Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ
ಶ್ರೀವೆಂಕಟೇಶದೇವರ ಚರಣಸ್ತೋತ್ರ ಸುಳಾದಿ
ರಾಗ ಅಭೇರಿ
ಧ್ರುವತಾಳ
ಧ್ವಜ ವಜ್ರಾಂಕುಶ ಸುಧಾಂಬುಜದಿಂದೊಪ್ಪುವ ಚರಣಾಂ -
ಬುಜಪಾಣಿ ಹಸ್ತಾದಲ್ಲಿ ಪೂಜೆಗೊಂಬೊ ಚರಣ
ಅಜನ ಪೊಕ್ಕಳಿಂದಲಿ ಸೃಜಿಸಿ ಅರಿಸಿದ ಚರಣ
ರಜತಗಿರಿವಾಸನು ಭಜಿಪ ಸುಂದರ ಚರಣ
ತ್ರಿಜಗದೊಳಗೆ ವಿರಜವಾಗಿಪ್ಪ ಚರಣ
ಭುಜಗಗಿರಿವಾಸ ತಿರಿವೆಂಗಳೇಶ
ವಿಜಯವಿಠಲ ಪೂರ್ಣಾದ್ವಿಜರಾಜನಂತೆ ಪೋಲುವ
ಅಜಸುತಾರ್ಚಿತ ಚರಣ ॥ 1 ॥
ಮಟ್ಟತಾಳ
ಕಾಳಿಂಗನ ಪೆಡಿಯ ತುಳಿದ ಚರಣ
ಬಾಲಿಯರ ಕೈಯ್ಯಾವಾಲಗಗೊಂಬೊ ಚರಣ
ಮೇಲುಲೋಕವ ವಡದ ಲೋಲವಾದ ಚರಣ
ಘಾಳಿನಂದನನ ಕರದಿ ಮೆರೆವ ಚರಣ
ಮೇಲುಗಿರಿ ತಿಮ್ಮ ವಿಜಯವಿಠಲರೇಯಾ
ಊಳಿಗದವರನ್ನ ಉದ್ಧರಿಪ ಚರಣ ॥ 2 ॥
ತ್ರಿವಿಡಿತಾಳ
ದಾನವಾರೆದೆಯಲ್ಲಿ ವದೆದು ನಲಿದ ಚರಣ
ಕಾನನವೆಂಬೊ ದುರಿತ ದಹಿಸಿಬಿಡುವ ಚರಣ
ವಾಣಿ ಸ್ತುತಿಲಂದು ಲೇಶ ತೋರಿದ ಚರಣ
ಮಾಣದೆ ಭಕುತರಿಗೆ ಗೋಚರವಾಗುವ ಚರಣ
ದಾನವ ಬೇಡಿದ ಗಗನವಡೆದ ಚರಣ
ಧ್ಯಾನದಲ್ಲಿ ಪೊಳೆವ ಶೋಭನ ಚರಣ
ಏನೆಂಬೆ ಚತುರ್ದಶ ಲೋಕಬೆಳಗುವ ಚರಣ
ದೀನನಾ ನೆಂದೆನಲು ದಯಮಾಡುವ ಚರಣ
ಭಾನುವಿನನಂತ ಕಿರಣ ಮೀರಿದ ಚರಣ
ಭೂನಾಥವರಗಿರಿ ವಿಜಯವಿಠಲ ತಿಮ್ಮಾ
ಆನಂದ ಕೊಡುತಿಪ್ಪ ಐಶ್ವರ್ಯಕರ ಚರಣ ॥ 3 ॥
ಅಟ್ಟತಾಳ
ಅಸುರನ್ನ ಕೊಂದ ಸುಧಾಮಯಾದ ಚರಣ
ಎಸಳು ಬೆರಳು ಪಙ್ತಿಯಿಂದಲೊಪ್ಪುವ ಚರಣ
ಶಶಿಮುಖಿಯ ಪಾವನಗೈಸಿದ ಚರಣ
ಹಸುಮಕ್ಕಳೊಡನೆ ಕುಣಿದಾಡಿದಾ ಚರಣ
ವಿಷವರ್ಜಿತನಾದ ವೈಲಕ್ಷಣ ಚರಣ
ಮಿಸುಣಿಪ ಪೊಂಗೆಜ್ಜೆ ಪರಿಪೂರ್ಣ ಚರಣ
ನಸುನಗೆ ತಿರ್ಮಲ ವಿಜಯವಿಠಲ ಕರು -
ಣಿಸಿ ನಂಬಿದವರಿಗೆ ಫಲವೀವ ಚರಣ ॥ 4 ॥
ಆದಿತಾಳ
ಕಾರುಣ್ಯಸೋನಿಯ ಗರೆವದು ಈ ಚರಣ
ಆರಾದರಾಗಲಿ ಭಕುತಿಗೆ ವಲಿವಾ ಚರಣ
ಬಾರಿಬಾರಿಗೆ ಜಗವ ಪಾಲಿಸುವ ಚರಣ
ಸಾರಲು ಸಂಸಾರ ಬಿಡಿಸುವ ಸಿರಿ ಚರಣ
ದೂರಕ್ಕೆ ದೂರವಾಗಿ ನಿಲುಕದಿಪ್ಪ ಚರಣ
ಮಾರಿಗಳಿಗೆ ಮಸೆದ ಶೂಲವಾದ ಚರಣ
ಭೇರಿ ದುಂದುಭಿಯಿಂದ ವಾಲಗವಾದ ಚರಣ
ವಾರವಾರಕೆ ಎನಗೆ ಪ್ರಸನ್ನವಾದ ಚರಣ
ಶ್ರೀರಮಾರಮಣ ತಿಮ್ಮ ವಿಜಯವಿಠಲ ಸರ್ವಾ -
ಧಾರವಾಗಿ ಎಲ್ಲ ವ್ಯಾಪಿಸಿದ ಚರಣ ॥ 5 ॥
ಜತೆ
ಗರುಡನ ಶೃಂಗಾರ ಕರದಿ ವಪ್ಪುವ ಚರಣ
ಗಿರಿಯ ತಿಮ್ಮ ವಿಜಯವಿಠಲರೇಯನ ಚರಣ ॥
***********
No comments:
Post a Comment