Audio by Mrs. Nandini Sripad
ಮತ್ಸ್ಯಾದಿ ದಶ - ಅನಂತಾವತಾರ ಮಹಿಮಾ ಸುಳಾದಿ
ರಾಗ ವರಾಳಿ
ಧ್ರುವತಾಳ
ಹರಿ ನಿನ್ನ ಜ್ಞಾನ ಸಿರಿಗೆಣೆಗಾಣೆ ಮತ್ಸ್ಯಾವ -
ತಾರದಿ ಶ್ರುತಿಗಳ ವಿಧಿಗೆ ಪೇಳಿದೇಯಾಗಿ
ಹರಿ ನಿನ್ನ ಶಕುತಿಗೆ ಎಣೆಗಾಣೆನಜಾಂಡ ಮಂ -
ದರಗಳ ಬೆನ್ನಿಲಿ ಧರಿಸಿ ಮೆರೆದೆಯಾಗಿ
ಹರಿ ನಿನ್ನ ಕರುಣಕ್ಕೆ ಎಣೆಗಾಣೆ ವರಹವ -
ತಾರದಿ ದಾಡಿಯಲ್ಲಿ ಧಾರುಣಿಯ ನೆಗಹಿದೆಯಾಗಿ
ಹರಿ ನಿನ್ನ ಶೂರತ್ವಕ್ಕೆಣೆಗಾಣೆ ಹಿರಣ್ಯಕನು -
ದರವ ಬಗದಿ ನರಹರಿ ನೀ ಮೆರೆದೆಯಾಗಿ
ಹರಿ ನಿನ್ನ ಯುಕುತಿಗೆ ಎಣೆಗಾಣೆ ವಟುವಾಗಿ
ಚರಣದಿ ಮೂಲೋಕಗಳ ಅಳದೆಯಾಗಿ
ಹರಿ ನಿನ್ನ ಉದಾರತ್ವಕ್ಕೆಣೆಗಾಣೆ ಮಹಿಯ ವಿ -
ಸ್ತರದ ದ್ವೀಪಗಳ ಭೂಸುರರಿಗೆ ಇತ್ತೆಯಾಗಿ
ಹರಿ ನಿನ್ನ ವೈರಾಗ್ಯಭಾಗ್ಯಕ್ಕೆಣೆಗಾಣೆ
ಅರಸತ್ವ ತೊರೆದು ಅರಣ್ಯಕ್ಕೆ ಪೋದೆಯಾಗಿ
ಹರಿ ನಿನ್ನ ಲೀಲೆಗೆ ಎಣೆಗಾಣೆನೋ ಮಹಾ -
ಧುರದೊಳು ಕಲಿಪಾರ್ಥನ ಸಲಹಿದೆಯಾಗಿ
ಹರಿ ನಿನ್ನ ಮಾಯಕ್ಕೆ ಎಣೆಗಾಣೆನೊ ಮು -
ಪ್ಪುರದ ಸತಿಯರ ವ್ರತವೆ ಕೆಡಿಸಿದೆಯಾಗಿ
ಹರಿ ಹಯವದನನೆ ಕಲಿಖಂಡನೆಂಬ
ಬಿರಿದು ತೋರಿದೆ ಕಲ್ಕಿಯಾಗಿ ಬಲ್ಲವರಿಗೆ ॥ 1 ॥
ಮಠ್ಯತಾಳ
ಅಸುರರ ಮುರಿದೆ ಸುರರನ ಪೊರಿದೆ
ಶಶಿಮುಖಿ ದ್ರೌಪದಿಗಕ್ಷಯಂಬರವನಿತ್ತು ಮೆರದೆ
ಅಸಮ ರಕ್ಕಸಿಯ ಕಿಂವಿ ಮೂಗು ತರಿದೆ
ಸುಶರಣರಲ್ಲದೆ ಅನ್ಯರನೊಲ್ಲೆ
ಪೊಸ ಬಗೆಯ ಶಿರಿ ಹಯವದನನೆ ಇಂಥ
ಅಸಮ ಮಹಿಮನೆಂಬ ಪೆಸರು ಧರಿಸಿಕೊಂಡೆ ॥ 2 ॥
ತ್ರಿಪುಟತಾಳ
ಸುಧಿಯ ಸಾಧಿಸಿ ತ್ರಿದಶರಿಗಿತ್ತು ಪೊರೆದೆ ಮ -
ತ್ತದ ಕೊದಗಿದ ದಾನವರ ಮರ್ದಿಸಿದೆ
ಇದೆ ಸಾಕ್ಷಿಯಲ್ಲವೆ ನೋಡಲು ಬುಧಜನರು
ಕದನಕರ್ಕಶನೆಂಬ ಬಿರಿದು ತೋರಿದೆ ಜಗಕೆ
ಮಧುವೈರಿ ಸಿರಿ ಹಯವದನ ದೇವೋತ್ತಮ
ಮದವಿಲ್ಲದವರ ಎಂದೆಂದು ಪೊರೆವನು
ಮದಾಂಧರನ ಎಂದೆಂದು ಮರ್ದಿಸುವನು ॥ 3 ॥
ಝಂಪೆತಾಳ
ಸಾತ್ವಿಕರಿಗೆ ಊರ್ಧ್ವ ಲೋಕವ ಮಾಡಿದ ನೋಡಿರೊ
ಮರ್ತ್ಯರಿಗೆ ಸ್ವರ್ಗ ಭೂನರ್ಕ ಮಾಡಿದ ನೋಡಿರೊ
ವ್ರಾತ್ಯ ಜನರಿಗೆ ದುರ್ಗತಿಯ ಮಾಡಿದ ನೋಡಿರೊ
ಸತ್ಯಸಂಕಲ್ಪ ಹಯವದನ ಎಲ್ಲರಿಗೆ ಸಮ
ಮತ್ಯ ಸಮನೆಂತೆಂಬ ನರರಿಗೆ ನಂಬೇ ॥ 4 ॥
ತ್ರಿಪುಟತಾಳ
ಅದರಿಂದ ದುರ್ಮಾರ್ಗದಲ್ಲಿ ನಡಿಯಬಾರದು
ಮದಿರಾಕ್ಷಿಯರ ಮೆಚ್ಚಿ ಮರುಳಾಗಬಾರದು
ಅಧಮ ದುರ್ಮತಗಳ ಮನಕೆ ತರಬಾರದು
ಪದುಮನಾಭನ ಒಮ್ಮೆ ಮರದಿರಲಾಗದು
ಸುದರ್ಶನಧರ ಸಿರಿ ಹಯವದನನ ಪಾದ -
ಪದುಮ ತೋರಿದ ಗುರು ಮಧ್ವರಾಯರ ನಂಬೊ ॥ 5 ॥
ಅಟ್ಟತಾಳ
ಆರಾಧನ ನೀರಾಂಜನವೆತ್ತಿ ನಮ್ಮ
ನಾರಾಯಣಗೆ ನಾನಾ ವಿಧವಾದ
ಭೂರಿ ನೈವೇದ್ಯಗಳಿಟ್ಟು ಪೂಜಿಸಿ ಅವ -
ನಾರೋಗಣಿಯ ಶೇಷ ಭುಂಜಿಸಿ ಸುಖಿಸು ನೀ
ಶ್ರೀರಮಣ ಹಯವದನನ ಚರಿತೆಯ
ಓರಂತೆ ತುತಿಸಿ ಹಿಗ್ಗುತಲಿರು ಮನದಲ್ಲಿ
ತಾರತಮ್ಯವರಿತು ಸಾರು ಸುರರ ॥ 6 ॥
ಆದಿತಾಳ
ಪರಮ ವೈಷ್ಣವ ಗುರುಗಳ ಪಾದಕ್ಕೆರಗು ನೀ
ಪುರಾಣ ಶಾಸ್ತ್ರಂಗಳ ನಿರುತ ಕೇಳುತಲಿರು
ಹರಿ ಪರದೇವತಿ ಎಂಬ ಜ್ಞಾನ ವಿ -
ಸ್ತರಿಸುತ ಧರೆಯೊಳು ಚರಿಸುತಲಿರು ಜೀವ
ಪರಮ ಕರುಣಿ ಸಿರಿ ಹಯವದನ ಈ
ಪರಿಯಲಿ ಸ್ಮರಿಸಲು ಪೊರೆವ ಸಂದೇಹವಿಲ್ಲ ॥ 7 ॥
ಜತೆ
ಸಾಕು ಸಾಕು ಸಂಸಾರ ಸಂಕಟಗಳನೆಲ್ಲ
ನೂಕು ನೂಕು ಹಯವದನನ ವೊಲಿಮೆಯಿಂದ ॥
**********
No comments:
Post a Comment