ರಾಗ ಶಂಕರಾಭರಣ
ಝಂಪೆತಾಳ
ತರಣಿ ಶತಕೋಟಿ ರುಚಿಗಧಿಕವೆಂದೆನಿಸುವ
ತಿರುಪತಿವಾಸನ ವರಕಿರೀಟವ ಕಂಡೆ
ಶಿರದಲ್ಲಿ ಮುಡಿದಿದ್ದ ಪರಿಪರಿಯ ಕುಸುಮಗಳು
ಅರಳಿ ಪರಿಮಳಿಸುತ್ತ ಹರಿಯುತಿವೆ ದೆಸಿದೆಸಿಗೆ
ಹರಿಣ ಕುರುಹಿನ ತೆರದಿ ನೊಸಲ ಕಸ್ತೂರಿ ತಿಲುಕ
ಸರಸಿಜದಳವ ಧಿಕ್ಕರಿಸುವ ನಯನನ ಕಂಡೆ
ಸ್ಮರನ ಕರದಿಂದ ನ್ಯಾವರಿಸಿದ ಚಾಪವೆನೆ
ಎರಡು ಪೆರ್ಬುಜ್ಜುಗಳು ತಿರುಹು ತಿಪ್ಪದ ಕಂಡೆ
ಭರದಿಂದ ತೂಗುವತಿ ಮಕರ ಕುಂಡಲ ಕಾಂತಿ
ಮಿರಗುತಿರೆ ಗಲ್ಲದಲ್ಲಿ ಸರಳ ನಾಸಿಕ ಕಂಡೆ
ಎರಡುಸಾಲ್ ಪಂಕ್ತಿದಂತಗಳೆಸಿಯೆ ಕರ್ಪೂರ
ಕರಡಿಗೆ ಯಂದದಲಿ ವದನ ಎಳೆನಗೆ ಕಂಡೆ
ಗಿರಿಯ ತಿರುಮಲ ಸಿಂಧು ವಿಜಯವಿಟ್ಠಲನ್ನ
ಸುರಿವಧರಾಮೃತ ಕಂಡೆ ಉತ್ಸವದಲ್ಲಿ
ಕಿರಿ ಬೆವರು ಮೊಗದಲ್ಲಿ ಬರಲು ಮೌಕ್ತಿಕದಂತೆ
ಶಿರಸ ಮೊಗಪರಿಯಂತೀ ಪರಿಯಲ್ಲಿ ಕಂಡೆನಾ ॥ 1 ॥
ಮಟ್ಟತಾಳ
ಕಂಬುಕಂಠ ಕೊರಳ ತ್ರಿರೇಖೆ
ಕಂಬುಚಕ್ರ ಪಿಡಿದ ಹಸ್ತತಾಮ್ರಮಯದ ಕರತಳ ಕಾಂತೆ
ಅಂಬುಜನಾಭ ವಿಜಯವಿಟ್ಠಲ
ಸಂಭ್ರಮದಿಂದ ಪೊಳವದು ಕಂಡೆ
ಅಂಬುಜನಾಭಾ ರತುನ ಭಾಸಾ ಪೊಳವದು ಕಂಡೆ ॥ 2 ॥
ರೂಪಕತಾಳ
ಕಡಗ ಕಂಕಣ ಮೇಲು ಕೈಯ್ಯ ಸರಪಳಿ ಬಳೆ
ಜಡಿತದುಂಗುರು ಬೆರಳೊಳಗೆ ವಂದೊಂದು
ನಿಡಿದೋಳು ಬಂದಿ ತಾಯತ ವಂಕಿ ರಂಜಿಸಿ
ಕೊಡುವ ಮಾಣಿಕ ಹಸ್ತ ಕಟಿಕರ ಶೃಂಗಾರ
ಪಡಿಗಾಣೆ ನಾನು ಮತ್ತಾವಲ್ಲಿ ಚತುರ್ದಶ
ಪೊಡಿವೇಶ ಸುಂದರ ವಿಜಯವಿಟ್ಠಲನ
ಕಡುತೇಜ ವಿಗ್ರಹನ ಬಿಡದೆ ನಾ ಕಂಡೆ ॥ 3 ॥
ಧ್ರುವತಾಳ
ಸೋಲು ಮುಡಿಯ ಪೂವ ಸಿರಿದೇವಿಯ ನಿಜ
ಮಾಲೆ ಕೌಸ್ತುಭಹಾರ ಉರ ವಿಶಾಲನ ಕಂಡೆ
ತಾಳೆಸರ ಎಳೆದುಳಿಸಿ ಹೀರಹಾರ ಪದಕ
ಏಳುಸರಿಗೆ ಉದರ ಏಳುಲೋಕವ ಕಂಡೆ
ಸಾಲತ್ರಿವಳಿ ಡೊಳ್ಳು ಕಿರಿ ಬೊಜ್ಜೆ ಕೆಳನಾಭಿ
ಮೇಲಾದ ಕಿಂಕಿಣಿ ಕಾಂಚಿದಾಮನ ಕಂಡೆ
ವೀಲೋಚನಾ ನಾಮ ವಿಜಯವಿಟ್ಠಲ ಭಕ್ತಾ
ಪಾಲಾಯ ದಯಾಳಿನ ಆಳುವವನ ಕಂಡೆ ॥ 4 ॥
ತ್ರಿವಿಡಿತಾಳ
ಪೀತಾಂಬರ ಕಿರಿದೊಡೆ ಜಾನುಜಂಘೆ
ಜ್ಯೋತಿರ್ಮಯದ ಪೆಂಡೆ ಸರಪಳಿ ಪೊಂಗೆಜ್ಜೆ
ಜಾತಿವರ್ನದಂದಿಗೆ ದುಷ್ಟದನುಜರ
ಘಾತಿಸಿದ ಪಾದ ಗಂಗೆ ಪಡದ ಪಾದ
ಜ್ಯೋತಿ ಗಣೇಶ್ವರ ವಿಜಯವಿಟ್ಠಲ ಪ್ರ -
ಖ್ಯಾತ ಮೂರುತಿಯ ಪ್ರಜ್ಯೋತಿಯ ಕಂಡೆ ॥ 5 ॥
ಅಟ್ಟತಾಳ
ಅನಂತ ಜನುಮಕ್ಕೆ ಯಾದಡಂ
ಮಾನುಷೋತ್ತುಮನಾಗಿ ನೋಡಿದಡಂ
ಜ್ಞಾನದಲ್ಲಿ ವಮ್ಮೆ ಪಾಡಿದಡಂ
ಧ್ಯಾನದಲ್ಲಿ ವಮ್ಮೆ ಕೂಡಿದಡಂ
ಮೌನದಲ್ಲಿ ನಿಂದು ಕರದಡಂ
ಪಾನ ಚರಣಾಂಬು ಕೊಂಡಾದಡಂ
ಶ್ರೀ ನೈವೇದ್ಯವ ಮೆದ್ದುದಡಂ
ಏನು ಕೊಡದಲೆ ನೆನದಡಂ
ಈ ನಿಧಿಯಲ್ಲೀಗ ಇದ್ದಡಂ
ಶ್ರೀನಿವಾಸನ ದ್ವಾರ ಕಾದಡಂ
ಹೀನಭವರೋಗವಾದಡಂ
ಬೇನೆ ಬಡಿಸುತ್ತಲಿದ್ದಡಂ
ಆ ನರಗೆ ಪಂಚಪ್ರಾಣವಾಗಿ ಇಪ್ಪ
ಅನಂತಾತ್ಮ ನಮ್ಮ ವಿಜಯವಿಟ್ಠಲನೀತಾ
ಕಾಣುತ ಲಪವರ್ಗ ಕೊಡುವನಂ ॥ 6 ॥
ಆದಿತಾಳ
ಅಂಬರಾವನ್ನು ಮೀಟಿ ಅಂಬುಜ ಜಾಂಡವನೊಡದು
ಅಂಬುಜ ಚರಣದಲ್ಲಿ ಅಂಬುವೇಗದಿಂದ ಪಡಿಯೆ
ಅಂಬುಜ ಸಂಭವ ತೊಳಿಯೆ ಅಂಬಕತ್ರಯನು ಧರಿಸೆ
ಅಂಬರಾದ್ಯರು ವೊಲಿಸೆ ತುಂಬರಾಧ್ಯರು ತುತಿಸೆ
ಎಂಬ ಮೂರುತಿ ಇದೆ ನೋಡಿ
ಅಂಬುಧಿಯೊಳಗೆ ಚರಿಸಿದ ಧರಿಸೀದ
ಕುಂಭಿಣಿಯ ಅಣುಗನ ಉದ್ಧರಿಸಿದ
ಕುಂಭಿಣಿಯಳೆದ ನೃಪರನಳಿದ
ಅಂಬುಧಿ ಮಾರ್ಗವ ಬಿಗಿದು ಪೋದ
ಅಂಬರ ಪುರಗಳು ಹುತ ರಾವುತ
ಎಂಬ ದಶಾವತಾರ ನೀತ
ಸಂಭ್ರಮ ವಿಭುವೆ ವಿಜಯವಿಟ್ಠಲ
ನಂಬಿದವರಿಗೆ ಗತಿ ಪ್ರದಾತ ॥ 7 ॥
ಜತೆ
ವೈಕುಂಠ ಇದೆಯೆಂದು ಮೆರೆವ ತಿರುವೆಂಗಳ
ವೈಕುಂಠನಾಮ ಸಿರಿ ವಿಜಯವಿಟ್ಠಲ ವರದಾ ॥
*********
No comments:
Post a Comment