Sunday, 8 December 2019

ಅಂತರಂಗದೊಳು vijaya vittala ankita suladi ವೆಂಕಟೇಶ ಅಪರೋಕ್ಷ ಸುಳಾದಿ ANTARANGADOLU VENKATESHA APAROKSHA SULADI

1st Audio by Mrs. Nandini Sripad


2nd Audio by Vidwan Sumuk Moudgalya

ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀವೆಂಕಟೇಶ ಅಪರೋಕ್ಷ ಸುಳಾದಿ 

 ರಾಗ ಭೈರವಿ 

 ಧ್ರುವತಾಳ 

ಅಂತರಂಗದೊಳು ಪೊಳೆವವನು ಶ್ರೀ -
ಕಾಂತನೊ ಬೊಮ್ಮನ ಪಡೆದ ದೇವನೊ 
ಕಂತುಜನಕನೊ ಅನಂತ ನದಿಯ ಪಿತನೊ 
ಅಂತಕಾಂತಕನ ಪೆತ್ತಯ್ಯನೊ ಅಯ್ಯನೊ 
ಸಂತತ ಚಿಂತಿಪ ಭಕ್ತರ ಮನೋಹರನೊ 
ಅಂತಕನೊ ದೈತ್ಯಸಂತತಿಗೆ 
ದಂತಿಯ ಪಾಲಿಸಿದ ಪರಮಪವಿತ್ರನೊ
ಕುಂತಿಯ ಮಕ್ಕಳಿಗೆ ಬಿಡದೆ ಬೆಂಬಲನೊ 
ದಂತವಕ್ರಾದಿಯ ಕೊಂದ ಬಲವಂತನೊ 
ಹೊಂತಕಾರನೊ ಜಗದಂತರಿಯಾಮನೊ 
ತಂತುಗಾರನೊ ಶ್ರಿಂಗಾರವರನೊ 
ಪಂಥದ ದೈವಾವೆ ವಿಜಯವಿಠಲರೇಯಾ 
ಎಂಥವರನ ಭ್ರಾಂತಿಗೊಳಿಸುವ ದಿಟ್ಟನೊ ॥ 1 ॥

 ಮಟ್ಟತಾಳ 

ಶ್ರೀಶ ಈಶ ಶೇಷಭೂಷಾಧೀಶ ದಾಸ -
ರಾಶ ಪಾಶ ಕ್ಲೇಶನಾಶ ದಾಸವೇಷ 
ದಾಶಧೀಶಾಕಾಶವಾಸ ಹೃಷಿಕೇಶ 
 ವಿಜಯವಿಠಲ ಶೇಷಪೋಷ ಲೇಶವೆನಿಸ ॥ 2 ॥

 ತ್ರಿವಿಡಿತಾಳ 

ಅಲೌಕೀಕ ವಸ್ತವೊ ಅಮಂದನಂದಾನೊ 
ಮೂಲಾಧಾರನೊ ಸಕಲಗುಣ ಪರಿಪೂರ್ಣನೊ 
ಕಾಲಾದಿಗಳಧಿಷ್ಠಾನವಾದ ಮಹಿಮನೊ 
ಮೂಲೋಕದಲಿ ಮೆರೆವ ಮುದ್ದು ಲಾವಣ್ಯನೊ 
ಬಾಲಕ್ರೀಡೆಯ ತೆರದಿ ಆಡುವ ಅಗಣಿತನೊ 
ಏಳು ಕಮಲದಲ್ಲಿ ವಾಸವಾಗಿದ್ದವನೊ 
ಏಳು ಗೂಳಿಯನು ಒಂದೇ ಬಾರಿ ಬಿಗಿದವನೊ 
ಲಾಲಿಪಾಡಿಸಿಕೊಂಡ ನಾಗಾರಿಗಮನನೊ 
ಮೇಲುಗಿರಿಯವಾಸ ವಿಜಯವಿಠಲ ವೆಂಕಟ -
ಶೈಲದಲ್ಲಿ ಇಪ್ಪ ಸರ್ವರಾಭೀಷ್ಟನೊ ॥ 3 ॥

 ಅಟ್ಟತಾಳ 

ವೀರಮುದ್ರಿಕೆ ಬೆರಳರವಿಂದ ಪಾದನೊ 
ಭೋರಗರುವಗೆಜ್ಜೆ ಚಾರು ಹೇಮಪೆಂಡೆ 
ವಾರಣ ಜಾನು ಜಂಘೆವುಳ್ಳ ಚಲುವಾನೊ 
ಊರರಂಭ ಉಡದಾರ ಪೀತಾಂಬರ 
ಧಾರನೊ ನಾಭಿಕಮಲ ವೈಯಾರನೊ 
ಹಾರ ಕೌಸ್ತುಭ ಹೀರತಾರಾದಿಸರನೊ 
ಶ್ರೀರಮಣಿ ವಕ್ಷ ಸಿರಿಗಂಧಲೇಪ ಶೃಂ -
ಗಾರದ ದರಹಸ್ತ ಸಾರಿಕಂಬುಧರನೊ 
ಚಾರು ಮೊಗದಂತ ನಾಸನಯನ ಕರ್ನಾ 
ಪಾರ ಭೂಷಣವಾದ ಕಿರೀಟಾಂಗದ ನೂ -
ಪುರ ತಿರುಗಿ ತಿರುಗಿ ತೋರುವ ಜಾಣನೋ 
ಸಾರ ಹೃದಯವಾಸ ವಿಜಯವಿಠಲ ಕಂ -
ಸಾರಿ ಸಾರಿ ಸಾರಿಗೆ ಪೊರೆವವನೊ ॥ 4 ॥

 ಆದಿತಾಳ 

ಮಸ್ತಕದಲ್ಲಿ ಅಭಯ ಹಸ್ತವನು ಇಟ್ಟ ಬಲು 
ಅಸ್ತಮಾನ ಉದಯದಾವಸ್ತಿಯನು ಹರಿಸುತ್ತಾ 
ಸ್ವಸ್ಥಾನದಲ್ಲಿ ಯೆನ್ನ ಪ್ರಸ್ತುತವನ್ನು ನಡಿಸಿ 
ಹಸ್ತಕನ್ನ ಮಾಡು ಪರವಸ್ತವೆ ವಿಜಯವಿಠಲ 
ವಿಸ್ತಾರ ಮಹಿಮನೊ 
ಕಸ್ತೂರಿ ಮೃಗದಂತಸ್ತವಾಗಿ ಪೊಳೆವಾನೊ ॥ 5 ॥

 ಜತೆ 

ಇಂದು ಸುಳಿದಂತೆ ಅನುಗಾಲ ಎನ್ನೊಳಗೆ 

ಬಂದು ಉದ್ಧರಿಸೋದು ವಿಜಯವಿಠಲರೇಯಾ ॥
*********

ಈ ಸುಳಾದಿಯ ರಚನೆಯ ಸಂದರ್ಭ : 

ಶ್ರೀವಿಜಯದಾಸಾರ್ಯರು ಸಂಪ್ರದಾಯದಂತೆ ಬ್ರಹ್ಮೋತ್ಸವಕ್ಕೆ ಶ್ರೀವೆಂಕಟಗಿರಿಗೆ ಪ್ರಯಾಣಬೆಳೆಸಿ , ಕಪಿಲತೀರ್ಥದಲ್ಲಿ ಸ್ನಾನಾದಿಗಳನ್ನು ಮುಗಿಸಿ , ಸಕ್ರಮವಾಗಿ ತಿರುಪತಿಯ ಬೆಟ್ಟವನ್ನು ಹತ್ತಿ , ಶ್ರೀವರಾಹಸ್ವಾಮಿಯ ದರ್ಶನ ಮಾಡಿ ಶ್ರೀ ಶ್ರೀನಿವಾಸನ ದಿವ್ಯಸನ್ನಿಧಿಯನ್ನು ಸೇರಿ , ಸ್ವಾಮಿಯ ಸಂದರ್ಶನ ಮಾಡಿ ಆನಂದಭರಿತರಾದರು. ಈ ನವರಾತ್ರಿ ಉತ್ಸವದ ಒಂದುದಿನ , ಶ್ರೀವಿಜಯದಾಸಾರ್ಯರು , ಸಾಯಂಕಾಲದ ಸಂಧ್ಯಾವಂದನೆ ಮುಗಿಸಿ , ಶ್ರೀವೆಂಕಟೇಶನ ಗುಡಿಯೊಳಗೆ ಬಂದು , ತಾವೊಬ್ಬರೇ ಶ್ರೀಪುರಂದರದಾಸರು ಅಹ್ನಿಕಕ್ಕೆ ಕೂಡುತ್ತಿದ್ದ ಮಂಟಪವನ್ನು ಪ್ರವೇಶಿಸಿ , ಧ್ಯಾನದಲ್ಲಿ ಶ್ರೀವೆಂಕಟೇಶನನ್ನು ನೋಡುವ ಹಂಬಲವಿಶೇಷವುಳ್ಳವರಾಗಿ ಕುಳಿತಿದ್ದಾರೆ. ಧ್ಯಾನಿಸಲು ಕೂತು ಕಣ್ಣುಮುಚ್ಚಿದ ಸ್ವಲ್ಪ ಸಮಯದಲ್ಲಿ ಯಾರೋ ತಮ್ಮ ತಲೆಯನ್ನು ಸ್ಪರ್ಶಿಸಿದಂತಾಯಿತು. ಶ್ರೀಶ್ರೀನಿವಾಸನೇ ಇವರ ಎದುರಿಗೆ ಬಂದು ನಿಂತು , ದಾಸಾರ್ಯರ ತಲೆಯ ಮೇಲೆ ಅಭಯಹಸ್ತವನ್ನು ಇಟ್ಟು ನಿಂತಿದ್ದನು ! ಒಂದು ಬಾರಿ ಆ ಸ್ವಾಮಿಯ ಪೂರ್ಣರೂಪವನ್ನು ದರ್ಶನಮಾಡುವುದರೊಳಗೆ ಶ್ರೀಶ್ರೀನಿವಾಸನು ಕಣ್ಮರೆಯಾದನು. 
ಉತ್ಸವವನ್ನು ಮುಗಿಸಿಕೊಂಡು ಬಂದು , ತಮ್ಮ ಬಿಡಾರದಲ್ಲಿ ಕೂತು , ತನ್ನ ಉತ್ಸವಕ್ಕೆ ಸಕಾಲದಲ್ಲಿ ಬರಲಿ ಎಂಬ ಕರುಣೆಯಿಂದ ಗುಡಿಯಲ್ಲಿ ತಾನಾಗಿ ತಾನು ಎದುರಿಗೆ ಬಂದು ನಿಂದು ತಮ್ಮ ತಲೆಯ ಮೇಲೆ ಅಭಯಹಸ್ತವನ್ನು ಇಟ್ಟಾಗ ನೋಡಿದ ಶ್ರೀವೇಂಕಟನ ಆ ರೂಪವನ್ನು ತಾವು ಕಂಡಂತೆಯೇ ಇಲ್ಲಿ ವರ್ಣಿಸಿ ಆನಂದಿಸಿದ ಸುಳಾದಿ ಇದು .
**********

No comments:

Post a Comment