ಶ್ರೀ ಪ್ರಸನ್ನವೆಂಕಟ ದಾಸಾರ್ಯ ವಿರಚಿತ ಹರಿಸರ್ವೋತ್ತಮತ್ವ ಸುಳಾದಿ
( ಈ ಸುಳಾದಿಯಲ್ಲಿ ದಾಸಾರ್ಯರು ಹರಿಸರ್ವೋತ್ತಮ ಸಿದ್ಧಾಂತವನ್ನು ಸಾರಿದ್ದಾರೆ. ಲೋಕದಲ್ಲಿ ಶ್ರೀಹರಿ ಸರ್ವೋತ್ತಮ ಎಂದು ಉಪಾಸಿಸುವರೇ ನಿಜವಾಗಿ ವಂದ್ಯರು , ಉಪೇಕ್ಷಿಸುವವರು ನಿಂದ್ಯರು. ಶ್ರೀಹರಿಯು ಅನಂತನಾಮಿ , ಅಪ್ರಾಕೃತ , ತ್ರಿಗುಣಾತೀತ , ಅವನ ಗುಣಗಳು ಅನಂತ ಅಗಣಿತ ಎಂದು ಹೇಳುವ ಮೂಲಕ ಶಾಸ್ತ್ರದ ಮಥಿತಾರ್ಥವನ್ನೇ ಇಲ್ಲಿ ವಿಶದೀಕರಿಸಿದ್ದಾರೆ. )
ರಾಗ ಹಿಂದೋಳ
ಧ್ರುವತಾಳ
ಹರಿಸರ್ವೋತ್ತಮ ಹರಿಪರಬ್ರಹ್ಮ
ಹರಿಸಮರಾರಿಲ್ಲ ಹಿರಿಯರುಂಟೆಲ್ಲಿ
ಹರಿ ಪಟ್ಟಗಟ್ಟಿದಮರರು ವಂದಿತರು
ಹರಿಯನಾದರಿದಸುರರು ನಿಂದಿತರು
ಹರಿಯೊಲಿದಿರುವರ್ಭಕರೆ ಕೀರ್ತಿಯುತರು
ಹರಿಯನರ್ಚಿಸದ ವೃದ್ಧರೆ ಬಹಿಷ್ಕೃತರು
ಹರಿಯವೇನ ನಾಮವು ಅರೂಪ ಗುಣದೂರ ಶ್ರೀ -
ಹರಿ ಪ್ರಸನ್ವೆಂಕಟ ವರದ ಉದಾರ ॥ 1 ॥
ಮಠ್ಯತಾಳ
ಅಯ್ಯನ ನಾಮವೆಂದರೆ ಅನಂತ ನಾಮವು
ಸ್ವನಾಮವಿಲ್ಲ ಹೀಗಲ್ಲ
ಅರೂಪವೆಂದರೆ ಪ್ರಾಕೃತರೂಪ
ಸ್ವರೂಪವಿಲ್ಲ ಹೀಗಲ್ಲ
ಗುಣರಹಿತೆಂಬುದು ತ್ರಿಗುಣಾತೀತಾ
ಗಣಿತ ಗುಣಗಳಿಲ್ಲ ಹೀಗಲ್ಲ
ನಿರ್ಗುಣ ಅರೂಪನಾಮನೆಂಬರು
ಸ್ವರ್ಗಜವರದ ಪ್ರಸನ್ವೆಂಕಟೇಶಗೆ ನಾಮವೆಂಬುದು ಹಾಗಲ್ಲ ॥ 2 ॥
ತ್ರಿಪುಟತಾಳ
ನಾಮವೀಪರಿ ನಾಮ
ನರರಿಗುತ್ತಮರು ನೃಪರು ಮುನಿಸುರರು ತ -
ನ್ಮರುತ್ತೆರೆದೆರೆದಿರುವ ನಾಮ
ಎರಡು ಸಾಸಿರ ರಸನರು ಮೃಡಗರುಡರು
ಸ್ವರೂಪಾನುಸಾರ ನಿತ್ಯ ಸ್ಮರಿಪ ಶ್ರೀನಾಮ
ಎರಡೀರೆವದನನೀರೆರಡು ಶ್ರುತಿಯ ನಾಮ
ಸಿರಿಯಳುಚ್ಚರಿಸುವನಂತ ನಾಮ
ಪ್ರಸನ್ನವೆಂಕಟ ವರದನುದರದಿಡಿ
ಕಿರಿದಿದ್ದಾರರಿಯದ ಗುಹ್ಯನಾಮ ॥ 3 ॥
ರೂಪಕತಾಳ
ಒಂದು ಬ್ರಹ್ಮಾಂಡ ತುಂಬೋ ದೇವ ರೂಪ ಮ -
ತ್ತೊಂದು ರೂಪದ ರೋಮರಂಧ್ರದೊಳಜಾಂಡ
ಒಂದಲ್ಲ ನೂರಲ್ಲ ಹೊಂದಿದುವನಂತವು
ಒಂದೊಂದಜಾಂಡದೊಳಗ್ಹೊರಗ ಪರಿಪೂರ್ಣ
ಅಂದು ಏಕಾರ್ಣವದೊಳೊಂದು ವಟಪತ್ರದಿ ಆ
ನಂದನರಸಿಯ ಮೊಲೆಯನೊಂದು ಚಪ್ಪರಿದುಂಡು
ಒಂದರೊಳು ಕರವಿಟ್ಟ ಪ್ರಸನ್ವೆಂಕಟ ರೂಪ ॥ 4 ॥
ಝಂಪೆತಾಳ
ಕರ ಚರಣ ನಖ ಕೇಶ ಶಿರ ಚಕ್ಷು ಶ್ರವಣಾದಿ
ಸರ್ವಾವಯವಗಳಿಂದ ಸರ್ವರೂಪಗಳಿಂದ
ಸಿರಿಯರಸ ಸ್ವಗತ ಭೇದವಿದೂರ ಹೀ -
ಗರಿಯದೆ ಐದು ಭೇದವಸತ್ಯವೆಂಬ ಪಾ -
ಮರಗೇವೆ ನಿತ್ಯಾಂಧ ನರಕವೆ ಸ್ಥಿರವಯ್ಯ
ಸಿರಿ ಪ್ರಸನ್ನವೆಂಕಟ ವರದಾನಂತಾಭಿದಾ -
ವರ ಬಿಂಬೋತ್ತಮನಾಗಿ ಪೊರೆವ ಪ್ರತಿಬಿಂಬ
ಸಿರಿ ಅರಸ ಭೇದವಿದೂರ ॥ 5 ॥
ಜತೆ
ಹರಿಯವೇನ ನಾಮವು ಅರೂಪ ಗುಣದೂರ ಶ್ರೀ -
ಹರಿ ಪ್ರಸನ್ವೆಂಕಟ ವರದ ಉದಾರ ॥
********
No comments:
Post a Comment