Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ವೆಂಕಟಗಿರಿ ಮಹಾತ್ಮೆ ಸುಳಾದಿ
ರಾಗ ಮುಖಾರಿ
ಧ್ರುವತಾಳ
ಧನ್ಯನಾದೆನು ಇಂದೀ ಪುಣ್ಯಗಿರಿಯ ತಾ -
ರುಣ್ಯ ಭಕುತಿಯಲ್ಲಿಂದ ದೈನ್ಯಾಮನದಲ್ಲಿ ಕಂಡೆ
ಅನ್ಯಾಯಗೊಳಿಸುವ ಮನ್ಯು ಪಾಪವೆಂಬಾ -
ರಣ್ಯಕ್ಕೆ ಹವ್ಯ ವಾಹನ್ನ ತೋರುತಿದೆ
ಗಣ್ಯವೆ ಇದರ ಲಾವಣ್ಯವರೇಣ್ಯವ
ಬಣ್ಣಿಸಲರಿದು ಹಿರಣ್ಯ ಗರ್ಭಗಾದರು
ಕನ್ಯಾಧಾರುಣಿ ಹಿರಣ್ಯ ತುಲಾಭಾರಾ
ಅನ್ನಾ ದಾನಾದಿಗಳು ಅನ್ಯೋನ್ನ ಮಾಡಲು
ಅನ್ಯಥ ಈ ಯಾತ್ರಿ ಪುಣ್ಯಕ್ಕೆ ಫಲ ಸಾ -
ಮಾನ್ಯವೆನಿಸುವಾದು ಸೌಜನ್ಯರು ಲಾಲಿಪದು
ಕನ್ಯಪತಿಯ ಕಾರುಣ್ಯ ಮೂರುತಿ ಪಾಂಚ -
ಜನ್ಯ ಪಾಣಿ ನಮ್ಮ ವಿಜಯವಿಠ್ಠಲನು ಶಾ -
ರಣ್ಯರಿಗೆ ಅನು ಗುಣ್ಯಾ ನಡಿಸುವಾ ॥ 1 ॥
ಮಟ್ಟತಾಳ
ಸಪ್ತ ಪೆಡೆಗಳು ತಪ್ತ ಕಾಂಚನದಂತೆ
ಸಪ್ತ ವನನಿಧಿ ಸಪ್ತದ್ವೀಪದ ಮದ್ಧ್ಯ
ಸಪ್ತೆರಡು ಲೋಕ ವ್ಯಾಪ್ತವಾಗಿ ಕಿರಣ
ಸಪ್ತಾಶ್ವನ ತೆರದಿ ದೀಪ್ತವಾಗಿದೆ ಸರ್ವ
ತೃಪ್ತ ಮೇಲಗಿರಿ ವಿಜಯವಿಠ್ಠಲನಿಗೆ
ಆಪ್ತನಾಗಲು ಫಲ ಪ್ರಾಪ್ತಿಯಾಯಿತು ಬಿಡದೆ ॥ 2 ॥
ತ್ರಿಪುಟತಾಳ
ಶೃಂಗವೆ ವಜ್ರಾನು ರಂಗು ಮಾಣಿಕದಂತೆ
ಕಂಗಳಿಗೆ ಬಿಡದೆ ಕಂಗೊಳಿಸುತಿದೆ
ಸಿಂಗ ಶಾರ್ದೂಲ ಸಾರಂಗ ಕೂ -
ರಂಗ ವರಹ ವೃಕ ಮಾತಂಗ ಭಲ್ಲುಕ ಪ್ಲಾ -
ವಂಗ ಮಾರ್ಜಾಲ ವಿಹಂಗಾನು ಶುಕ ಪಿಕ ಭೂ
ಜಂಗಮ ನಾನಾಕಾ ಭೃಂಗ ಪತಂಗಾದಿ
ಸಂಘವು ಚೀರುತ್ತಾ ಮಾಡೋ
ಸಂಗ ಲ್ಯಾಡುತಾ ಶೃಂಗಾರದಲಿ ಪೊಳೆಯೆ
ಮಂಗಳಾಂಗ ತುರಂಗ ವದನ ಭಕ್ತರಂತ -
ರಂಗದೊಡಿಯಾ ವಿಜಯವಿಠ್ಠಲರೇಯಾ
ವೆಂಗಳ ನಾಡುವ ಭಂಗಾರ ತಿರುಗಿರಿಯಾ ॥ 3 ॥
ಅಟ್ಟತಾಳ
ಸುರರು ಗಂಧರ್ವರು ಉರಗ ಯಕ್ಷ ಸಿದ್ಧ
ಗರುಡ ಕಿಂಪುರುಷ ಕಿನ್ನರರು ಗುಹ್ಯಕರು ಸಾ -
ಧ್ಯರು ತುಂಬುರಾದಿ ನಿಕರವಲ್ಲಿಗಲ್ಲಿಗೆ
ವರ ತಪಸಿಗಳಾಗಿ ಗಿರಿಯ ತಪ್ಪಲಲೀ
ಗರುಡಾಸನ ನಮ್ಮ ವಿಜಯವಿಠ್ಠಲನ್ನ
ಸ್ಮರಣೆ ಮಾಡುತ ಸಂಚರಿಪುದು ಕಂಡೆ ॥ 4 ॥
ಆದಿತಾಳ
ಶಿಲೆಯೆ ಸಾಲಿಗ್ರಾಮ ಹೊಳಲೆ ಸುದರುಶನ
ಥಳಥಳಿಸುವ ವರ್ನಾ ಮಳಲೆ ಚಕ್ರಾಂಕಿತ
ಇಳೆಯೊಳಗಿದೆ ನಿಶ್ಚಲ ವೈಕುಂಠ ನಗರ
ಸಲೆ ಶ್ವೇತದ್ವೀಪ ಇದೆ ಪೊಳೆವಾನಂತಾಸನ
ಸ್ಥಳವೆಂದು ಉತ್ತಮರು ತಿಳಿದು ಮನ್ನಿಸುವರು
ಭಲಿನೆ ನಾಮ ನಮ್ಮ ವಿಜಯವಿಠ್ಠಲನ್ನ
ಒಲಿಸಿ ಭಜಿಸುವಾರು ಜಲಜ ಗರ್ಭಾದಿಗಳು ॥ 5 ॥
ಜತೆ
ವರಗಿರಿಯ ಯಾತ್ರಿ ಮನಮುಟ್ಟಿ ಮಾಡಲು
ವರವೀವ ಪರನಾಮಾ ವಿಜಯವಿಠ್ಠಲ ತಿಮ್ಮ ॥
*********
No comments:
Post a Comment