ಶ್ರೀ ವಿಜಯದಾಸಾರ್ಯ ವಿರಚಿತ ಭೂವರಹಾವತಾರ ಸ್ತೋತ್ರ ಸುಳಾದಿ
ರಾಗ ತೋಡಿ
ಧ್ರುವತಾಳ
ಭೂವರಹ ಅವತಾರ ಶೃಂಗಾರ ಗುಣಾಕಾರ
ದೇವರ ದೇವನೆ ಧಾರುಣಿಧರಾ ದಾ -
ನವರ ವಿಪಿನ ಕುಠಾರ ಕಲುಷಹರಾ
ಸ್ಥಾವರ ಜಂಗಮ ಜಠರದೊಳಗೆ ಯಿಟ್ಟ
ಶ್ರೀವರ ಸರ್ವಸಾರಭೋಕ್ತ ಶ್ರೀಮದಾನಂತ
ಜೀವರಾಖಿಳರಿಗೆ ಬಲುಭಿನ್ನ ದಯ ಪಾ -
ರಾವರ ಮೂರುತಿ ಸುರನರೋರಗ ಪಾ -
ರಾವರ ವಿನುತಾ ವಿನುತಜ ಗಮನಾ ಕ್ಷೀರ -
ವಾರಿಧಿ ಶಯನಾ ವಾರಿಜನಯನಾ ಇಂ -
ದೀವರ ಶ್ಯಾಮ ಶ್ರೀವಿಜಯವಿಟ್ಠಲರೇಯಾ
ತಾವರೆ ಜಲದೊಳಗಿದ್ದಂತೆನ್ನೊಳಗಿಪ್ಪಾ
ಭೂ ವರಹಾವತಾರಾ ॥ 1 ॥
ಮಟ್ಟತಾಳ
ಸುರರನ ಬೆಂಬತ್ತಿ ಧರಣಿಯನು ಕಿತ್ತಿ
ಸುರಳಿಯ ಮಾಡಿ ಸುತ್ತಿ
ಭರದಿಂದಲಿ ಎತ್ತಿ ಇರಿಸಿದ ದುರ್ಮತ್ತಿ
ಧರಣಿಯ ನಿಜಪತ್ತಿ ವಿಜಯವಿಟ್ಠಲ ಮೂರ್ತಿ
ಮೆರೆದನು ಸತ್ಕೀರ್ತಿ ಧರಣಿಯ ನಿಜಪತ್ತಿ ॥ 2 ॥
ರೂಪಕತಾಳ
ಅಸುರ ಕನಕಾಕ್ಷನು ವಸುಧಿಯಾ ಎಳೆದೊಯ್ದು
ರಸಾತಳದೊಳಗೆ ಇರಿಸಿದಾನಂದೂ
ರಸಹೀನವಾಗೆ ನೀರಸರಾಗಿ ಪೋಗಿ ಸುಮ -
ನಸರು ಚಿಂತೆಯಲಿ ಕಾಣಿಸದೆ ಪುಣ್ಯ -
ಬಿಸಜಭವನೆಡೆಗೆ ಅಸುರರಿಪುಗಳು ಪೋಗಿ
ಪುಸಿಯದೆ ಬಿನ್ನೈಸೆ ವಸುಧಿಯಾ ಸ್ಥಿತಿಯಾ
ಪಶುಪತಿ ಪಿತ ತಿಳಿದು ವಿಜಯವಿಟ್ಠಲರೇಯಗೆ
ಹಸುಳೆಯಂದದಲಿ ಉಬ್ಬಸವ ಪೇಳಿದನು ॥ 3 ॥
ಝಂಪೆತಾಳ
ಸೂಕರ ರೂಪವ ತಾಳಿ ಕೋರಿದಾಡಿಲಿಂದ
ಭೀಕರ ಶಬ್ಧದಿ ದಶದಿಶೆಗಳೆಲ್ಲ ಬೀರುತ್ತ
ಭೂಕಂಪಿಸುವಂತೆ ಘುಡಿಘುಡಿಸೆ ಘೋಷವ
ಲೋಕೇಶ ಮುಖ್ಯರು ಸುರರೆಲ್ಲ ಸುಖಬಡಲು
ಶೋಕವಾಯಿತು ದೈತ್ಯಾವಳಿಗೆ ವೇದಗಳು
ವಾಕು ತೊದಲನುಡಿ ಗದಗದನೆ ಕೊಂಡಾಡೆ
ವೈಕುಂಠಪತಿ ನಮ್ಮ ವಿಜಯವಿಟ್ಠಲನು ವಿ -
ವೇಕರನೊಡಗೂಡಿ ನೂಕಿದನು ಬಲವಾ ॥ 4 ॥
ತ್ರಿಪುಟತಾಳ
ಇಳಿಯಾ ಬಗದು ರಸಾತಳಕೆ ನಿಲ್ಲದೆ ಪೋಗಿ
ಪೊಳೆವ ದಾಡಿಲಿಂದ ಖಳನ ಕುಕ್ಕಿರಿದೂ
ಕೊಲಹಾಲವೆಬ್ಬಿಸಿ ನೆಲಕೆ ಅಪ್ಪಳಿಸಿ
ಬಲು ಬಲವಂತ ನಾದವನಾ
ಅಳಿದು ಆ ಕ್ಷಣದಲ್ಲಿ ನೆಲಕೆ ಕೆಡಹಿ
ನೆಲನಾ ಪಲುದುದಿಯಲಿ ಪೊತ್ತು ಕಿಲಿ
ಕಿಲಿ ನಗುತಾಲಿಪ್ಪ ಹಲವು ಮಾತಿಲಿ
ಜಲಜನಾಭನೆ ನಮ್ಮ ವಿಜಯವಿಟ್ಠಲರೇಯಾ
ವೊಲವ ಕಿಟಿದೇವಾನೆ ಇಳಿಯ ಭಾರಹರಣಾ ॥ 5 ॥
ಅಟ್ಟತಾಳ
ನಾರಾಯಣ ಕೃಷ್ಣ ಅಚ್ಯುತ ಗೋವಿಂದ
ನಾರದ ವರದ ಗೋವಿಂದಾನಂತಾ
ಶೌರಿ ಮುರಾರಿ ಮುಕುಂದ ಸದಾನಂದಾ
ಶ್ರೀರಮಣನೆ ಜ್ಞಾನಪುಂಜಾನೆ ಕುಂಜರ
ದಾರುಣ ದೈತ್ಯಾರಿ ಕಾರುಣ್ಯ ಮೂರುತಿ
ಈ ರೀತಿಯಲಿ ಸ್ತೋತ್ರ ಧಾರುಣಿದೇವಿ ಅ -
ಪಾರವಾಗಿ ಮಾಡೆ
ಮಾರಜನಕ ಹರಿ ವಿಜಯವಿಟ್ಠಲರೇಯಾ
ಗೀರವಾಣರ ಪ್ರತಿ ಸಾರವ ಹರಿಸಿದಾ ॥ 6 ॥
ಆದಿತಾಳ
ದುಂದುಭಿ ಮೊರೆಯೆ ಮೇಲೆ ಮಂದರ ಮೊಗ್ಗೆ ಗರಿಯೆ
ಗಂಧರ್ವಾದಿಗಳು ನಾರಂದ ತುಂಬರಾರು ನಿಂದು
ವಂದಾಗಿ ಪಾಡುತ್ತ ನಂದಾದಿಂದ ನಲಿದಾಡೆ
ಇಂದುವಿನೊಳು ಕಳಂಕ ಪೊಂದಿದಂತೆ ದಾಡೆ ತುದಿಗೆ
ಸುಂದರ ವಸುಂಧರವು ಛಂದದಿಂದ ವೊಪ್ಪುತಿರೆ
ಮಂದಾಕಿನಿಜನಕ ವಿಜಯವಿಟ್ಠಲ ಉರ -
ಗೇಂದ್ರಗಿರಿಯಲ್ಲಿ ಬಂದು ನಿಂದ ನಿಗಮಗೋಚರ ॥ 7 ॥
ಜತೆ
ಸ್ವಾಮಿಪುಷ್ಕರಣಿಯವಾಸಿ ಕ್ರೋಡವೇಷಾ
ಭೂಮಿರಮಣ ನಮ್ಮ ವಿಜಯವಿಟ್ಠಲ ತಿಮ್ಮಾ ॥
***********
Another version
Audio by Mrs. Nandini Sripad
ಭೂವರಾಹ ಅವತಾರ ಶೃಂಗಾರ ಗುಣಾಕಾರಾಶ್ರೀ ಭೂವರಾಹದೇವರ ಸ್ತೋತ್ರ ಸುಳಾದಿ ,
ಶ್ರೀ ವಿಜಯದಾಸರ ರಚನೆ , ರಾಗ ತೋಡಿ
************
No comments:
Post a Comment