Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ
ಹಂಪಿಕ್ಷೇತ್ರ ಸುಳಾದಿ
ರಾಗ ಅಭೇರಿ
ಧ್ರುವತಾಳ
ದಕ್ಷಿಣ ವಾರಣಾಸಿ ಕ್ಷೇತ್ರವೆನಿಸುವದು
ಯಕ್ಷೇಶನಾಪ್ತ ಇಲ್ಲಿ ವಾಸವಯ್ಯಾ
ಅಕ್ಷರ ಒಂದು ನುಡಿವ ಹೊತ್ತು ಮನುಜಾ ಬಂದು
ಈ ಕ್ಷೇತ್ರದಲ್ಲಿ ಇದ್ದ ಫಲಕೆ ಅಲ್ಲಿ
ನೀಕ್ಷಿಸಿ ನೋಡಲು ಎಣಿಸಲಿನ್ನಾರಳವೆ
ನಿಕ್ಷೇಪವೆನ್ನಿ ಸದಾ ವಂಶಾವಳಿಗೇ
ನಕ್ಷತ್ರ ಮಳಲು ಮಳಿಯ ಹನಿ ಕಡಲ ಥೆರೆ
ವೃಕ್ಷ ಜಾತಿಗಳೆಲೆ ಎಣಿಸಬಹುದು
ಲಕ್ಷಣವುಳ್ಳ ಪುಣ್ಯಗಣಣೆ ಮಾಡುವರಾರು
ಅಕ್ಷಯವಾಗುತಿಪ್ಪದು ದಿನದಿನಕೇ
ಕುಕ್ಷಿಗೋಸುಗ ಇಲ್ಲಿ ಬಹು ಕಾಲವಿದ್ದರೂ
ಮೋಕ್ಷಸಾಧನವಲ್ಲ ದುರುಳರಿಗೆ
ದಕ್ಷಿಣಾಧೀಶ ಈ ಪರಿ ಇದ್ದವರ ವೈದು
ಶಿಕ್ಷಿಸುವನು ಜನುಮ ಜನುಮದಲ್ಲಿ
ಚಕ್ಷುಶ್ರವಣಶಾಯಿ ವಿಜಯವಿಠ್ಠಲನಂಘ್ರಿ
ರಕ್ಷೆಯಿಂದ ದಾಸನ್ನ ರಕ್ಷಿಸುವ ಉಮೇಶ ॥ 1 ॥
ಮಟ್ಟತಾಳ
ಒಂದು ದಿವಸ ಮುಕುಂದನು ತನ್ನಯ
ಮಂದಗಮನೆ ಸಹಿತಾನಂದದಲ್ಲಿ ಖಗೇಂದ್ರವಾಹನನಾಗಿ
ಬಂದನು ಸಕಲ ವಸುಂಧರೆ ಚರಿಸುತಲಿ
ಅಂದವಾದೀ ಧರೆಯ ಅಂದು ನೋಡಿದನಲು -
ವಿಂದ ಶಿರಿಯೊಡನೆ ನಿಂದನು ಕರಕಮಲ -
ದಿಂದ ಗುಲಗುಂಜಿ ಒಂದು ಪಿಡಿದು ಕಾಶಿ -
ಗಿಂದಧಿಕ ಫಲವು ತಂದು ಕೊಡುವೆನೆನುತ
ನಂದನಗೊಲಿದ ಶ್ರೀವಿಜಯವಿಠ್ಠಲ ಮಾಧವ -
ನೆಂದೆಂಬೋ ನಾಮದಲಿ ಇಂದ್ರಾದ್ಯರು ಪೊಗಳೆ ॥ 2 ॥
ರೂಪಕತಾಳ
ಶ್ರೀ ತರುಣೇಶನು ವಿನಯದಿಂದಲೀ ಬಂದೀ -
ಭೂತಳದಲಿ ನಿಂದ ವಾರ್ತಿಯನ್ನು
ಭೂತಾಧಿಪನು ನಾರದನಿಂದಲಿ ಕೇಳಿ
ಕೌತುಕವಹುದೆಂದು ತಲೆಯದೂಗಿ
ಕಾತುರದಲಿ ಹರಿಯ ಸೇವೆ ಮುಟ್ಟಿಪೆನೆಂದು
ಪಾತಾಳೇಶ್ವರನಾಗಿ ಇಲ್ಲಿ ನಿಂದ
ಈ ತೆರದಲಿ ಇತ್ತಲಿರುತಿರೆ ಆ ಪರ್ನಾ
ಭೂತಳಗೋಸುಗ ಹರಿ ವರಹನಾಗೇ
ಆತನಾ ದಾಡಿಂದ ಬಂದ ತುಂಗೆ ಇರಲು
ಈ ತೀರದಲಿ ಪೊಂಪ ನಾಮದಿಂದ
ತಾ ತಪವನೆ ಮಾಡತೊಡಗಲಾಕ್ಷಣ ಅತ್ತ
ಜಾತವೇದಸ ನೇತ್ರ ಪ್ರತಿರೂಪದೀ
ಚಾತುರ್ಯದಲಿ ಬಲು ಬ್ಯಾಟಿ ಮಾರ್ಗದಲಿ ಕಿ -
ರಾತನಂದದಿ ಬಂದ ಹಂಪನೆನಿಸೀ
ಗೋತುರ ಜಾತಿಯ ಕಂಡು ಮಾನವನಂತೆ
ಸೋತು ನೀನಾರೆಂದು ಮಾತಾಡಿಸೇ
ನೀತವಲ್ಲೆಂದು ಆ ಪೊಂಪನಾಮಕ ಗಿರಿಜೆ
ಭೀತಿ ತೋರಿದಳು ಅನ್ಯರೋಪಾದಿಲಿ
ಯಾತಕೆ ಸಂಶಯ ಎನ್ನಲ್ಲಿವುಳ್ಳ ಮಹ -
ಭೂತಿ ನಿನ್ನದು ಎಂದು ಸತಿಯ ಮದನಾ
ರಾತಿ ವಡಂಬಡಿಸಿ ಪಾಣಿಗ್ರಹಣವ ಮಾಡೆ
ಭೂತ ಪ್ರಮಥಗಣ ಪೊಗಳುತಿರೆ
ಜೋತಿರ್ಮಯರೂಪ ವಿಜಯವಿಠ್ಠಲರೇಯನ
ಮಾತು ಮಾತಿಗೆ ನೆನಿಸಿ ಪುಳಕೋತ್ಸವದಲ್ಲಿದೆ ॥ 3 ॥
ಝಂಪೆತಾಳ
ಹರಿಯ ನಿರೂಪದಲಿ ಪರಮೇಷ್ಟಿ ಸುರನಿಕರ
ಪರಮ ಹರುಷದಲಿ ನಿಂದಿರದೆ ಬಂದು
ನೆರೆದು ಸಕಲರು ವೇದ ಹಿರಿದು ಮಂತ್ರಗಳಿಂದ
ಚಿರವಕ್ಕುಮಾಮಹೇಶ್ವರಗೆ ಶಾಶಿಯ ದಳಿದು
ಮೊರಗಿದವು ಭೇರಿ ಅಬ್ಬರಿಸಿ ನಾನಾ ವಾದ್ಯ
ಸುರರು ಕುಸುಮ ವರುಷ ಗರಿಯೆ ಮಹೋತ್ಸವದಲ್ಲಿ
ಕರಿಸಿಕೊಂಡನು ಪುರಹರ ನಂದಿನಾರಭ್ಯ
ವರ ಪೊಂಪಾರಮಣ ಪೆಸರಿನಿಂದಲಿ
ಮೆರೆದುದೀ ಭೂಮಿ ವಿಸ್ತರದಿಂದ ಪೊಂಪಾಕ್ಷೇ -
ತುರ ಆದಿಯುಗವಿಡಿದು ಕರಿಸಿತಿದಕೊ
ಸರಿ ಇಲ್ಲವೆಂದಿದರ ಅರಿದು ಶಂಖಶಕಟ
ಶರಭ ಮಾರ್ಕಾಂಡೇಯ ದೇವರತಿ ಕಪಿಲಾ
ಪರಿ ಪರಿ ಮುನಿಗಳು ಪರಮ ಸಮಾಧಿಯಲಿ
ಹರಿಹರರ ಪೂಜಿಸಿದರು ಗುಣಗಳ ತಿಳಿದು
ಸುರಪಾಲ ವಿಜಯವಿಠ್ಠಲನೆ ಸರ್ವೋತ್ತುಮಾ
ಅರಿದವಗೆ ಕೈವಲ್ಯ ಸರಿಸದಲೆ ಉಂಟು ॥ 4 ॥
ತ್ರಿವಿಡಿತಾಳ
ಪಿತ ಮಹದೇವನು ಅತಿಶಯದಲಿ ಇಲ್ಲಿ
ಕೃತವ ಮಾಡಿದನು ಅಮಿತ ಬಗೆಯಲ್ಲಿ
ಕ್ಷಿತಿಯೊಳೈವರು ಪರ್ವತದೆಡೆಯಲಿ ರಚಿಸಿ
ಚತುರಾಸ್ಯ ಪೋಗೆ ಕಾಲತೀತವಾಗಲು ಬಹು
ಕ್ಷಿತಿಪರಾಳಿದರು ಉನ್ನತಲೀಲೆಯಲ್ಲಿ ಅವರು
ಗತವಾದ ತರುವಾಯ ಶತಮೋದನಂದನನು
ಪ್ರತಿವಿಲ್ಲವೆನಿಸಿ ಸುಪುತ ದ್ವೀಪದೊಳು ಮೆರಿಯೆ
ದಿತಿಸುತ ನಿಂದರ್ಕಸುತರೊಡನೆ ವಾಲಿ
ಹಿತತಪ್ಪಿ ನಡೆದು ದುರ್ಮತಿಯಲ್ಲಿ ಸಂಚರಿಸೆ
ಪತಿತ ರಾವಣ ವಿಬುಧತತಿಗಳಟ್ಟಲು ಅವರ
ಸ್ತುತಿಗೆ ಪುಟ್ಟಿದ ಸಿರಿಪತಿ ದಶರಥನಲ್ಲಿ
ಚತುರಮಾರುತ ತನ್ನ ಪತಿಸೇವೆಗೋಸುಗ
ಸುತನಾದಂಜನಿಗೆ ಸಂಗತಿಯೆಲ್ಲ ತಿಳಿದು
ಸತಿಪೋದ ವ್ಯಾಜದಲಿ ಕ್ಷಿತಿಪನಲ್ಲಿಗೆ ಬರಲು
ನತನಾಗಿ ಭಾಸ್ಕರನಾ ಸುತನ ನೆರಹೆ ವಾಲಿಯ
ಹತವ ಮಾಡಿ ರಘುಪತಿ ಇಲ್ಲಿ ಮೆರೆದ ಪ -
ರ್ವತ ಮಾಲ್ಯವಂತದಲ್ಲಿ ವ್ರತ ತೊಟ್ಟ ನರನಂತೆ
ನುತಿಸಿ ವರವ ಬೇಡಿ ಮತಿ ತಾರತಮ್ಯದಲಿ
ಮತವನ್ನೆ ಬಿಡದೆ ಶಾಶ್ವಿತ ಫಲವನುದಿನ
ಯತಿಗಳ ಮನೋಹರ ವಿಜಯವಿಠ್ಠಲ ಹರಿಯ
ಕೃತಧ್ವಂಶಿ ತನ್ನೊಳಗೆ ಪ್ರತಿಕಾಲ ಜಪಿಸುವ ॥ 5 ॥
ಅಟ್ಟತಾಳ
ಮನುಮಥಕೊಂಡ ವಶಿಷ್ಟ ಲೋಕ ಪಾ -
ವನೆ ಅಗಸ್ತ್ಯತೀರ್ಥ ಪೊಂಪಾಸಾಗರ ಸೀತಾ
ಋಣಮೋಚನ ತೀರ್ಥ ಪೊಳೆವದು ಸುದರು -
ಶನ ತೀರ್ಥಕೋಟಿ ಕಪಿಲತೀರ್ಥ ಮಾರ್ಕಾಂಡೇಯಾ
ಮುನಿತೀರ್ಥ ನಾನಾ ತೀರ್ಥಂಗಳು ಇಲ್ಲಿ ಉಂಟು
ಅನುಮಾನ ಬಿಡಿ ಸಾಧನ ಮಾನವರೆಲ್ಲ
ಮನಶುಚಿಯಾಗಿ ನಾನು ನೀನೆಂಬ ಮಾ -
ತನು ಪೇಳಲಾಗದು ಹಣ ಮಣ್ಣು ಒಂದೆಯಾದರೆ
ಅಂಗಡಿಗೆ ಮಣ್ಣನ್ನು ಕೊಟ್ಟು ಉದರಕೆ ತರಬಾರದೇ ಧಾನ್ಯ
ನಿನಗೆ ಅವಗೆ ಭೇದಾ ಇಲ್ಲವಾದರೆ ನಿನ್ನಾ
ವನಿತೆಯಾ ಮತ್ತೊಬ್ಬ ಹಿಡಿದು ವೈದರೇನು
ಗುಣ ಪರಿಪೂರ್ಣವ ಬೊಮ್ಮಗೆ ಪೇಳಿ ನಿ -
ರ್ಗುಣನೆಂದು ನುಡಿವದು ಅಪಸಿದ್ಧಾಂತವು
ಜನನಿಯ ಬಳಿಯಲ್ಲಿ ಗರ್ತಿಯೆಂದು ಪೇಳಿ
ಜನರ ಮುಂದೆ ಹಾದರಗಿತ್ತಿ ಎಂದಂತೆ
ಗುಣವುಂಟು ಗುಣವಿಲ್ಲಾವೆಂದು ಯಮನ ಯಾ -
ತನೆಯಿಂದ ಬಹುಕ್ಲೇಶವನು ಬಡುವದು ಸಲ್ಲಾ
ಕನಸು ಎಂದರೆ ಇದು ಮನಕೆ ತಾರ ಕಾಂಣ್ಯಾ
ಕಣಿ ತಂದು ಬಿತ್ತಲು ಜನಿಸುವದೆ ಸಸಿ
ಬಿನಗು ಮಾರ್ಗವ ಬಿಟ್ಟು ಗುಣವಂತನಾಗಿ ಭ -
ಜನೆ ಮಾಡು ಸರ್ವತೀರ್ಥವನೆ ಮಿಂದು ವಟತರು -
ವಿನಲಿ ಗೋತ್ರ ಏಳನು ಉದ್ಧರಿಪದು
ಅನಲಾಕ್ಷಗೆ ಬಿಂದನು ತಂದು ಅಭಿಷೇಕ -
ವನೆ ಮಾಡಲವನೆ ಧನ್ಯನು ಕಾಣೊ ಜಗದೊಳು
ಎಣಿಸಲು ಸುತ್ತಯೋಜನ ಕ್ಷೇತ್ರವೆನ್ನಿ
ಹನುಮವಂದಿತ ನಮ್ಮ ವಿಜಯವಿಠ್ಠಲನ ಶ -
ರಣಗಲ್ಲದೆ ಪುಣ್ಯ ಭಣಗುಗಳಿಗುಂಟೆ ॥ 6 ॥
ಆದಿತಾಳ
ನರನೊಂದು ಸಾರಿ ಇಹಪರದಲ್ಲಿ ಹರಿಗೆ ಕಿಂ -
ಕರನೆನಿಸಿಕೊಂಡವ ಹರಿದು ಇಲ್ಲಿಗೆ ಬಂದು
ಗಿರಿಸುತೆ ರಮಣನ್ನ ದರುಶನವನು ಮಾಡಿ
ಕರಣ ಶುದ್ಧಿಯಲ್ಲಿ ಸ್ತೋತ್ತರ ಗೈದು ಮತಿಯಲ್ಲಿ
ವರ ಪೊಂಪಾ ಕ್ಷೇತ್ರದ ಅರಸು ಗುಲಗಂಜಿ -
ಧರ ಮಾಧವಂಗೆ ನೀರೆರದು ಸಮರ್ಪಿಸೆ
ಕೊರತೆಯಾಗದಂತೆ ಪರಿಪೂರ್ಣವನು ಮಾಡಿ
ಪೊರೆವನು ಯಾತ್ರಿಯ ಚರಿಸಿದ ಮಾನವನು
ಹರನು ಪರಮ ತಾರಕ ಗುರುವೆಂಬೋದೆ ಸಿದ್ಧಾ
ಅರಿತವಂಗೆ ಮನ ಸ್ಥಿರವಾಗಿ ನಿಲ್ಲಿಸುವ
ಧರೆಯೊಳಗಿದು ಭಾಸ್ಕರ ಕ್ಷೇತ್ರವೆನಿಸೋದು
ಸುರರು ಇಲ್ಲಿಪ್ಪರು ವಾಸರ ಒಂದು ಬಿಡದಲೆ
ಪರಮ ಪುರುಷ ನಮ್ಮ ವಿಜಯವಿಠ್ಠಲ ಹರಿಯ
ಸ್ಮರಣೆ ಮಾಡುತ ಈ ಕ್ಷೇತುರ ಮಹಿಮೆ ತಿಳಿವದು ॥ 7 ॥
ಜತೆ
ಜನುಮದೊಳಗೆ ಒಮ್ಮೆ ಪೊಂಪಾಕ್ಷೇತ್ರದ ಯಾತ್ರಿ
ಮನಮೆಚ್ಚಿ ಚರಿಸಲು ವಿಜಯವಿಠ್ಠಲ ವಲಿವಾ ॥
******
No comments:
Post a Comment