Audio by Mrs. Nandini Sripad
ರಾಗ ಬಾಗೇಶ್ರೀ
ಧ್ರುವತಾಳ
ಅಂತರಂಗದಿ ಬ್ರಹ್ಮಾನಂದನಾಗಿ ನೀನಿರಲು
ಅಂತಕನ ಭಯವೇನಯ್ಯ ಶ್ರೀಹರಿಯೆ
ಪಂಥದಿ ದನುಜನು ಬಾಧಿಸಲು ಸುತನ
ಚಿಂತೆ ಯಾರಿಗೋ ಎಂದಿರದೆ ಸಾಕಿದೆ
ಉದಯಾದ್ರಿ ಶ್ರೀಕೃಷ್ಣ ॥ 1 ॥
ಮಠ್ಯತಾಳ
ಮುರಹರ ನರಹರಿ ಸಿರಿವರ ಗಿರಿಧರ
ಎಂದು ಕರೆಯಲು ಕರುಣದಿ ಬಂದು
ಕರಿಯ ಕಾಯಿದೆ ಸಂತೋಷದಿ ಕಾಯಿದೆ
ನರಕಾಂತಕ ಉದಯಾದ್ರಿ ಶ್ರೀಕೃಷ್ಣ ॥ 2 ॥
ತ್ರಿಪುಟತಾಳ
ತನ್ನ ತಾನರಿಯಾದೆ ತಗುಲಿದ ಕಾಳಿಯನು
ನಿನ್ನ ಪರಾಕ್ರಮ ತೋರಿ ಕಾಯಿದೆ ಶ್ರೀಹರಿಯೆ
ಮುನ್ನ ನಾ ನಿನ್ನ ಡಿಂಗರಿಗನಾದೆನಯ್ಯಾ
ಪನ್ನಗಾಸನ ತುರಗ ಪಾಲಿಸು ಉದಯಾದ್ರಿ ಶ್ರೀಕೃಷ್ಣ ॥ 3 ॥
ಅಟ್ಟತಾಳ
ನಿನ್ನ ಮೃದು ಪಾದವ ನೋಯದಂತೆ
ಎನ್ನ ಶಿರಸ್ಸಿನಲ್ಲಿಡೋ
ರನ್ನ ಕಾಲಂದಿಗೆ ಗೆಜ್ಜೆಯ ನಾದದಿಂ -
ದಿನ್ನು ಧಿಂ ಧಿಮಿಕೆಂದು ಕುಣಿಸುವೆ ಉದಯಾದ್ರಿ ಶ್ರೀಕೃಷ್ಣ ॥ 4 ॥
ಏಕತಾಳ
ಎನ್ನ ದೃಢವ ನೀ ಕಂಡೆ ಯಾದವ ಕೃಷ್ಣ
ನಿನ್ನ ದೃಢವ ನಾ ಕಾಣೆ
ಎನ್ನ ದೃಢ ನಿನ್ನ ದೃಢವೆರಡನು ಕಂಡರೆ
ದಿನ್ನು ಧಿಂ ಧಿಮಿಕೆಂದು ಕುಣಿಸುವೆ ಉದಯಾದ್ರಿ ಶ್ರೀಕೃಷ್ಣ ॥ 5 ॥
ತ್ರಿಪುಟತಾಳ
ಎನ್ನ ಗುಣದೋಷಗಳನೆಣಿಸುವರೇನೊ ಶ್ರೀಹರಿ
ನಿನ್ನ ಬಿರುದಾಪನ್ನ ರಕ್ಷಕನೆಂದು ವಿಭೀ -
ಷಣನು ಕೀರ್ತಿಸಲಿ ಆ ಆ ಆ
ಅನ್ಯಥಾ ಶರಣಂ ನಾಸ್ತಿ
ಅನಾಥನಾಥನೆ ಆರ್ತಬಂಧುವೆ
ನಿನ್ನ ಚರಣವನ್ನು ನಂಬಿದೆನೊ
ಸಾಕ್ಷಿ ಉದಯಾದ್ರಿ ಶ್ರೀಕೃಷ್ಣ ॥ 6 ॥
ರೂಪಕತಾಳ
ಶರಣಾಗತ ಜನ ಪರಿಪಾಲನೆಂಬ
ಬಿರುದೆ ನಿಷ್ಕಾರಣ ಫಲದಾಯಕವೆನುತ
ವರುಣಿಸುತಿಹ ಕುಚೇಲನುದಿನ
ಕರುಣಾಕರ ಎನ್ನ ಕಾಯೊ ಉದಯಾದ್ರಿ ಶ್ರೀಕೃಷ್ಣ ॥ 7 ॥
ಜತೆ
ಎಂಥಾ ಸುಲಭನೊ ನೀನು ಉದಯಾದ್ರಿ ಶ್ರೀಕೃಷ್ಣ
ಚಿಂತೆ ಮಾಡುವರಿಗೆಲ್ಲ ಉದಯಾದ್ರಿ ಶ್ರೀಕೃಷ್ಣ ॥
**********
No comments:
Post a Comment