Monday, 18 January 2021

ಅನಂತನ್ನ ನೋಡಿ gopala vittala ankita suladi ಅಹೋಬಲ ನರಸಿಂಹ ಸುಳಾದಿ ANANTANNA NODI AHOBALA NARASIMHA SULADI


 Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ  ಅಹೋಬಲ ನರಸಿಂಹದೇವರ ಸುಳಾದಿ 

 ರಾಗ ಮೋಹನ 


 ಧ್ರುವತಾಳ 


ಅನಂತನ್ನ ನೋಡಿ ಅಗಣಿತ ಗುಣಗಣನ

ಅನಂತನ್ನ ಪಾಡಿ ಆಗಮಾದಿ ನುತನ

ಅನಂತನ್ನ ಬೇಡಿ ಅನಿಮಿತ್ಯ ಬಾಂಧವನ

ಅನಂತನ್ನ ತಿಳಿ ಅಧಿಕಾರಾನುಸಾರ

ಅನಂತ ಜನರ ಪೊರೆವಾ ಅನಂತ ರೂಪನಾಗಿ

ಅನಂತನೇವೆ ಅಹೋಬಲ ನಾರಸಿಂಹನಾಗಿ

ಅನಂತ ಪರಿಯಾ ತುತಿಪೊ ಆ ಮಾರ್ಕಾಂಡೇಯ ಗೊಲಿದು

ಅನಂತ ಮೂರ್ತಿ ತೋರಿ ಆತನ ವ್ರತವ ಗೆಲಿಸಿ

ಅನಂತ ಸಿರಿ ಅಜಭವಾದ್ಯರಿಂದಲಿನ್ನು

ಅನಂತ ಪರಿಯಲ್ಲಿ ಸ್ಮರಿಸಿ ಕೊಳುಖತಲಿಪ್ಪ

ಆನಂತ ಗಿರಿವಾಸ ಗೋಪಾಲವಿಟ್ಠಲ 

ಅನಂತ ನಿಂದಲಿ ಅನಂತ ತೀರ್ಥ ಉಂಟು ॥ 1 ॥ 


 ಮಟ್ಟತಾಳ 


ಭವನಾಶನ ಮಾಳ್ಪಾ ಭಾಗೀರಥಿ ಜನಕ

ಭವನಾಶಿನಿ ತೀರ್ಥದಲ್ಲಿ ತಾನೆ ನಿಂದು

ಅವನಿಯೊಳಗೆ ಒಬ್ಬ ಚಂಡ ಶಾಸನನು ಎಂ -

ಬವನು ತಾನು ಬಲು ಕವಿಗಳ ದೂಷಿಸುತ

ಭವ ಪೀಡಿತನಾಗಿ ಬಹು ವಿಪ್ರರ ದ್ರೋ -

ಹವನು ತಾಕಿ ಶವನು ಆಗಿ ಬೀಳೆ

ಜವನ ದೂತರು ಬಂದು ಜಬರಿಸಿ ವಯ್ಯುವ  ಸಮಯ -

ಕ್ಕವನ ಅಂಗುಟ ಬೆರಳು ಭವನಾಸಿಲಿ ಬೀಳೆ

ಭವ ತರಿದು ಅನುಭವಕೆ ತಂದು ಇತ್ತು

ಭುವನದೊಳಗೆ ದಶರಥರಾಯನೆ ಆದ

ಭವರೋಗದ ವೈದ್ಯ ಗೋಪಾಲವಿಟ್ಠಲನು 

ಪವನಂತರ ನಿಂತು ಪಂಡಿತರನು ಪೊರೆವಾ ॥ 2 ॥ 


 ರೂಪಕತಾಳ 


ಸಿರಿದೇವಿ ಪೆಸರಿನ ತೀರ್ಥ ಇಲ್ಲುಂಟು

ಗರುಡ ತೀರ್ಥ ಉಂಟು ಉರಗ ತೀರ್ಥ ಉಂಟು

ನರರ ಉದ್ಧರಿಸಲಿ ವಾಯುತೀರ್ಥ ಉಂಟು

ಪರಿ ಪರಿ ಪೆಸರಿನ ತೀರ್ಥಗಳಿಲ್ಲ್ಯುಂಟು

ನರಹರಿ ತಾನೆ ಒಂದೊಂದು ತೀರ್ಥದಿ ಇದ್ದು

ಧರಿ ಮೇಲಿದ್ದ ಜನರ ಪೊರೆವಾ ತಿಳಿದವರಿಗೆ

ಕರುಣಾಕರ ದೇವಾ ಗೋಪಾಲವಿಟ್ಠಲ ತನ್ನ

ಶರಣರ ಪೊರಿಯಲಿ ಇರುತಿಪ್ಪುವನಿಲ್ಲಿ ॥ 3 ॥ 


 ಝಂಪಿತಾಳ 


ಸಿರಿವತ್ಸ ಕೌಸ್ತುಭ ಸಿರಿಗಂಧ ಕೊರಳ

ಅರಳಿದ ಪೂಮಾಲೆ ಆವುದರ ಮೇಲೊಲಿಯೆ

ಕರಣ ಕುಂಡಲ ಕಸ್ತೂರಿ ನೊಸಲ ಥಳಥಳಿಸೆ

ಕಿರಿದಂತ ಕಪ್ಪುರದ ಕರಡಿಗೊದನ

ಸಿರಿ ಕಿರೀಟವು ಸಿರಿನಾಮ ಕಸ್ತೂರಿ ತಿಲಕ

ಕರ ಚತುರ್ಭೂಭುಜ ಶಂಖ ಚಕ್ರಾಯುಧ

ವರ ನಾಭಿಯಿಂದ ವೊಪ್ಪೊ ವಢ್ಯಾಣ ಕಟಿ -

ತರ ಮೇಲೆ ಉಡಿಗೆ ಕಿಂಕಿಣಿಯ ಘಂಟೆ

ಊರು ಜಾನು ಜಂಘೆ ಜಘನ

ಶರಣರ ಮೋಹಿಪ ರೂಪ ಸಿರಿ ನಾರಾಯಣ ಶೃಂ -

ಗಾರ ಮೂರ್ತಿ ಗರುಡವಾಹನ ಗೋಪಾಲವಿಟ್ಠಲ 

ಪರಿವಾರದೊಡಿಯ ಪರಬೊಮ್ಮ ಕಾಣೊ ॥ 4 ॥ 


 ತ್ರಿವಿಡಿತಾಳ 


ಇಲ್ಲಿ ಉಂಟು ಅಲ್ಲಿ ಇಲ್ಲ । ಅಲ್ಲಿ ಉಂಟು ಇಲ್ಲೆ ಇಲ್ಲ

ಸೊಲ್ಲ ನಾಡಸಲ್ಲಾದಿನ್ನು ಬಲ್ಲವರಿಗಲ್ಲೆ ಕೈವಲ್ಲ್ಯಾ

ಬೆಲ್ಲದಚ್ಚು ಆವಕಡೆಯಿಂದಾದರು ತಿನ್ನಲು

ಬೆಲ್ಲ ಒಂದು ಕಡಿಯಾಗಿ ಕಲ್ಲು ಒಂದ ಕಡ್ಯಾಗೊದೆ

ಎಲ್ಲಿ ನೋಡಾ ಹರಿ ಇರಲು ಇಲ್ಲಿಗೆ ಬಂದದ್ಯಾಕೆನಲು

ಸುಲಭದಿ ತಿಳುವ ಸ್ಥಳದಲ್ಲಿ ಮಹಾತ್ಮೆ ಉಂಟು

ಅಲ್ಲಿಂದ ಬಂದದು ಏನಾ ಇಲ್ಲಿಂದ ಕೊಂಡೋಯ್ದದೇನು

ಬಲ್ಲ ಜ್ಞಾನಿಗಳು ಮನದಲ್ಲಿದ್ದು ಗುಣಿಸಿ ನೋಡಿ

ಮಲ್ಲರ ಮರ್ದನ ರಂಗ ಗೋಪಾಲವಿಟ್ಠಲ 

ಎಲ್ಲಿ ನೋಡಲು ವಿಶ್ವಮೂರ್ತಿ ತಾ ಪೊಳೆವಾ ॥ 5 ॥ 


 ಅಟ್ಟತಾಳ 


ನೋಡುವ ತನ್ನ ತಾ ಒಬ್ಬರಲ್ಲಿ ನಿಂತು

ಬೇಡುವ ತನ್ನ ತಾ ಒಬ್ಬರಲ್ಲಿ ನಿಂತು

ಮಾಡುವ ತನ್ನ ತಾ ಒಬ್ಬರಲ್ಲಿ ನಿಂತು

ನೀಡುವ ತನಗೆ ತಾ ಒಬ್ಬರಲ್ಲಿ ನಿಂತು

ಕೇಡು ಲಾಭಂಗಳ ಕೂಡಿ ಉಣಿಸುವನು

ಗೂಡು ಮಾಡಿಟ್ಟಂಥ ಜಡ ಜೀವರಿಗೆ

ಗಾಡಿಕಾರ ದೇವಾ ಗೋಪಾಲವಿಟ್ಠಲ 

ಕೂಡಿ ಆಡುತ ನಮ್ಮೊಡನೆ ಸುತ್ತುತಲಿಪ್ಪಾ ॥ 6 ॥ 


 ಆದಿತಾಳ 


ಇಲ್ಲೆ ಅನಂತಾನಂತವಾಗಿ ಮೆಲ್ಲನೆ ತಾ ತೋರುತಿಪ್ಪ

ಇಲ್ಲೆ ಅನಂತಾಯುಧಗಳು ಬಲ್ಲವರಿಗೆ ತೋರುತಿಪ್ಪಾ

ಇಲ್ಲೆ ಅನಂತ ರೂಪಗಳು ಬಲ್ಲವರಿಗೆ ತೋರುತಿಪ್ಪಾ

ಇಲ್ಲಿ ಒಂದು ಕರ್ಮವು ಮಾಡೆ ಅನಂತಮಡಿ ಅವರಿಗೀವಾ

ಎಲ್ಲಿ ನೋಡಾ ತೀರ್ಥಗಳು ಎಲ್ಲಿ ನೋಡಾ ದೇವತೆಗಳು

ಎಲ್ಲಿ ನೋಡಾ ಮುನಿಗಳು ಎಲ್ಲಿ ನೋಡಾ ತಾಪಸಿಗಳು

ನಿಲ್ಲಿಸಿಪ್ಪರೊಂದು ಒಂದು ಬಳ್ಳಿ ವೃಕ್ಷ ರೂಪದಿಂದ

ಪಲ್ಲವಿಸುತ ನಾನಾ ಪಕ್ಷಿ ಜಾತಿ ರೂಪದಿಂದ

ಹುಲ್ಲು ಕಾಷ್ಟಗಳನ್ನು ಇಲ್ಲಿ ಛೇದಿಸುವದಕೆ

ಮೆಲ್ಲನೇ ತಿಳಿದು ಹರಿಗಲ್ಲಿ ಇನ್ನರ್ಪಿಸಬೇಕು

ಎಲ್ಲ ಪುಷ್ಫ ಫಲವು ಶ್ರೀವಲ್ಲಭನ್ನ ಸೇವಿಸುತ್ತ

ಇಲ್ಲಿ ಇರುತಿಪ್ಪವು ಬಲ್ಲವರು ತಿಳಿದು ನೋಡಾ

ಎಲ್ಲರಂತರ್ಯಾಮಿಯಾದ ಬಲ್ಲಿದ ಗೋಪಾಲವಿಠಲ 

ಅಲ್ಲಿ ಪ್ರಹಲ್ಲಾದಗೊಲಿದು ಇಲ್ಲಿ ಬಂದ ದೈವ ನೋಡಿ ॥ 7 ॥ 


 ಜತೆ 


ಅನಂತನ ನೋಡಿ ಅನಂತನ ಬೇಡಿ

ಅನಂತ ಒಂದೆ ದೈವ ಗೋಪಾಲವಿಟ್ಠಲನೆನ್ನಿ ॥

*******


No comments:

Post a Comment