Sunday, 8 December 2019

ಧ್ಯಾನವ ಮಾಡು pranesha vittala ankita suladi ಬಿಂಬಧ್ಯಾನ ಸುಳಾದಿ DHYANAVA MAADU BIMBADHYANA SULADI



Audio by Mrs. Nandini Sripad

ಶ್ರೀ ಪ್ರಾಣೇಶದಾಸಾರ್ಯ ವಿರಚಿತ 

 ಬಿಂಬಧ್ಯಾನ ಸುಳಾದಿ 
(ಹೃದಯಸ್ಥ ಅಷ್ಟಪತ್ರಕಮಲ ವಿವರ , ಅಲ್ಲಿಪ್ಪ ಅಗ್ರೇಶ ಪ್ರಾದೇಶ ಮೂಲೇಶನಕಾರ್ಯ ಮುಖ್ಯಪ್ರಾಣಾಂತರ್ಗತ ಬಿಂಬಧ್ಯಾನ) 

 ರಾಗ ಕಾಂಬೋಧಿ 

 ಧ್ರುವತಾಳ 

ಧ್ಯಾನವ ಮಾಡು ಮನುಜಾ ದೇಹಾಂತರ್ಗತ ಹರಿಯ
ಭಾನು ಸನ್ನಿಭ ಭಕ್ತವತ್ಸಲ ದೇವಾ
ಜ್ಞಾನವಂತರು ಎಲ್ಲಾ ಈತನ ಮನದಲ್ಲಿ
ಧೇನಿಸಿ ಅಪವರ್ಗ ಐದುವರೂ
ದಾನವಾಂತಕ ರಂಗ ಆಪ್ತ ಜನನಿಯಂತೆ
ತಾನೆ ಕರುಣದಿಂದ ಕಡು ಪಾಲಿಪಾ
ಈ ನುಡಿ ಸಿದ್ಧವೆನ್ನು ಎಂದಿಗೂ ಪುಶಿ ಅಲ್ಲ
ಧೇನಿಪ ಮಾರ್ಗವ ಈ ಪರಿ ತಿಳಿವದು
ಈ ನವ ದ್ವಾರದಿಂದ ಬಲು ಪರಿಶೋಭಿಪ
ನಾನಾವರಣವುಳ್ಳ ದೇಹಾಖ್ಯ ನಗರದಿ
ಪ್ರಾಣಾನೆಂಬೊ ಮಂತ್ರಿಯಿಂದಲೊಪ್ಪುತ ದೇವಾ
ಆ ನಳಿನಭವ ರುದ್ರಾದಿಗಳಿಂದ
ತಾನು ಪೂಜೆಯಗೊಳುತ ದಹರ ಹೃತ್ಪದ್ಮವೆಂಬ
ನಾನಾ ಶೃಂಗಾರ ಸಿಂಹಾಸನದಲ್ಲಿ ಕುಳಿತಿಪ್ಪಾ
ಜ್ಞಾನಾನಂದಪೂರ್ಣ ಬಿಂಬನೋಪಾದಿಯಲ್ಲಿ
ಆ ನಳಿನ ಕರ್ಣಿಕೆಯಲ್ಲಿ ಶ್ರೀದೇವಿಯು
ಆ ನಾಳದಲ್ಲಿ ವಾಸಾ ಭೂದೇವಿಯೂ
ಭಾನುತೇಜದಲ್ಲಿ ದುರ್ಗಾದೇವಿಯು ನೀತಿ -
ಯಾನು ತಿಳಿ ಕಮಲ ತ್ರಿಸ್ಥಳದಲ್ಲಿ
ಪ್ರಾಣನಿವಾಸ ನಮ್ಮ ಪ್ರಾಣೇಶವಿಟ್ಠಲನ್ನ 
ಮಾನಸದಲ್ಲಿ ನೋಡಿ ಸುಖಿಸು ಸತತ ॥ 1 ॥ 

 ಮಟ್ಟತಾಳ 

ಕಮಲದಿ ಶೋಭಿಪ ಅಷ್ಟಪತ್ರಗಳು
ವಿಮಲ ಕಾಂತಿಯಿಂದ ವಿದಿಶ ದಿಶಗಳಲ್ಲಿ
ಸಮವಾಗಿಪ್ಪವು ಅದರೊಳು ಶಕ್ತ್ಯಾದಿ
ರಮೆಯರಸನ ನಿತ್ಯ ವಿಮಲ ಮೂರ್ತಿಗಳು
ಶಮಲ ನಾಶಕವಾಗಿ ಪೊಳೆವವು ಹನ್ನೆರಡು
ಕ್ರಮದಿಂದಲಿ ಪೂರ್ವ ಮೊದಲಾದ ದಿಶಗಳಲಿ
ರಮಿಸುತಿಪ್ಪವು ನೋಡು ಎರಡೆರಡು ಮೂರ್ತಿ
ಪ್ರಮತಿಯಿಂದಲಿ ಗುಣಿಸು ಎಂಟಾದವು ನೋಡು
ಭ್ರಮಿಸದೇ ತಿಳಿವದು ನಾಲ್ಕು ವಿದಿಶಗಳಲಿ
ಕ್ರಮ ಮೀರದಂತೆ ಪೊಳೆವುತಿವೆ ನಾಲ್ಕು
ಸುಮನಸರಲ್ಲೆಲ್ಲಿ ದಿಕ್ಪಾಲಕರಾಗಿ
ನಮಿಸುತಿಪ್ಪರು ಕಾಣೊ ದ್ವಾದಶ ಮೂರ್ತಿಗಳು
ಅಮಿತ ತೇಜದ ಶಕ್ತ್ಯಾದ್ದೇಕಾ ದಶರೂಪಗಳು
ಪ್ರಮದಾಕಾರಗಳು ತರುವಾಯದಿ ವಂದು
ಪುಮಾಕೃತಿ ಧರಿಸಿನ್ನು ಹೃದಯದಿ ಶೋಭಿಪವು
ಕಮಲಸಂಭವ ವಾಯು ಅಧಿಷ್ಠಾನ ದ್ವಯದಲ್ಲಿ
ಕುಮುದಪತಿಯ ತೇಜ ಪ್ರಾಣೇಶವಿಟ್ಠಲ 
ಸುಮತಿಯಿಂದಲಿ ನೆನಿಯೆ ಮನದಲ್ಲಿ ಪೊಳೆವನು ॥ 2 ॥ 

 ರೂಪಕತಾಳ 

ಹೃದಯಕಮಲದಲ್ಲಿಪ್ಪ ಕರ್ಣಿಕಾಗ್ರದಲ್ಲಿ
ಸದಮಲ ಅಗ್ರೇಶ ಸದಾ ವಾಸವಾಗೀ
ಅದುಭೂತಚರ್ಯನು ಆತನೆ ಪ್ರಾಜ್ಞನು ಕಾಣೊ
ತದು ತದು ಜೀವರಿಗೆ ಸುಪ್ತಿದಾಯಕನೆನಿಸಿ
ಮುದದಿಂದ ಅಂಗುಷ್ಠ ಮಾತ್ರ ರೂಪವ ಧರಿಸಿ
ಮಧುಸೂದನ ಹರಿ ತಾನು ಅದುಭೂತ ಕಾರ್ಯ ಮಾಳ್ಪ
ತದನಂತರದಲ್ಲಿ ಶ್ರೀಪದುಮನಾಭನೆ ಸರ್ವ
ಹೃದಯಾಕಾಶದಲ್ಲಿ ವೊದಗಿ ತಾ
ಪ್ರಾದೇಶ ಪರಿಮಿತ ರೂಪದಲಿ
ಸದಾಕಾಲದಲ್ಲಿದ್ದು ಪುರುಷನಾಮಕನಾಗಿ
ಸುದರುಶನಧರನು ತಾನಲ್ಲಿಪ್ಪ ಬಿಡದಂತೆ
ಪದುಮ ಕರ್ಣಿಕೆಯ ಮೂಲದೇಶದಲ್ಲಿ ಶ್ರೀ
ಪದುಮೆಯರಸ ಹರಿ ಮೂಲೇಶನೆನಸುತಲಿ
ಮುದಭರಿತನಾಗಿ ಅಂಗುಷ್ಠಾಗ್ರರೂಪನಾಗಿ
ಮದನನ್ನ ಜನಕ ವಿಜ್ಞಾನಾತ್ಮ ಎಂಬ ನಾ -
ಮದಲಿ ಶೋಭಿಸುತಿಪ್ಪ ಮುರವೈರಿ ಮುದದಿಂದ
ಉದಧಿಶಯನ ನಮ್ಮ ಪ್ರಾಣೇಶವಿಟ್ಠಲ 
ಸದ ಧೇನಿಪರ ಮನ ಪದುಮಕೆ ತುಂಬೆ ಎನಿಪಾ ॥ 3 ॥ 

 ಝಂಪಿತಾಳ 

ಮೂಲೇಶ ಹರಿಪದ ಕೀಲಾಲಜ ಯುಗಳ
ಮೂಲವೆನ್ನೆ ಕರದಿ ಮೇಲು ಭಕುತಿಯಿಂದ
ಶೀಲಗುಣ ಭಾರತಿಲೋಲ ತಾನಾದರದಿ
ಮೂಲೇಶಗಭಿಮುಖದಿ ಶ್ರೀಲಕುಮಿಪತಿ ಗುಣ -
ಜಾಲನೆನಿಸುತ ಧರಿಸಿ ಕಾಲವಂದರಘಳಿಗೆ
ಸೋಲದಲೆ ಇದ್ದು ಶಚಿಲೋಲ ದಿಶಗಭಿಮುಖಿಸಿ
ಲೀಲೆಯಿಂದಿರುತಿಪ್ಪ ಮೂಲೋಕಪತಿ ಮುಖ್ಯಪ್ರಾಣ -
ನಲಿ ಶುಚಿಷತ್ ಮೇಲು ನಾಮದಲಿಂದ ಮೆರೆವ ಶ್ರೀಹರಿಯಿಪ್ಪ
ಳಾಳೂಕ ಪ್ರಾಜ್ಞ ಅಪರಾಜಿತ ವೈಕುಂಠ
ಶ್ರೀಲೋಲನಾದಂಥ ಇಂದ್ರನೆಂಬೊ ನಾಮ
ಮಾಲಿಕೀಯಲಿಂದ ಬಲು ಶೋಭಿಸುತಲೀ
ಪಾಲಸಾಗರಶಾಯಿ ಪ್ರಾಣೇಶವಿಟ್ಠಲ 
ಮೂಲೇಶನಾಗಿ ತಾ ಲೀಲೆ ಈ ಪರಿ ಮಾಳ್ಪ ॥ 4 ॥ 

 ತ್ರಿವಿಡಿತಾಳ 

ಶ್ರೀಮುಖ್ಯಪ್ರಾಣನು ಸರಸದಿಂದಲಿ ನಿತ್ಯ
ಈ ಮೂರು ವಿಧ ಜೀವರೊಳಗೆ ಇದ್ದೂ
ಯಾಮ ಯಾಮಕೆ ಬಿಡದೆ ತಾ ಮೇಲು ಕರುಣದಿ
ಶ್ರೀಮುಕುಂದನ ಹಂಸಮಂತ್ರಗಳ
ತಾಮರಸದಿ ಪೊಂದಿ ಮನವಿಡಿದು ತಿರುಗಿ
ಆ ಮುಹೂರ್ತ ಪರಿಯಂತ ಜಾಗ್ರತೆಯಿಂದ
ತಾ ಮೀರದಂತೆ ಇಪ್ಪತ್ತೊಂದು ಸಾವಿ -
ರ ಮೇಲಾರುನೂರು ಶ್ವಾಸಂಗಳ
ಶ್ರೀಮಾಧವನ ಸಂಪ್ರೀತಿಗೋಸುಗ ಜಪಿಸಿ
ಈ ಮಹಿಯೊಳು ಯೋಗ್ಯಜೀವರಿಂದ
ಸಾಮಜವರದಗರ್ಪಣೆ ಮಾಡಿಸುವ
ಈ ಮಹಿಮನು ತನ್ನ ದ್ವಾರದಿಂದ
ಕಾಮಿತಪ್ರದ ನಮ್ಮ ಪ್ರಾಣೇಶವಿಟ್ಠಲ 
ಕಾಮಿತಪ್ರದನಾಹ ಈ ಪರಿ ಧೇನಿಸೆ ॥ 5 ॥ 

 ಅಟ್ಟತಾಳ 

ಕುದುರೆ ಬಾಲದ ತುದಿಯ ಕೂದಲು ಶತ
ವಿಧ ವಿಭಾಗವ ಮಾಡಿ ಅದರೊಳಗೊಂದನು
ಅದರಂತೆವೇ ನೂರು ವಿಧದಿ ವಿಭಾಗಿಸ -
ಲದರೊಳಗುಳಿದ ವಂದಂಶದ ಪರಿಮಿತ ಕಾಣೊ
ವಿಧಿ ಭವಾದಿಗಳ ವಿಡಿದು ತೃಣ ಪರಿಯಂತ
ಒದಗಿ ಜೀವರ ಮಿತಿ ಸದಾಕಾಲ ತಿಳಿವದು
ಇದೆ ಜೀವ ಪವನನ ಪದಕಂಜಗಳ ವಿಡಿದು ಬಲು ತಾ ಸಮೀ -
ಪದಲಿ ನಿರುತದಲಿದ್ದು ಸದಸತ್ಕರ್ಮವ ಮಾಳ್ಪ
ಅದುಭೂತ ಸಹಸ ಪ್ರಾಣೇಶವಿಟ್ಠಲ 
ಸದಮಲನಾಗಿ ಸರ್ವದ ಕಾರ್ಯಗಳ ಮಾಳ್ಪ ॥ 6 ॥ 

 ಆದಿತಾಳ 

ಹಂಸನಾಮಕನು ಹೃದಯಕಮಲದಲ್ಲಿ
ಹಂಸದಂತೆ ಸಂಚಿರಿಸುವ ದಳದಲ್ಲಿ
ಕಂಸಾರಿಯು ಅಷ್ಟಭುಜದಲ್ಲಿ
ಹಿಂಸೆಯಿಲ್ಲದೆ ಸದ ಧರಿಸಿ ಸುಂದರ ಪದ -
ಪಾಂಸುಗಳಿಂದಲಿ ಪರಿಹರಿಸುತಲಿ
ಸಂಸಾರಿಗೆ ದಳ ಭೇದದಿಂದ
ಕರ್ಮಗಳನು ತಾ ಕೊಡುತಿಪ್ಪ ಹರಿ
ಭ್ರಂಶವಿಲ್ಲದಲೇ ಬಹುವಿಧ ಫಲವೀವ
ಸಂಸೃತಿ ನಾಶ ಪ್ರಾಣೇಶವಿಟ್ಠಲ ಸೀ -
ತಾಂಶು ವದನ ಪಾಲಿಪ ಪೊಳೆವುತಲಿ ॥ 7 ॥ 

 ಜತೆ 

ಈ ಪರಿಯಲಿ ನಿತ್ಯ ಶ್ರೀಪತಿಯ ಧೇನಿಸು
ಅಪಾರ ಮಹಿಮ ಪ್ರಾಣೇಶವಿಟ್ಠಲ ಪೊಳೆವಾ ॥
******
ಧ್ಯಾನವ ಮಾಡು ಮನುಜಾ ದೇಹಾಂತರ್ಗತ ಹರಿಯ,
ಬಿಂಬಧ್ಯಾನ ಸುಳಾದಿ ,
ಶ್ರೀ ಪ್ರಾಣೇಶದಾಸರ ರಚನೆ , ರಾಗ ಕಾಂಬೋಧಿ

for lyrics please click
            DHYANAVA MAADU
*********


No comments:

Post a Comment