Audio by Mrs. Nandini Sripad
ರಾಗ ಮಧ್ಯಮಾವತಿ
ಧ್ರುವತಾಳ
ರಾಜ ರಾಜರಮಣಿ ರಾಜಶೇಖರ ವಿನುತಾ
ರಾಜ ತೇಜೋನಿಧಿ ರಾಜಾಧೀಶ
ರಾಜಹಂಸಾ ನಯನಾ ರಾಜಶೇಖರ ವಿ -
ರಾಜಿತ ಕೀರ್ತಿ ಗಜರಾಜವರದಾ
ರಾಜವದನಾ ರಿಪುರಾಜ ಮಸ್ತಕಶೂಲಾ
ರಾಜರಾಜೋತ್ತುಮ ರಾಜವಿನುತಾ
ರಾಜೀವದೊಳಗಿದ್ದ ರಾಜೀವನ ಪುಟ್ಟಿಸಿದ
ರಾಜಮಾರ್ತಾಂಡ ದ್ವಿಜರಾಜಗಮನಾ
ರಾಜ ರಾಜರು ನಿನ್ನ ರಾಜಿಸುವ ಚರಣ -
ರಾಜೀವದಲ್ಲಿ ವಾಲಗ ಮಾಳ್ಪರೂ
ರಾಜ ರಾಜಾಗ್ರಣ್ಯ ರಾಜಾಭಿಷೇಕಕ್ಕೆ
ರಾಜ ನೀನಲ್ಲದೆ ರಾಜರುಂಟೇ
ರಾಜ ಗಂಭೀರ ಅಪರಾಜಿತನಾಮ ನಮ್ಮ
ವಿಜಯವಿಠ್ಠಲ ರಂಗರಾಜ
ರಾಜ ಸಮುದ್ರರಾಜಶಯನನೇ ॥ 1 ॥
ಮಟ್ಟತಾಳ
ದಶಶಿರನೆಂಬುವನು ಅಸಮ ವೀರನಾಗಿ
ಬಿಸಿನಿಧಿ ಮಧ್ಯದಲ್ಲಿ ತ್ರಿದಶರ ಶೆರೆ ಇಡಲು
ದಶದಿಕ್ಕಿನ ಒಳಗೆ ಪೆಸರಾಗಿ ಪಸರಿಸುತ
ಪಶುಪನ ವರದಿಂದ ಕುಸಿಯದಲಿರುತಿರೇ
ಅಸುರನ ಉಪಹತಿಗೆ ವಸುಧಿ ಭಾರವಾಗೆ
ಬಿಸಿಜಾಭವ ಸುಮನಸರೆಲ್ಲರು ಪೋಗಿ
ಬಿಸಿಜದಳನಯನ ವಸುಧಿ ಸಂರಕ್ಷಕನೇ
ಅಸುರರ ಶಿಕ್ಷಕನೆ ಆ ಸಮಯ ಬಂದಿದೆ
ದೆಶೆಗೆಟ್ಟವರ ಪಾಲಿಸಬೇಕೆಂದೆನುತ
ಶಿಶುಗಳೊದರಿದಂತೆ ಎಸದು ಮೊರೆಯಿಡಲು
ವೃಷಭನಾಮಕದೇವ ವಿಜಯವಿಠ್ಠಲರೇಯನ
ಬಿಸಿಜ ಚರಣದಲ್ಲಿ ಹಸನಾಗಿ ಬಿನ್ನೈಸೇ ॥ 2 ॥
ರೂಪಕತಾಳ
ಮೂರು ಗುಣರಹಿತ ಮೂರುತಿ ಈತನ
ಕಾರುಣ್ಯವನ್ನು ಇನ್ನಾರು ಬಲ್ಲವರಿಲ್ಲ
ವಾರಿಜಾದ್ಯರ ಸಾರೆಗೆರದು ಶ -
ರೀರವ ತಡವರಿಸಿ ತಾರತಮ್ಯದಿಂದ
ಭಾರ ಎನ್ನದು ಎಂದು ಭರವಸವ ಇತ್ತು
ಕ್ರೂರನಿಂದಲಿ ಬಂದ ಭಾರ ಇಳಿಸುವೆನೆಂದು
ಧಾರುಣಿಯೊಳಗಿತ್ತ ಈರೈದು ರಥದವನು
ನಾರಾಯಣನು ಕುಮಾರನಾಗಲೆಂದೂ
ಆರಾಧನೆಯ ಮಾಡೆ ಶ್ರೀರಾಮನೆಂದೆಂಬವ -
ತಾರವನ್ನು ಧರಿಸಿದ ರಮಾರಮಣನೂ
ಚಾರುಗುಣ ನಿಲಯ ವಿಜಯವಿಠ್ಠಲರೇಯಾ
ಸಾರಿದವರ ಮನೋಹರವ ತೋರುತ್ತಾ ॥ 3 ॥
ಝಂಪೆತಾಳ
ಮುನಿಪ ಕೌಶಿಕನ ಯಾಗವ ಕಾಯಿದು ತಾಟಕಿ
ದನುಜಿಯ ಮುರಿದು ನಿಜಾ -
ನನುಜನ ಕೂಡ ಜನಕ ಪುರಕೆ ಗ -
ಮನವಾಗಿ ಪೋಗುತ್ತ ಮುನಿಯಾಂ -
ಗನಿಯ ಶಾಪವನ್ನೆ ತೊಡದೂ ಅನಲಾ -
ಕ್ಷನ ಧನಸು ಮುರಿದು ನಿಕ್ಕಡಿ ಮಾಡಿ
ಜನಕರಾಯನ ನಂದನಿಯ ನೆರದೂ
ಅನುವಾರದೊಳಗೆ ಭೃಗು ತನುಜನ್ನ ಪೊಕ್ಕಳಲಿ
ದನುಜ ಸೇರಿರಲು ಬಾಣದಲಿ ಸದದೂ
ತನಗೆ ತಾನೇ ಲೀಲೆ ತೋರಿದ ಮಹದೈವ
ವಾತನೆ ಕಾಣೋ ಗೋಹಿತ ವಿಜಯವಿಠ್ಠಲ ರಾಮ ॥ 4 ॥
ತ್ರಿವಿಡಿತಾಳ
ಪಿತನ ಮಾತನು ಮನ್ನಿಸಿ ಸತಿಸಹಿತ ಭಾಗೀ -
ರಥಿಯ ದಾಟುತಲಿ ಭಕುತಗೊಲಿದೂ
ಅತಿಶಯವಾದ ಪರ್ವತ ಚಿತ್ರಕೂಟದಲಿ
ಯತಿಗಳಿಂದಲಿ ಪೂಜಿತನಾಗುತ
ಮತಿಹೀನನಾಗಿ ಬಾಳುತಲಿದ್ದ ಕಾಕನ್ನ
ಗತ ಲೋಚನನ ಮಾಡಿ ಕ್ಷಿತಿಗಟ್ಟಿದೇ
ಹಿತವಾಗಿ ಬಂದ ಭರತಗೆ ಹಾವಿಗೆ ಕೊಟ್ಟು
ವ್ರತವ ಧರಿಸಿದ ಉನ್ನತ ಮಹಿಮಾ
ಪಥಚಾರನಾಗಿ ಶೋಭಿಸುತ ದಂಡಕಾರಣ್ಯ
ಯತಿಪುಂಗವ ಕುಂಭಸುತನ ಕಂಡು
ಪ್ರತಿರಥನಾಮಾ ವಿಜಯವಿಠ್ಠಲ ರಘು -
ಪತಿ ನೀನೆ ಉತ್ಪತ್ತಿ ಸ್ಥಿತಿ ಲಯಕರ್ತನೇ ॥ 5 ॥
ಅಟ್ಟತಾಳ
ಮೋಸದ ಅಸುರಿಯ ಮೂಗು ಕೊಯ್ದು ಖರ
ದೂಷಣಾದ್ಯರನ್ನ ಕೊಂದು ಗೌತುಮೆಯಲ್ಲಿ
ವಾಸವಾಗಿದ್ದ ಮಾರೀಚ ಮಾಯಾಮೃಗ
ವೇಷವಾಗಿ ಬರೆ ಕೊಂದು ಮಾರ್ಗದಲ್ಲಿ
ಘಾಸಿಯಾಗಿದ್ದ ವಿಹಂಗನ್ನ ಮನ್ನಿಸಿ
ದ್ವೇಷಿ ಕಬಂಧನ ಕಡಿದು ಶಬರಿಯ
ಮೀಸಲ ಭಕುತಿಗೆ ಹಣ್ಣುಸವಿದು ಸಂ -
ತೋಷದಿಂದಲಿ ತುಂಗಾತೀರದಲ್ಲಿ ಪವ -
ನಾ ಸೂನು ಎರಗಲು ಎತ್ತಿ ಮಾತಾಡಿ ದಿ -
ನೇಶ ತನುಜಗೆ ಅಭಯವನ್ನು ಇತ್ತು
ಬೀಸಿ ವಗದೆ ಕಾಲಲಿ ದುಂಧುಮಾರನ್ನ
ನೀ ಸವರಿದೆ ಏಳು ತಾಳುವ ಒಮ್ಮೆಲೆ
ಸಾಸಿರನಾಮನೇ ವಿಜಯವಿಠ್ಠಲ ನರ -
ವೇಷವ ಧರಿಸಿದ ವೈಕುಂಠವಾಸ ॥ 6 ॥
ಆದಿತಾಳ
ಭೀತಿ ಶೂನ್ಯನಾದ ಪುರಹೂತ ಮಗನ ಕೊಂದು ರವಿ
ಜಾತಗೆ ಪಟ್ಟವಗಟ್ಟಿ ಪ್ರೀತಿದೂತ ವಾಯುಜನ್ನ
ಆ ಸೀತೆ ಬಳಿಗೆ ಕಳುಹೇ ಪೋಗಿ
ಮಾತು ತಂದ ಪೇಳಿದಾತಗೆ ವರವನಿತ್ತು
ಕೋತಿ ಕರಡಿ ಸಹಿತವಾಗಿ ಸೇತುವೆ ಬಿಗಿಸಿ ಬಂದ
ನೀತ ವಿಭೀಷಣನ ಕೂಡ ಕಾತುರದಿಂದಲಿ ದಾಟಿ
ಧೂತ ರಾವಣಾದಿಗಳ ಯಾತನಿಗೆ ಬೀಳ್ಕೊಡಿಸಿ
ಪ್ರೀತಿಯಾಸ್ಪದನಾದ ದಾತ ವಿಭೀಷಣಗೆ ಪ್ರ -
ದ್ಯೋತ ಶಶಿ ಉಳ್ಳನಕ ಭೂತಳದೊಳಗೆ ಲಂಕೆ -
ಯ ತಪ್ಪದಂತೆ ಆಳೆಂದಾತಗೆ ಪಟ್ಟವಗಟ್ಟಿ
ಸೀತೆ ಸಹಿತ ಬಂದು ಸಾಕೇತಪುರದಲ್ಲಿ ನಿಂದು
ಧಾತಾದಿಗಳ ಮನಕೆ ಪ್ರೀತಿ ಬಡಿಸಿ ಶೆರೆಯ ಬಿಡಿಸಿ
ಸೀತೆಯರಸ ವಿಜಯವಿಠ್ಠಲ ಭೂತ -
ನಾಥನಿಂದ ಬಂದ ಮಾತು ಮನ್ನಿಸಿದ ಮಹಾತ್ಮಾ ॥ 7 ॥
ಜತೆ
ಸಾರ್ವಭೌಮನೆ ರಾಮಾ ದುರುಳ ದೈತ್ಯ ವಿರಾಮಾ
ಸರ್ವಯೋಗಿ ವಿನಿಶ್ರುತಾ ವಿಜಯವಿಠ್ಠಲ ॥
*********
No comments:
Post a Comment