ತಾಳ : ಕೆಹೆರವ (ನಾಲ್ಕು ಮಾತ್ರಾ )
ಬನ್ನ ಬಡಿಸದಿರು ಹರಿಯೆ ಅನ್ಯರವನಿವನೆಂದು |
ಎನ್ನ ಅಪರಾಧಗಳ ಮನ್ನಿಸಿ ಕಾಯೊ ಹರಿಯೆ ||ಪ ||
ಸಂಸ್ಕೃತ ಸಾಹಿತ್ಯದಲಿದ್ದ ಪಾಂಡಿತ್ಯದ ಮದದಲಿ |
ಪ್ರಾಕೃತ ಕನ್ನಡವ ನಿಂದಿಸುತ ಜನರಲ್ಲಿ ||
ವಿಕೃತ ಮನದಿಂದ ವಿಜಯ ದಾಸರಾಹ್ವಾನ |
ಅಸಂಸ್ಕೃತ ನಡೆಯಿಂದ ತಿರಸ್ಕರಿ ಸಿ ಅಪಮಾನ ಗೈದಿರಲು ||1||
ಮನನೊಂದು ವಿಜಯದಾಸರು ಇರುತಿರಲು |
ಪಂಡಿತನ ಉದರ ಶೂಲೆಯ ಬಾಧೆ ಕಾಡಲು ||
ಅನೇಕ ಔಷಧ ಉಪಚಾರ ಮಾಡಿದರು ಗುಣಕಾಣದೆ |
ಅನ್ನ ಪಾನ ಮಾಡದಲೆ ಖಿನ್ನನಾಗಿರಲು ||2||
ವಿಜಯ ದಾಸರ ಶಿಷ್ಯನ ಕೈಯಲ್ಲಿ ಪಂಡಿತನ |
ನಿಜ ಉದರ ಶೂಲೆಯನು ನಿವಾರಿಸಿ ಆಯುರ್ದಾನವ ಮಾಡಿಸಿ ||
ಸಜ್ಜನನ ಮಾಡಿ ಹರಸಿ ಜಗನ್ನಾಥ ದಾಸನಾಗಿಸಿದೆ |
ಅಜರಾಮರ ಮೇರು ಕನ್ನಡ ಕಾವ್ಯ "ಹರಿಕಥಾಮೃತಸಾರ " ಪ್ರಸಾದಿಸಿದೆ ||3||
ನಿನ್ನವರೆಂದು ದಾಸರೆಲ್ಲರ ಉದ್ಧರಿಸಿದ ದೇವಾ |
ನನ್ನನ್ನೂ ಹರಸೆಂದು ಬೇಡುತಿರುವೆ ನಾನಿಂದು ||
ಹೀನಗುಣಸಂಪನ್ನ ಇವನೆಂದು ನನ್ನನ್ನು |ಉದಾ-
ಸೀನ ಮಾಡದಲೆ ಕರುಣೆಯ ಸುರಿಸೊ ದೇವಕಿತನಯ ||4||
ನಾನು ನಾನೆಂಬ ಅಹಂಕಾರದಲಿ ನಿನ್ನ ಮರೆತೇನೋ ದೇವಾ |
ನಿನ್ನ ನನ್ನವನೆಂಬೆ ನನ್ನ ನಿನ್ನವನಾಗಿಸೊ ||
ಹಣ್ಣಿನ ಸವಿಯು ಜೇನಿನ ಸಿಹಿಯು ಭಾವದಲ್ಲಿ ಬರಲಿ |
ಕಣ್ಣ ರೆಪ್ಪೆ ಕಾಯುವಂತೆ ರುಕ್ಮಿಣಿ -ಕೃಷ್ಣ ನಂದನನ ಕಾಯೊ ವಿಠಲ ||5||
*********
ರಚನೆ : ಗುರುರಾಜ ಚಿಟಗುಪ್ಪಿ
ಗಾಯನ : ಗುರುರಾಜ ಚಿಟಗುಪ್ಪಿ
ಸ್ವರ ಸಂಯೋಜನೆ : ಗುರುರಾಜ ಚಿಟಗುಪ್ಪಿ
*******
No comments:
Post a Comment