Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ ಸೇತು ಧನಸ್ಸುಕೋಟಿ ಮಹಿಮೆ ಸುಳಾದಿ
ರಾಗ : ಸುರುಟಿ
ಧ್ರುವತಾಳ
ಸೇತುಮಧ್ಯದಲ್ಲಿ ಒಪ್ಪುತ ಪೊಳೆದನಾಗ
ಸೀತಾರಾಮನು ಬಂದು ಸೇತು ಬಂಧಿಸಿ ಖಳರಾ
ಕೋತಿಗಳಿಂದಲಿ ಘಾತಮಾಡಿಸಿ
ಪಾತಕ ರಾವಣನ್ನ ಯಾತನಿಗೆ ಕಳುಹಿ
ಚಾತುರ್ಯದಲ್ಲಿ ಸುರವ್ರಾತವನು ಪಾಲಿಸಿ
ಭೂತನಾಥನ ಇಲ್ಲಿ ಪ್ರೀತಿಯಿಂದ ಪ್ರತಿಷ್ಟಿ -
ಸಿ ತಾನು ಪೆಸರಾದ ಭೂತಳದೊಳಗೆಲ್ಲ ಭೂತ ಪ್ರಮಥ
ಮಥ ಪೇತಾವೃತಗಳಿಂದ ಜಾತವೇದಸನ ಮನ
ಭೂತಳಾಧಿಪ ರಘುನಾಥನ ಚರಣಾಂಬುಜ
ತಾ ತುತಿಸುತಿರೆ ಪೀತಾಂಬರಧರ ಶ್ರೀ ವಿಜಯವಿಠಲರೇಯಾ ll1ll
ಮಟ್ಟತಾಳ
ಮಾಧವನು ಗಂಧ ಮಾಧನಗಿರಿಯಲ್ಲಿ
ವೇದಗಳು ತುತಿಸೆ ವೇಧನು ಕೊಂಡಾಡೆ
ವೇದ ಪುರುಷಾ ಲವಣೋದಧಿ ಮಧ್ಯದಲ್ಲಿ
ಸಾಧುಸಜ್ಜನರೊಡನೆ ಮೋದವಾಲಗವಾದನು ಹರುಷದಲಿ
ಶ್ರೀದೇವಿಯರಸಾ ವಿಜಯವಿಠಲ ರಾಮಾ
ಕ್ರೋಧರಸದೆ ಒಡೆದು ತ್ರಿಧರೆಯೊಳು ಮೆರೆದಾ ll2ll
ರೂಪಕತಾಳ
ಈ ಪರಿಯಲಿ ವಾಲಗ ಪರಮಪುರುಷ
ಆ ಪಾರ ಬಗೆಯಲಿ ತಾ ಪ್ರೀತನಾಗಿರೆ
ಆ ಪತ್ತಿಗೆ ಬಂದು ಶರಣೆಂದು ಮೊರೆಹೊಕ್ಕ
ಆ ಪನ್ನ ವಿಭೀಷಣಾ ಕರವನ್ನು ಮಗುಚಿ
ಭೂಪಾರಾ ಶಿರೋರತುನ ಬಿನ್ನಹಾ ಕೇಳೆಂದು
ಪಾಪರಹಿತ ಭಕ್ತ ಪೊಗಳಿದನೂ
ಶ್ರೀಪತಿ ರಘುರಾಮಾ ನೀ ಸೇತು ಉಳುಹಿದರೆ
ಆ ಪತ್ತ ಅಡರುವದು ಧರಿಗೆನಲೂ
ಚಾಪಧರಾಗ್ರಣಿ ವಿಜಯವಿಠಲ ಲಂಕಾ
ದ್ವೀಪ ಪತಿಯಾ ಮಾತನ್ನು ಪಾಲಿಸಿದನು ll3ll
ಝಂಪೆತಾಳ
ಸೇತುವಿನ ಛೇದಿಸಿ ಮೂರು ಭಾಗವ ಮಾಡಿ
ಸೇತು ಮಾಡಿದನು ಸುರನರದಾನವ
ವ್ರಾತಗಳು ಮಿಂದು ಕೃತಾರ್ಥನಾಗುವದಕ್ಕೆ
ಸೀತಾರಾಮನು ಬಲು ಪ್ರೀತಿಯಲ್ಲಿ
ಪ್ರಾತರಾ ಮಧ್ಯಾನ್ನಾ ಸಾಯಂಕಾಲದ ಕಾಲಾ-
ತೀತಾಗಗೊಡದೆ ಬಲು ಭಕುತಿಯಲ್ಲೀ
ಜಾತ ಉತ್ತಮರೆಲ್ಲಿ ನಿತ್ಯನೈಮಿತ್ಯಗಳು
ಶಾತದಲ್ಲಿ ಮಾಡಲು ಸರ್ವೋತ್ತುಮಾ
ವಾತ ನಿಜಗುರು ರಘುನಾಥ ವಿಜಯವಿಠಲಾ
ಸೇತುಯಾತ್ರಿಗೆ ಬರಲು ಪ್ರೀತಿಮಾಡುವನು ll4ll
ತ್ರಿವಿಡಿತಾಳ
ರತುನಾಕಾರ ಮಹೋದಧಿ ಸಂಗಮದಲಿ ಅಪಾರ
ವಿತವಲ್ಲಿ ಮುಖ್ಯರು ವಾಯುಜನ ಸ -
ಹಿತಾ ಶೃತೆನುತೆ ಲಕುಮಿ ಎಂದೆನಿಸುವ ವೈದೇಹಿ
ರತಿ ಪತಿ ಪಿತ ನಾರಾಯಣನೆ ರಾಮಾ
ಅತಿಶಯದಿಂದ ತೀರಥದೊಳು ಸನ್ನಿಧ
ಪ್ರತಿದಿನದಲಿ ಬಿಡದೆ ಇರುತಿಪ್ಪರು
ಹಿತದಿಂದ ನಿಂದು ವಂದನೆ ಗೈದವರಿಗೆ
ಮತಿಯಾಗುವದು ಸೌಭಾಗ್ಯ ಮ್ಯಾಲೆ
ಗತಿಯಾಗುವದಿದಕೆ ಸಂಶಯ ಲೇಶವಿಲ್ಲ
ಚತುರಾತರು ಕೇಳಿ ಸಂತೋಷರಾಗಿ
ಸತುದೈವ ರಾಘವ ವಿಜಯವಿಠಲರೇಯಾ
ಪತಿಯಾಗಿಪ್ಪನು ಇಲ್ಲಿ ಪಿತಮಹಾದ್ಯರಿಗೆಲ್ಲಾ ll5ll
ಅಟ್ಟತಾಳ
ಹತ್ತು ಸಾವಿರ ವಿಪ್ರವಧೆ ಕನಕಸ್ತೇಹ
ಮತ್ತೆ ಇದರಷ್ಟು ಸುರಾಪಾನಾ ಗುರುತಲ್ಪಾ
ಇತ್ತಂಡಾದಲಿ ಸಂಸರ್ಗಿಕೋಟಿ ಇರೆ
ಎತ್ತಲಾದರು ಏನು ನರರು ಒಮ್ಮೆ ಬಂದು
ಚಿತ್ತಶುದ್ಧನಾಗಿ ನಿಂದು ತುತಿಸಿದಾರು
ಸೋತ್ತುಮನಾಗುವ ಸರ್ವಕಾಲದಲ್ಲಿ
ಕತ್ತಲೆ ಹರ ನಮ್ಮ ವಿಜಯವಿಠಲ ದೇ -
ವೋತ್ತುಮಾನೊಲಿದು ಮುಕ್ತಿಯನೀವನು ll6ll
ಆದಿತಾಳ
ಪುಸಿ ಎನ್ನದಿರಿ ಧನುಸ್ಸುಕೋಟಿ ಮಹಿಮೆ ಪ -
ಠಿಸಿ ಕೇಳಿದವಗೆ ಲಾಲಿಸಿ ಪೇಳಿದವಗೆ
ವಿಷಯಾದಿಗಳ ಮಹಾಪ್ರಸರವಳಿದು ಯಮನ
ಘಸಣಿಗೆ ತಪ್ಪಿಸಿ ಗತಿಗೇರಿಸುವುದು ಶುಭದಿಂದ
ವಸುಧಿಯೊಳಾವ ಮಾನಿಸನಾದರು ಸೇ -
ವಿಸಿದರು ಪುಣ್ಯ ಸಿದ್ಧಿಸುವುದು ವೇಗದಲ್ಲಿ
ಅಸುರ ವಿರೋಧಿ ರಾಮಾ ವಿಜಯವಿಠಲರೇಯ
ಪೆಸರಾದ ಸೇತು ಬಂಧಿಸಿ ಶ್ರುತಿ ಸ್ಮೃತಿಯೊಳು ll7ll
ಜತೆ
ಮೊದಲು ನರರು, ಮಧ್ಯಾದೇವಾಂತ್ಯದನುಜರು ತ್ರಿ
ವಿಧಮಾಡಿದ ರಾಮಾ ವಿಜಯವಿಠಲ ನೊಲಿದು ll8ll
*******
No comments:
Post a Comment