ಶ್ರೀ ವಿಜಯದಾಸಾರ್ಯ ವಿರಚಿತ ಪ್ರಾರ್ಥನಾ ಸುಳಾದಿ
( ಭಕ್ತಾಪರಾಧ ಸಹಿಷ್ಣು ಶ್ರೀಹರಿಯೇ , ಎನ್ನ ಅಪರಾಧ ಕ್ಷಮಿಸಿ , ಸೇವಾ ಕೈಕೊಂಡು , ನಿನ್ನಲ್ಲಿ , ನಿನ್ನ ದಾಸರಲ್ಲಿ ಭಕುತಿಯನ್ನಿತ್ತು , ನಿನ್ನ ನಾಮೋಚ್ಚಾರವನ್ನು ಕೊಡೆಂದು ಪ್ರಾರ್ಥನಾ )
ರಾಗ ಕಾಪಿ
ಧ್ರುವತಾಳ
ಬಿಡದಹಂಕಾರ ಬಲು ಬಡಿವಾರದಲ್ಲಿ ಸುಖ
ಬಡುವೆನು ದುರುಳ ನಡತೆಗಳಾಚರಿಸಿ
ಒಡಲಿಗೆ ಮನೆಗೆ ಪಟ್ಟಿ ಬಡೆದಂತೆ ನಾಮಗಳು
ಎಡಬಿಡದೆ ಚೆನ್ನಾಗಿ ತಿದ್ದಿಕೊಂಡು
ಪಿಡಿದು ಜಪಸರ ಕೊರಳೊಳಗಿಟ್ಟು ಗಾ -
ರುಡಿಗ ಕವಡೆಯ ಸರವ ಧರಿಸಿದಂತೆ
ಕೊಡಗೈಯ್ಯವರ ಬಳಿಗೆ ನುಡಿಯುತ್ತ ಅಪಶಬ್ದ
ತಡೆಯದಲೇ ಪೋಗಿ ಆವರನೆ ನೀನೆ ಎಂಬೆ
ಒಡಲ ತೋರಿಸಿ ಮತ್ತೊಡನೊಡನೆನ್ನ ಕುಲ -
ದೊಡೆಯಾನೆಂದು ಹಿಗ್ಗಿ ಪೊಗಳಿ ನಿಲುವೇ
ಜಡಮತಿಲೊಮ್ಮೆ ನೆನದರೆ ಗತಿಯನೀವ ನಿ -
ನ್ನಡಿಗಳ ಮರೆದು ಮಂದನಾದೆನಯ್ಯಾ
ಪೊಡವಿಯೊಳು ಹಾಳಾದ ಗ್ರಾಮದಲಿ ಅಂ -
ಗಡಿ ಹಾಕಿ ಲಾಭವನು ಪಡೆವೆನೆಂಬ
ಕಡುಮೂರ್ಖನಂತೆ ನಾನಾಗಿ ಪಾತಾಕಾಕಿಳಿದೆ
ಬಡವಾನೆಂದಿನಿಸಾದೆ ಬ್ರಹ್ಮೇತಿ ಎನಿಸಿದೆ
ಬಿಡಿಸುವದು ಜೀಯ ದುರಾಶೆ ಪಾಶಗಳು ಎ -
ನ್ನೊಡೆಯ ಸಿದ್ಧಾತ್ಮ ಸಿರಿ ವಿಜಯವಿಟ್ಠಲ ಹರಿ ॥ 1 ॥
ಮಟ್ಟತಾಳ
ಅನ್ನವೆಂದು ಅನ್ಯರನ್ನ ಸನ್ನುತಿಸಿ ಬಿನ್ನಗೈಸಿ
ತಿನ್ನಲೋಡಿ ನಿನ್ನ ನಾಮ ಹಾನ್ನಿಕೆಯಾ ಯನ್ನು ತೊರದಾ
ಹಾನ್ಯಹಾನ್ಯ ಯನ್ನನಾಗಿ ಖಿನ್ನನಾಗಿ ನಿನ್ನ ಮರದೆ
ಚನ್ನ ಸುಪ್ರಸನ್ನ ದೇವಾರನ್ನ ವಿಜಯವಿಟ್ಠಲನ್ನೆ
ನಿನ್ನ ನಾಮ ಮರದೆ ನಿನ್ನ ಮರದೆ
ಎನ್ನ ನೋಡೊ ಎನ್ನ ನೋಡೊ ॥ 2 ॥
ಝಂಪಿತಾಳ
ಸೇವಕ ಮಾಡಿದ ಶತನೂರು ಅಪರಾಧ -
ವಾ ವಹಿಸಿ ಪೊರೆವ ದೈವಗಳುಂಟೆ
ಸೇವೆ ಕೊಂಬಲ್ಲಿ ಕೊಡುವಲ್ಲಿ ಕೊಳುವಲ್ಲಿ
ಆವಾವ ಬಗೆಯಲ್ಲಿ ನೋಡುವಲ್ಲಿ
ಮೂವರನು ನೋಡುವೆನೆಂದು ಭೃಗುಮುನಿ ಬಂದು
ನೋವು ಮಾಡಲು ಮೆಚ್ಚಿ ಅರ್ಚಿಸಿದೆ
ಸಾವಿರ ಜನ್ಮದ ದೋಷರಾಶಿಗಳಿರಲು
ಕಾವ ಕರುಣಿಯೆಂದು ಒಮ್ಮೆ ನೆನೆಯೆ
ನಾವಾಗಿ ಭವಾಬ್ಧಿಯನು ದಾಟಿಸುವನು ನಮ್ಮ
ಗೋವ ನಾಮ ವಿಜಯವಿಟ್ಠಲನು ವೋವಿಗನು ॥ 3 ॥
ಅಟ್ಟತಾಳ
ಚರಣ ಕೀರ್ತನೆ ಚರಣ ಸೇವೆ ಚರಣ ಧ್ಯಾನ
ಚರಣ ಸ್ಮರಣೆ ಚರಣ ಪೂಜೆ ಚರಣ ಸಂ -
ದರುಶನವೇ ಕೊಡುತಲಿ ಚರಣ ಚರಣದಲ್ಲಿ ಸಂ -
ಚರ ಸುಪಥವ ತೊರಿಸಿ ಚರಾಚರದಲ್ಲಿ ಸಂ -
ಚರಣವನ್ನು ಮಾಡುವಂಥ ಚರಣ ಬಳಿಯಲಿಟ್ಟು ಖೇ -
ಚರ ಸುಪಥವ ತೋರಿಸಿ ಚರಾಚರದಲ್ಲಿ ಗೋ -
ಚರ ನೀನಾಗಿ ಎನ್ನ ನಿಶಾಚರದ ಗುಣವ ಬಿಡಿಸಿ ಉಪ -
ಚರಿಸುವಂಥ ಮಂಗಳಾಚರಣೆಯಿಂದ ಗುರುಗಳ
ಚರಿತವನ್ನು ನಿತ್ಯ ಉಚ್ಚರಿಸುವಂತೆ ಮಾಡು ಸಂ -
ಚರಾಚರ ವಿಜಯವಿಟ್ಠಲ ॥ 4 ॥
ಆದಿತಾಳ
ಆದಿ ಅನಾದಿ ನೀನೆಂದು ಪಾದವನ್ನು ಪಿಡಿದೆನು
ಭೇದವನ್ನು ಮಾಡದಲೆ ಕಾಯ್ದುಕೊಳ್ಳಯ್ಯಾ ಕಮಲನಾಭಾ
ತೇದ ಗಂಧ ಪೂರ್ವದಂತೆ ಯಾದುದೇನೊ ನಿನ್ನ ದಾಸ -
ನಾದಾನೆಂದು ಒಂದು ಸಾರಿ ಸಾಧುಗಳು ನುಡಿಯೆ ಜ -
ನ್ಮಾದಿ ದುಃಖದಿಂದ ಬಾಹ ಬಾಧೆ ಕಷ್ಟಾ ಕರ್ಮಲೇಶ -
ವಾದರು ಎನಗೆ ಉಂಟೆ ವ್ಯಾಧಿ ಭವರೋಗದ ವೈದ್ಯ
ವೇದಾಂಗ ನಾಮಧೇಯ ವಿಜಯವಿಟ್ಠಲ ಜೀಯ
ನೀ ದಯವಾಗೆ ಹಾರಾಲೂದುವೆನು ದುರಿತರಾಶಿ ॥ 5 ॥
ಜತೆ
ಅತಂತ್ರ ನಾನಾಗಿ ನಿನ್ನ ಬಯಸಿ ಬಂದೆ
ಸ್ವಾತಂತ್ರ ಸ್ವಾಭಾವ ಕಾಯಾ ವಿಜಯವಿಟ್ಠಲ ॥
********
No comments:
Post a Comment