ಆವ ಕರ್ಮಗಳಿನ್ನು ಆವ ಧರ್ಮಗಳಿನ್ನು

ಆವ ತೀರ್ಥಯಾತ್ರೆಯು ಆವಾವ ವ್ರತಂಗಳು

ಆವಾವ ಸಜ್ಜನರ ಸಹವಾಸಂಗಳು ಎಲ್ಲ

ಆವಾವ ವೇದಶಾಸ್ತ್ರ ದೇವಾರ್ಚನೆಗಳೆಲ್ಲ

ದೇವ ನಿನ್ನ ಒಲಿಸುವ ಉಪಾಯಂಗಳು

ಆವಾವ ಪರಿ ಸಾಧನಂಗಳು ಎನ್ನು

ಈ ವಿಧ ಸಾಧನಗಳಿನ್ನು ತಾ ವೊಪ್ಪಿಸೀಗಾ ಸಾಧನವ ಪೋಗಲಾಡಿಸಿತೊ

ನಾ ಒಂದರಿಯಾದಾದೆ , ದೇವ ದೇವಾ

ಗೋವು ಕರದು ಪಾಲು ಹಾವಿಗೆರದಂತೆ

ಸಾವಿರ ಬಗೆ ಸಾಧನಂಗಳು ಎಲ್ಲ

ಈ ಉದ್ಧಾರಕ್ಕುಪಾಯವ ದಾವದಯ್ಯಾ

ನೀ ಒಲಿವ ಬಗೆ ಇನ್ನಾವದು ನಾನರಿಯೆ

ಭೂವಲ್ಲಭ ನಮ್ಮ ಗೋಪಾಲವಿಟ್ಠಲರೇಯಾ 

ಭಾವ ಶುದ್ಧದಿ ನಿನ್ನ ಸೇವಿಸದೆ ॥ 1 ॥ 


 ಮಟ್ಟತಾಳ 


ಮನವು ಧನದಲ್ಲಿಟ್ಟು ಎಣಿಸಲು ಜೀವಂಗಳು

ಹಣವೆಣಿಕೆಲ್ಲದೆ ನಿನ್ನ ಎಣಿಸಲಿಲ್ಲ

ನೊಣನು ಅನ್ನದಲಿಟ್ಟು ಉಣಕಲಿತರೆ ಇನ್ನು

ಗುಣ ಕೊಡಬಲ್ಲದೆ ದಣಿಸದೆ ಬಿಡತನಕ

ಮನುಜ ಜಡ ನಾನು ಕುಣಿಯ ಕಾಣದೆ ಬಿದ್ದು

ಎಣಿಸುತಲಿದ್ದಂತೆ ಧನದ ವ್ಯಾಕುಲವಯ್ಯಾ

ಮಣಿ ಕಾಂಚನ ಮೃಣ್ಮಯ ಸಮವೆಂದು

ಮನದೊಳು ಮಾಡದೆ ಮನಸಿಜನಯ್ಯನೆ

ಎನಗೆ ನೀನೊಲಿಯೆ ಬೋಧೆನಿತ್ತು ಇನಿತು ಕಾಣೆ

ನಿನಗೆ ನೀನೆ ಬಲ್ಲಿ ಎನಗಾವ ಸಾಧನೆಯ

ಕೊನೆ ಮೊದಲು ಕಾಣೆ ಗುಣಪೂರ್ಣ ಕಾಮನೆ

ಫಣಿಶಾಯಿ ನಮ್ಮ ಗೋಪಾಲವಿಟ್ಠಲ 

ತನುಮನದೊಡಿಯ ಅನುವರಿತು ಪೊರಿಯೊ ॥ 2 ॥ 


 ತ್ರಿವಿಡಿತಾಳ 


ವಿಷಯಂಗಳೆಲ್ಲ ಇನ್ನು ವಿಷವೆಂದರಿದು ದು -

ರ್ವಿಷಯಕ್ಕೆರಗುವೆನೊ ದೆಶೆಗೆಟ್ಟು ಬರಿದೆ

ಹಸಿದು ಹೋಗಿ ಇನ್ನು ಅಸುರತನದಲೀಗ

ನಸುಗುಂದಿ ಕಾಯಿಯ ಮಸಳಿ ಮೆದ್ದರೆ

ತೃಷಿ ಹೋಗಬಲ್ಲದೆ ರಸ ಉಣ್ಣದನಕ

ಹಸಿಯ ವಸ್ತ್ರವ ವೈದು ಕೆಸರೊಳು ತುಳಿದರೆ

ಹಸನಾಗ ಬಲ್ಲದೆ ವಸನ ವೇಗ

ಬಿಸಜಾಕ್ಷ ನಿನ್ನ ಕರುಣರಸವೆಂಬ ಮಡುವಿನೊಳು ಶಾರೀರ ತೋಯಿದು 

ಬಿಸಜ ಚರಣವ ತೋರೊ

ಕಸವ ಕಿತ್ತಿಯು ಕಾಮಕ್ರೋಧಂಗಳೆಲ್ಲ

ಉಸರಿದೆ ನಿನಗೆ ನಾ ಅಸುರಮರ್ದನ ರಂಗ

ವಸುದೇವಸುತ ನಮ್ಮ ಗೋಪಾಲವಿಟ್ಠಲ 

ವಿಷಯದಾಸಿಗೆ ಮನ ವಶ ಮಾಡದಿರೊ ॥ 3 ॥ 


 ಅಟ್ಟತಾಳ 


ಮಾಡದೆ ಭಕುತಿಯ ಬೇಡದೆ ಮುಕುತಿಯ

ನೀಡ ಬಲ್ಲೆಯೊ ದೇವ ನೋಡವರ ಪುಣ್ಯ

ಕಾಡಿಗಿ ಮಸಿ ಕನ್ನಡಿಗೆ ಪೂಸಿ ಇನ್ನು

ನೋಡಲು ಮೊಗವನ್ನು ಪಾಡಾಗಿ ತೋರೋದೆ

ಗಾಡಿಕಾರನು ತನ್ನೊಡಲಾಶಗೆ

ನಾಡೊಳಗಿಲ್ಲದಾಟಾಡಿ ಜನ ಮರುಳು -

ಮಾಡಿ ಧನವನ್ನು ಕೂಡಿಸಿದಂದದಿ

ಆಡಿ ಪಾಡಿ ಹರಿದಾಸನೆಂದು ಜನರ

ಬೇಡುವದಕೆ ದ್ರವ್ಯ ಮಾಡುವೆ ಭಕುತಿಯ

ನೋಡುವಂತೆ ಜನರು ರೂಢಿಯೊಳೆನ್ನಂಥ

ಮೂಢನಿಲ್ಲೆಲೋ ದೇವ ಈಡಾರೊ ಎನಗಿನ್ನು

ಮಾಡೆ ಮನದವಗೆ ಮಾಡಲೆಂತೊ ಕೃಪೆ

ಬಾಡಿಗಿ ಮನೆ ದೇಹ ಬಿಡಾರ ಸ್ಥಿರವಲ್ಲ

ನಾಡ ದೈವರಗಂಡ ಗೋಪಾಲವಿಟ್ಠಲ 

ಗೋಡಿ ಮರಿಯ ಭಕ್ತಿ ಮಾಡಿದರೊಲಿಮೆಯಿಲ್ಲ ॥ 4 ॥ 


 ಆದಿತಾಳ 


ಇಷ್ಟು ನಾನಾಪರಿ ಚಿನ್ನ ಅಲಂಕಾರ

ಉಟ್ಟ ಪೀತಾಂಬರ ತೊಟ್ಟ ಪಟ್ಟಾವಳಿ

ಅಷ್ಟ ಸಂಪತ್ತಿನ ದಿಟ್ಟ ಕನ್ನಿಕೆಯನು

ದೃಷ್ಟಿಯೊಳಗೆ ಸಮವಿಲ್ಲದ ಬಾಲಿಗೆ

ನೆಟ್ಟನೆ ಮೊಗದಲ್ಲಿ ಕುಷ್ಟವು ಇದ್ದರೆ

ನಷ್ಟ ಚಲುವಿಕೆ ಇನ್ಯಾತಕ್ಕಯ್ಯಾ

ಕೃಷ್ಣ ನಿನ್ನಲ್ಲಿ ಭಕುತಿ ಪುಟ್ಟಿದಲೇವೆ ಇನ್ನು

ವೈಷ್ಣವನಾಗಿ ಉಳ್ಳಷ್ಟು ಕರ್ಮ ಮಾಡಲು

ಭ್ರಷ್ಟ ಜನ್ಮಂಗಳು ಹೋಗ ಬಲ್ಲವೇನಯ್ಯಾ

ಹುಟ್ಟಿದರು ಗೌಡ ಹೆಸರು ಇಕ್ಕದಲೆ

ಕೆಟ್ಟ ಕಬ್ಬಲಿಗಗೆ ಕೊಟ್ಟರೆ ತಾಳೋನೆ

ಸೃಷ್ಟಿಗೊಡಿಯ ನಮ್ಮ ಗೋಪಾಲವಿಟ್ಠಲ 

ನಿಷ್ಟಿಲಿ ಕೊಡು ನಿನ್ನ ಮುಟ್ಟಿ ಪೂಜಿಸಲಿ ॥ 5 ॥ 


 ಜತೆ 


ಜ್ಞಾನವೆ ಭಕುತರಿಗೆ ನೀನೊಲಿಯೊ ಎನಗಿನ್ನು

ದಾನವಾಂತಕ ರಂಗ ಗೋಪಾಲವಿಟ್ಠಲ ॥

*****


No comments:

Post a Comment