Friday, 27 December 2019

ಗುರುವಿನ ಚರಣವ ನೆನೆವುತಲನುದಿನ ankita varaha timmappa

by ನೆಕ್ಕರ ಕೃಷ್ಣದಾಸ
ಶಂಕರಾಭರಣ ರಾಗ ತ್ರಿವಿಡೆ ತಾಳ

ಗುರುವಿನ ಚರಣವ ನೆನೆವುತಲನುದಿನ
ಪರದೊಳು ದೈವದ ನೆಲೆ ನೋಡು ||ಪ||

ಗುರುವಿನ ಕರುಣಕಟಾಕ್ಷವದಲ್ಲದೆ
ನರರಿಗೆ ದೊರಕದು ಪರಸುಖವು
ಹಿರಿಯರ ಅಭಿಮತವಿಲ್ಲದ ಗೃಹದೊಳು
ಕರೆಕರೆಯಾಗಿದೆ ಕೌತುಕವು ||೧||

ಸ್ಥಿರವಾಗಿ ನಿಲ್ಲದ ಮನವು ಭ್ರಮೆಯೊಳು
ನೆರೆವುದು ತನ್ನೊಳು ಘಾತಕವು
ಸೆರೆವಿಡಿಯಲು ಹರಿವಿಡಿದಿಹನಾತನ
ತೊರೆವುದು ಭವಭಯ ಸೂತಕವು ||೨||

ಯೋಗಿಯ ಹೃದಯದಿ ಸಕಲಾಗಮ ಸಮ-
ನಾಗಿಯೆ ತೋರ್ಪುದು ದೃಢವಾಗಿ
ಸಾಗರ ಸುತ್ತಿದ ಭೂಭಾಗದ ಸರಿ
ಯೋಗಿಯ ದೃಷ್ಟಿಯೆ ಘನವಾಗಿ ||೩||

ಬಾಗಿದ ಕಬ್ಬಿನ ಕೋಲೊಳು ರುಚಿಕರ-
ವಾಗಿಯೆ ತೋರುವ ಪರಿಯಾಗಿ
ರಾಗಿಯ ಶಿಲೆ ತಾ ಬಳಲಿದೆನೆನುತಲೆ
ಭಾಗೆಯ ಕೊಂಬುದೆ ಸಮವಾಗಿ ||೪||

ನಂಬದಿರಂಬರ ವಾದಿಯ ಅಂಶಕ
ತುಂಬಿದ ಕುಂಭ ದೃಢದಿಂದ
ಅಂಬರದೊಳಗಣ ಮೇಘಕೆ ವಾಯುವು
ಬೆಂಬಲವಾಗಿಹ ದಯದಿಂದ ||೫||

ಸಂಭ್ರಮದಿಂದಲಿ ಗರ್ಜಿಸಿ ನಾಲ್ದೆಸೆ
ಅಂಬಿಸಿ ಪೋಗುವ ಪರಿಯಿಂದ
ಅಂಬುಜಭವ ಬರೆದಕ್ಷರ ಮಾಸಲು
ಅಂಬರ ಬಯಲಹ ತೆರದಿಂದ ||೬||

ಶುದ್ಧವಶುದ್ಧವು ಆಗಿಹ ಪೃಥ್ವಿಯ
ಬುದ್ಧವಾಗಿಯೆ ತೊಳೆದವರಾರು
ಅಬ್ಧಿಯೆ ಮಧ್ಯದಿ ಎದ್ದ ವಾರಿಗಳನು
ತಿದಿಯೆ (ತಿದ್ದಿಯೆ?) ಪಸರಿಸುವವರಾರು ||೭||

ಇದ್ದರೆ ಸರ್ವರ ಭವನದೊಳಗ್ನಿಯೆ
ಮೆದ್ದವ ಶುದ್ಧವೆಂಬವರಾರು
ಹೊದ್ದಿದ ಮೂರುತಿ ನಾಲ್ದೆಸೆಯೊಳಗಿರೆ
ಬದ್ಧವಾಗಿಯೆ ಕಟ್ಟಿಕೊಳಲ್ಯಾರು ||೮||

ಬಯಲೊಳಗಿರುತಿಹ ಬಹು ಝೇಂಕಾರವ
ನಯದೊಳು ನೋಡಿದರೇನುಂಟು
ಬಯಲೊಳು ಮೂರಕ್ಷರವನೆ ಬಿತ್ತಲು
ಮೈಲಿಗೆ ತಳಿಸುವ ಬೆಳೆಯುಂಟು ||೯|

ಪಯಣದ ಮನೆಸಿರಿ ಸೊಬಗನು ಜಯಿಸುವ
ಹಯವನು ಏರುವ ಬಗೆಯುಂಟು
ದಯದೊಳು ಶ್ರೀಗುರು ವಿರಚಿಸಿಯಿತ್ತರೆ
ಕ್ರಮವಿಕ್ರಯದೊಳು ಫಲವುಂಟು ||೧೦||

ಬೇಡನು ಸಲಹಿದ ಆಡು ತಾ ಯಾಗಕೆ
ಬೇಡವೆಂಬರಾರು ಶಾಸ್ತ್ರದಲಿ
ಕಾಡಿನೊಳಿರುತಿಹ ಮೃಗವಾಲದ ಸಿರಿ
ನೋಡು ನೀ ನಿತ್ಯದಿರಾಸ್ತ್ರದಲಿ ||೧೧||

ಕೋಡಗನಾದರು ನೋಡಿಯೆ ಭಜಿಸಲು
ಕೂಡುಗು ಹರಿಯ ಪರತ್ರದಲಿ
ಕೂಡಿಕೊಂಡರೆ ಪರಬೊಮ್ಮನ ಮನದಲಿ
ಆಡದು ಮಾಯದ ಸೂತ್ರದಲಿ ||೧೨||

ಕಸ್ತೂರೀ ಮೃಗ ಗೋರೋಚನ ಸಹ
ಉತ್ತಮವಾಗಿಹ ಮುತ್ತುಗಳು
ನಿತ್ಯದಿ ಕ್ರಯಗಟ್ಟಿ ಉಣ್ಣದೆ ಹುಲ್ಲನು
ಕಿತ್ತು ಮೆದ್ದಾಡುವ ಅವಸ್ಥೆಗಳು ||೧೩||

ಮೃತ್ಯುವ ಕಾಣದೆ ಬೊಮ್ಮವನಡಗಿಸಿ
ಎತ್ತಲಾದರೂ ಪೋದ ವಸ್ತುಗಳು
ಭಕ್ತರಿಗಲ್ಲದೆ ಮನವಪರೋಕ್ಷದ
ವಸ್ತುವ ಕಾಣದೆ ನಿತ್ಯದೊಳು ||೧೪||

ಜ್ಯೋತಿರ್ಮಯವಾಗಿಹ ವಸ್ತುವಿನೊಳು
ಸೂತಕ ಹೊದ್ದುವುದೇನುಂಟು
ಜಾತಿವಿಜಾತಿಯೊಳೊಲಿದಿಹ ಶಿವನವ
ದೂತರ ನಂಬದರಾರುಂಟು ||೧೫||

ಓತು ಅಶುದ್ಧವನುಂಡರು ಕವಿಲೆಯೊ-
ಳ್ಮಾತಿನ ವಾಸಿಯದೇನುಂಟು
ನೀತಿ ವಿಹೀನರೊಳುದಿಸಿದ ಲವಣದ
ಧಾತು ಕೂಡದೆ ಸವಿಯೇನುಂಟು ||೧೬||

ಧಾರುಣಿ ಭಾರವ ಮಿತಿಗಟ್ಟಿ ತಕ್ಕಡಿ-
ಗೇರಿಸಿ ತೂಗಲು ಬಹುದೀಗ
ವಾರಿಧಿಯನು ಮುಕ್ಕುಳಿಸಿಯೆ ಬತ್ತಿಸಿ
ತೋರಿಸಲಪ್ಪುದು ಬಹುಬೇಗ ||೧೭||

ಧಾರುಣಿಯೊಳು ಗುರುಕರುಣದ ಅಳತೆ ಮು-
ರಾರಿಗು ಸಿಲುಕದು ಅದು ಈಗ
ತೋರಿತು ಅಲ್ಲಿ ವರಾಹತಿಮ್ಮಪ್ಪ ಕು-
ಮಾರರು ವಾಜಿಯ ತಡೆದಾಗ ||೧೮||
*******

No comments:

Post a Comment