ಶ್ರೀ ಪಂಗನಾಮ ತಿಮ್ಮಣ್ಣದಾಸರ ಕೃತಿ ( ವೇಣುಗೋಪಾಲವಿಠಲ ಅಂಕಿತ)
ಕೃಷ್ಣನ ನೋಡಿದೆ ಸರ್ವೋತ್ಕೃಷ್ಟನ ಪಾಡಿದೆ ॥ ಪ ॥
ಕೃಷ್ಣನ ನೋಡಿದೆ ಸರ್ವೋತ್ಕೃಷ್ಟನ ಪಾಡಿದೆ ॥ ಪ ॥
ಕೃಷ್ಣನ ನೋಡಿ ಸಾಷ್ಟಾಂಗವ ಮಾಡಿದೆ
ಕಷ್ಟವ ಪರಿಹರಿಸಿ ಇಷ್ಟವನೀವನ ॥ ಅ ಪ ॥
ಶಿಷ್ಟನ ನೋಡಿದೆ ವರನಿರ್ದುಷ್ಟನ ಪಾಡಿದೆ
ಹೃಷ್ಟಪುಷ್ಟಸಂತುಷ್ಟನ ಶ್ರೇಷ್ಠನ
ಶಿಷ್ಟರ ಕಷ್ಟನಿವಿಷ್ಟನ ದೇವನ ॥ 1 ॥
ರಂಗನ ನೋಡಿದೆ ದೇವೋತ್ತುಂಗನ ಪಾಡಿದೆ
ಅಂಗಸಿಂಗ ಕಾಳಿಂಗಮರ್ದನನ
ಮಂಗಳಾಂಗ ಭವಭಂಗನ ನೋಡಿದೆ ॥ 2 ॥
ದೇವನ ನೋಡಿದೆ ಮುಕುತಿಯೀವನ ಪಾಡಿದೆ
ಗೋವಕಾವ ಭೂದೇವವಂದಿತ ಬಲ -
ದೇವಾನುಜ ಹಯಗ್ರೀವನ ನೋಡಿದೆ ॥ 3 ॥
ಧೀರನ ನೋಡಿದೆ ಜಗದೋದ್ಧಾರನ ಪಾಡಿದೆ
ವೀರ ಶೂರ ಪರಾತ್ಪರ ತಾನ -
ಕ್ರೂರವರದ ಸಿರಿಧಾರನ ನೋಡಿದೆ ॥ 4 ॥
ಶ್ಯಾಮನ ನೋಡಿದೆ ಬಲುನಿಸ್ಸೀಮನ ಪಾಡಿದೆ
ವಾಮನ ರಾಮನ ಕಾಮನ ಅಯ್ಯನ
ಸಾಮನ ಸೀಮನ ಸೋಮನ ನೋಡಿದೆ ॥ 5 ॥
ಬಾಲನ ನೋಡಿದೆ ಲಕುಮಿವಿಲೋಲನ ಪಾಡಿದೆ
ಶೀಲ ಶೂಲಧರಪಾಲ ಲೀಲ ಶಿಶು -
ಪಾಲಕಾಲ ವನಮಾಲನ ನೋಡಿದೆ ॥ 6 ॥
ಜಾಣನ ನೋಡಿದೆ ಬಲುವಿನೋದನ ಪಾಡಿದೆ
ಗುಣಗಣ ಅಗಣಿತಪ್ರಾಣರ ಪ್ರಾಣನ
ವೇಣುಗೋಪಾಲವಿಠ್ಠಲ ಕಲ್ಯಾಣನ ॥ 7 ॥
***
ರಾಗ ಯಮನ್ ಕಲ್ಯಾಣಿ ರೂಪಕತಾಳ
No comments:
Post a Comment