Sunday 8 December 2019

ಮಧ್ವವಲ್ಲಭ ಜಯ vijaya vittala ankita suladi ಐತಿಹ್ಯ ಸುಳಾದಿ MADHWA VALLBHA JAYA AITIHYA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

 ಶ್ರೀ ಮೂಲ ರಾಮದೇವರು ಬಂದ ಐತಿಹ್ಯ ಸುಳಾದಿ 

 ರಾಗ ಪೂರ್ವಿಕಲ್ಯಾಣಿ 

 ಧ್ರುವತಾಳ 

ಮಧ್ವವಲ್ಲಭ ಜಯ ಸದ್ವೈಷ್ಣವರ ಪ್ರಿಯಾ
ಅದ್ವೈತ ಮಹಿಮ ಜಗದ್ವಿಲಕ್ಷಣ ರಾಮಾ
ಸದ್ವರ್ಣ ಭೂತ ಭವಿಷ್ಯದ್ವರ್ತಮಾನ ಬಲ್ಲ
ವಿದ್ವಾಂಸರೊಡಿಯಾಘ ಪ್ರಧ್ವಂಸ ಅಪ್ರಮೇಯ
ಸದ್ವೀರ ಏಕಮೇವ ಅದ್ವಿತೀಯಾ ಪಾ -
ದದ್ವಯನೆನಿಸುವ ಸದ್ವಾಣಿವುಳ್ಳ ಗು -
ರುದ್ವಾರ ಸಾರಿದವರ ಹೃದ್ವನಜದಲ್ಲಿದ್ದು
ತದ್ವಿಚಾರ ನಡೆಸುವ ತದ್ವಿಪರೀತ ಕಾರ್ಯ
ಅಧ್ವರ ಭೋಕ್ತ ನಮ್ಮ ವಿಜಯವಿಠ್ಠಲರೇಯಾ ಮ -
ರುದ್ವಂಶರಿಂದ ನಿತ್ಯ ಸದ್ವಾಲಗಕೊಂಡ ಮೂರ್ತಿ ॥ 1 ॥

 ಅಟ್ಟತಾಳ 

ಪೇರ್ಮೆಯಿಂದಲಿ ವಿಶ್ವಾಕರ್ಮನಿಂದಲಿ ಅಂದು
ನಿರ್ಮಿತವಾಗಿದ್ದ ನಿರ್ಮಳ ಶರೀರ
ಧರ್ಮಬೋಧಕ ರಾಮಾ ನಿರ್ಮಯನೆ ಚ -
ತುರ್ಮೊಗ ನಿತ್ಯ ನಿಷ್ಕರ್ಮ ಭಾವದಲ್ಲಿ
ನಿರ್ಮತ್ಸರನಾದ ವಿಜಯವಿಠ್ಠಲರೇಯನ 
ನಿರ್ಮಲ ಚಿತ್ತದಲ್ಲಿ ಅರ್ಚನೆ ಮಾಡಿದನೋ ॥ 2 ॥

 ತ್ರಿವಿಡಿತಾಳ 

ಬಲುಕಾಲ ಲೋಕೇಶ ತನ್ನ ಮನಿಯಲ್ಲಿ
ಚೆಲುವ ರಾಮನ ಪೂಜೆ ಮಾಡುತಿರಲು
ಒಲಿದು ಜಾಬಾಲಿಮುನಿ ಪ್ರಾರ್ಥನೆಯಿಂದಲಿ
ಜಲಜ ಸಂಭವನ ಮೆಚ್ಚಿಸಿ ಬೇಡಲು
ಸಲಿಸಿ ಮಾತನು ಋಷಿಗೆ ಈ ಪ್ರತಿಮೆ ಕೊಡಲಾಗಿ
ಒಲಿಸಿಕೊಂಡಲ್ಲಿಂದ ಶಿವಗೆ ಕೊಡಲು
ಸುಲಭದಿಂದ ಶಿವನು ತನ್ನಯ ನಿಜ
ಲಲನಿಗೆ ಕೊಡಲಾಗಿ ವಿನಯದಿಂದ
ಕೆಲವು ದಿವಸ ಗಿರಿಜೆ ಪೂಜಿಸಿ ಮೇಲೆ
ತಿಳಿದು ದಕ್ಷನ ಯಾಗದಲ್ಲಿಗೆ ಬಂದು
ಇಳಿದು ಪೋಗುವಾಗ ಸೌಭರಿ ಮುನಿ ಕೈ -
ಯಲ್ಲಿ ಕೊಟ್ಟ ತರುವಾಯ ರಾಮ ಪ್ರತಿಮೆಯನ್ನು
ಜಲಜಗರ್ಭನ ವಶಕೆ ತಂದು ಕೊಡಲು
ಪೊಳೆವ ಸುಮೇರು ಪರ್ವತದಲ್ಲಿ ಇಟ್ಟು ನಿ -
ಶ್ಚಲ ಪೂಜೆ ಮಾಡುತಿದ್ದಾ ಇದ್ದಾನಂದೂ
ಬಲುದೈವ ವಿಜಯವಿಠ್ಠಲ ಜಾನಕಿಪತಿ
ಬಲವಂತ ಭಕ್ತರಪ್ರಿಯ ಸುಜನಗೇಯಾ ॥ 3 ॥

 ಅಟ್ಟತಾಳ 

ತಪಮಾಡಿ ಇಕ್ಷ್ವಾಕು ಬ್ರಹ್ಮಗೆ ಮೆಚ್ಚಿಸಿ
ಕೃಪೆಯಲ್ಲಿ ಮೂಲರಾಮನ ಕೊಡಲಿತ್ತಲು
ಕ್ಷಿತಿಯೊಳಗೆ ಅಯೋಧ್ಯದಲ್ಲಿ ಪೂಜಿಸಲಾಗಿ
ಅತಿಶಯವಾಗಿ ರಾಮಚಂದ್ರ ಪರಿಯಂತ
ಮಿತಿ ಇಲ್ಲದ ವಾಲಗದಲ್ಲಿ ಒಪ್ಪಲು
ಕ್ಷಿತಿಸುತೆ ತಾನೆ ಪೂಜಿಸಿ ಹನುಮಂತಗೆ
ಪ್ರತಿಮೆಯ ಪಾಲಿಸೆ ಅಲ್ಲಿಂದ ಮಾರುತ
ಸುತನು ಜಾಂಬುವಂತನಿಗೆ ದಯಮಾಡಿದ
ಸತತ ಮಂಗಳಕಾಯಾ ವಿಜಯವಿಠ್ಠಲ ರಾಮಾ
ನುತಿಸಿ ಕೊಳುತಲಿದ್ದ ಸುರರಾದಿಗಳ ಕೈಯಾ ॥ 4 ॥

 ಆದಿತಾಳ 

ವೇದಗರ್ಭನೆಂಬೊ ಭೂಸುರ ರಾಮನ್ನ
ಪಾದ ಸಂದರುಶನವಾಗದಲೆ ಅ -
ನ್ನೋದಕ ಕೊಳದಿರೆ ರಾಘವ ಭಕ್ತನಿಂ -
ದಾದ ಪ್ರತಿಜ್ಞೆಯನು ತಿಳಿದು ತನ್ನ ಮೂರ್ತಿಯ
ಆದರದಿಂದಲಿ ಕೊಟ್ಟು ಕಳುಹಲಿತ್ತಾ
ಭೂದೇವ ಬಲುಕಾಲ ಪೂಜಿಸಿ ತೀರ್ಥಯಾತ್ರೆ
ಆದರದಿಂದ ಮಾಡಿಕೊಳುತ ಬರಲು ಗತಿಗೆ
ಐದುವ ಕಾಲದಲ್ಲಿ ಸೀತಾರಾಮ ಪ್ರತಿಮೆಯ
ಮೇದಿನಿಯೊಳು ಬಿಟ್ಟು ಪೋಗಲಾಗಿ ಇತ್ತ
ಸಾಧುಗುಣವುಳ್ಳ ಮುಕುಂದವರ್ಮನೆಂಬ
ಮೇದಿನಿಪತಿಯಾಗಿ ವಡ್ಡಿ ದೇಶದಲ್ಲಿರೆ
ಆದುದು ಅಶರೀರವಾಕ್ಯ ಆತಗೆ ಕೇಳಿ
ಆದಿತ್ಯವಂಶಜ ವಿಜಯವಿಠ್ಠಲ ರಾಮಾ -
ರಾಧನೆಗೊಳುತಿದ್ದ ಅಜನಿಂದ ಕೋಶದಲ್ಲಿ ॥ 5 ॥

 ಜತೆ 

ನರಹರಿತೀರ್ಥರಿಗೆ ವಲಿದ ವಿಜಯವಿಠ್ಠಲ 
ಸ್ಮರಿಸಿದವರ ಕಾವಾ ನಿತ್ಯ ರಘುರಾಮಾ ॥
***********


No comments:

Post a Comment