Sunday, 8 December 2019

ರೌದ್ರಾಂತರ್ಯಾಮಿ vijaya vittala ankita suladi ಕನಕಗಿರಿ ಮಹಾತ್ಮೆ ಸುಳಾದಿ ROUDRAANTARYAAMI KANAKAGIRI MAHATME SULADI

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ಕನಕಗಿರಿ ಮಹಾತ್ಮೆ ಸುಳಾದಿ 

 ರಾಗ ಶಂಕರಾಭರಣ 

 ಧ್ರುವತಾಳ 

ರೌದ್ರಾಂತರ್ಯಾಮಿ ನಾರಸಿಂಹ ಮಹಾಸಿಂಹ 
ರೌದ್ರಾವತಾರ ತರಣಿಕೋಟಿ ಭಾಸ 
ಭದ್ರದಾಯಕ ಭಕ್ತರಾಧೀನ ಅನುದಿನ 
ಉದ್ರೇಕಮತಿ ಕೊಡುವ ಉದಧಿಶಯನ
ಕ್ಷುದ್ರ ದಾನವ ತತಿಯ ಧರಣಿಗೆ ಕೆಡಹಿಸು 
ನಿದ್ರರಮಾಡುವ ಧೀರಶಾಲಿ 
ಹೃದ್ರೋಗ ಮೂಲಕಿತ್ತಿ ಕೀರ್ತಿಯ ಪೊತ್ತಗುಣ ಸ -
ಮುದ್ರ ವಜ್ರನಖ ನಿಟಿಲನೇತ್ರ 
ಸದೃಶರಹಿತ ರೂಪ ಬಲು ಬಹುಪ್ರತಾಪ 
ವಿದ್ರುಮ ನಯನ ವಿಚಿತ್ರರದನ 
ರುದ್ರಾಂತರ್ಯಾಮಿ ಸ್ವಾಮಿ ಭಳಿರೆ 
ಛಿದ್ರಾನೇಕ ಇಪ್ಪದೇಹ ಬರುವ ಉ -
ಪದ್ರವ ಪರಿಹರಿಸೊ ಎನಗೆ ಒಲಿದು 
ಮುದ್ರಾಧರರ ಒಡನೆ ಭಕ್ತಿಯ ಕೊಟ್ಟು ಜ -
ಗದ್ರಮಣ ಕಾಯಬೇಕು ನಾರಸಿಂಹ 
ನಿದ್ರಾರಹಿತ ನಮ್ಮ ವಿಜಯವಿಠಲ ಕನ -
ಕಾದ್ರೀಶ ಕರುಣಾಳೆ ನಮೊ ನಮೊ ನಿನಗೆ ॥ 1 ॥

 ಮಟ್ಟತಾಳ 

ಪ್ರಲ್ಹಾದ ದೇವನ್ನ ಅಹಲ್ಲಾದ ನೋಡಯ್ಯಾ 
ಮಹದಾದಿ ಜನಕೆ ಅಹೋ ಆಶ್ಚರ್ಯಕರ 
ಸೋಹಂ ಎಂದ ಮನುಜನನ್ನು ಇಹಪರಲೋಕದಲ್ಲಿ 
ಗ್ರಹಬಾಧೆಯಲ್ಲಿ ದಹಿಸುತಿಪ್ಪನು ಗಡ 
ಪ್ರಹಲ್ಲಾದ ದೇವನ್ನ ಅಹಲ್ಲಾದ ನೋಡಯ್ಯಾ 
ಮೋಹನ ಕನಕಾದ್ರಿ ವಿಜಯವಿಠಲ ನಿನ್ನ 
ದ್ರೋಹಿಗೆ ತಮಸು ಸಂದೇಹ ಎಂದಿಗೆ ಇಲ್ಲಾ ॥ 2 ॥

 ತ್ರಿವಿಡಿತಾಳ 

ಧರೆಯೊಳು ಮೂರು ಲಿಂಗಾಕಾರವಾಗಿ ಶ್ರೀ -
ಹರಿಯೆ ಮೆರವುತಿಪ್ಪ ತಿಳಿಯಬೇಕು 
ಪರುಶ ರೂಪಾತ್ಮಕ ರೂಪಗಳೀಪರಿ 
ಕರಿಸಿಕೊಂಡವು ಕೇಳಿ ನಾಮ ನಿತ್ಯ 
ಪರಮ ಶೋಭಿತವಾದ ವಾರಣಾವತಿ ಎಂಬ 
ಪುರದಲ್ಲಿ ಜಯಂತ ನಾರಸಿಂಹ 
ಮರಳೆ ಲಾಲಿಸಿ ಇದನೆ ಕನಕನಾಮಕನೆನ್ನಿ 
ನರಸಿಂಹನೆಂಬೋದೆ ನಿಜಕಾಣಿರೊ 
ಶರಧಿತೀರದಲೊಂದು ಕಡೆ ಸಿಂಹಾಲಯವೆಂಬ 
ಪುರದಲ್ಲಿನಿಂದಿಹ ನಾರಸಿಂಹನೊ |
ಎರಡೊಂದು ಸ್ಥಳದಲ್ಲಿ ಪೂಜೆಗೊಳುತ ಇನಿತು 
ಮೆರೆವುತಿಪ್ಪನು ನೋಡು ನಾರಾಯಣಾ 
ಹರರೂಪ ತಾಳೀದ ಮೋಹಕ ಜನರಿಗೆ 
ನಿರಯವಾಗಲಿ ಎಂಬ ಕಪಟದಲ್ಲೀ 
ಪರಮಪಾವನವಾದ ಪೊಂಪಾಕ್ಷೇತ್ರಸುತ್ತ 
ಹರಹಿಕೊಂಡಿದೆ ಪಂಚಕ್ರೋಶ ಧರಿಣೀ 
ಮಿರುಗುತಿದೆ ಇದೆ ಆದರೊಳಗೆಣಿಸಿ 
ಕರಣಶುದ್ಧದಿ ಪುಣ್ಯಪಡಕೊಳ್ಳಿರೊ 
ಸುರನುತ ವಿಜಯವಿಠಲ ಕಾಂಚನರಾಯಾ 
ವರವ ಕೊಡತಲಿಪ್ಪ ಬೇಡಿದ ದಾಸರಿಗೆ ॥ 3 ॥

 ಅಟ್ಟತಾಳ 

ಕನಕರಾಯನ ದರುಶನ ಮಾಡಿದವನಿಗೆ 
ಮನದೊಳಗಿದ್ದ ಮಹಾಭಿಷ್ಟೆ ಸಲ್ಲುವದು 
ಅನುಮಾನವಿದಕ್ಕಿಲ್ಲ ಪೂರ್ವದ ಕಥೆ ಕೇಳಿ 
ಕನಕಮುನೇಶ್ವರ ತಪವಮಾಡಿದನಂದು 
ಕನಕಾವರುಷ ಒಂದು ಕ್ಷಣ ಕರವದು ನಿತ್ಯ 
ಇನಿತು ಮಹಿಮೆ ಉಂಟ ಅದರಿಂದ ಲಕುಮೇಶ 
ಕನಕರಾಯನೆಂದು ಕರಿಸಿಕೊಂಡಾನು ಇಲ್ಲೆ 
ವನಜಸಂಭವ ಮೊದಲಾದ ದೇವತಿಗಳು 
ಘನವಾಗಿ ಪೂಜಿಸಿ ಕೊಂಡಾಡಿದರು ಕೇಳಿ 
ಮನುಜ ಕೇಸರಿರೂಪ ರೂಪ ಲಿಂಗಾಕಾರದಲ್ಲಿ 
ಜನರಿಗೆ ತೋರುವ ನಾನಾರೂಪಾತ್ಮಕ 
ಕನಕ ಕೊಡುವ ನಮ್ಮ ವಿಜಯವಿಠಲರೇಯಾ 
ಅನುತಾಪ ಬಿಡಿಸಿ ಆನಂದ ಸುಖವ ಕೊಡುವ ॥ 4 ॥

 ಆದಿತಾಳ 

ನರಸಿಂಹತೀರ್ಥದಲ್ಲಿ ಮಿಂದು ಶುಚಿಯಾಗಿ 
ಹರಿವಾಯುಗಳ ಭಕ್ತಿ ಸಂಪಾದಿಸೀ 
ನಿರುತ ಸೇವೆಯು ಮಾಡಿ ಕನಕನರಸಿಂಹನ 
ಚರಣಾಂಬುಜಯುಗಳ ಬಿಡದೆ ನೀವು 
ನರ ಓರ್ವನು ಇಲ್ಲಿಗೆ ಯಾತ್ರೆ ಮಾಡಿದರೆ 
ಸುರರು ಮೆಚ್ಚುವರು ಅನಂತಕಲ್ಪಾ 
ಅರೆಮರೆ ಇಲ್ಲವಿದಕೆ ತುಂಗಾಮಹಾತ್ಮಿಯೊಳಗೆ 
ವಿರಚಿಸಿದೆ ನೋಡಿ ಶತ ಅಧ್ಯಾಯ 
ಹರನ ಸುತನ ಪುರಾಣದಲಿ ಸಿದ್ಧ 
ವರದೊರದು ಪೇಳುತಿಪ್ಪರು ಜ್ಞಾನಿಗಳು 
ನಿರಯದೂರ ನಮ್ಮ ವಿಜಯವಿಠಲರೇಯನ 
ಶರಣ ಶುದ್ಧದಲ್ಲಿ ಕೊಂಡಾಡಿ ನಲಿದಾಡಿ ॥ 5 ॥

 ಜತೆ 

ಜಯಂತಿ ನದಿಸ್ನಾನಾತನಕ ನರಸಿಂಹನ 
ಪ್ರೀಯರಾಗಿ ನೋಡುವದು ವಿಜಯವಿಠಲ ಒಲಿವಾ ॥
********

No comments:

Post a Comment