Thursday, 17 October 2019

ಬೂದಿ ಮುಚ್ಚಿದ ಕೆಂಡದಂತಿಪ್ಪರು ankita vijaya vittala


ಬೂದಿ ಮುಚ್ಚಿದ ಕೆಂಡದಂತಿಪ್ಪರು
ಈ ಧರೆಯ ಮೇಲೆ ಶ್ರೀಹರಿಯ ಭಕ್ತ ಜನರು||ಪಲ್ಲ||

ಅಂಗನೋಡಲು ಅಷ್ಟ ವಕ್ರವಾಗಿಪ್ಪರು
ಕಂಗಳಿಂದಲಿ ನೋಡೆ ಘೋರತರರು
ಮಂಗಳಾಂಗನ ಅಂತರಂಗದಲಿ ಭಜಿಸುತ್ತ
ಹಿಂಗದೆ ಸಂತಜನ ಸಂಗದೊಳಿಹರೊ||೧||

ನಾಡಜನರುಗಳಂತೆ ನಡೆಯರು ನುಡಿಯರು
ಚಾಡಿ ಕ್ಷುದ್ರವ ಕೇಳಿ  ಒಡಲ ತುಂಬಿಸಿಕೊಳರು
ಕೂಡರೊ ಕುಟಿಲ ಜನಸಂಘದಲ್ಲಿ
ರೂಢಿಯೊಳಗೊಂದೊಂದೆ ಗೂಢವಾಗಿಹರು||೨||

ಡಂಭಕತನದಿಂದ ಗೊಂಬೆ ನೆರಹಿಕೊಂಡು
ಡೊಂಬ ಕುಣಿದಂತೆಕುಣಿದಾಡರು
ಹಂಬಲಂಗಳ ಬಿಟ್ಟು ಹರುಷವುಳ್ಳವರಾಗಿ
 ಬಿಂಬಮೂರುತಿಯನ್ನೆ ಕೊಂಡಾಡುತಿಹರು||೩||

ಶತ್ರು ಮಿತ್ರರುಗಳ ಸಮವಾಗಿ ಎಣಿಸುವರು
ಪುತ್ರ ಮಿತ್ರ ಭ್ರಾತೃಗಳ ನೆಚ್ಚರೊ
ಯಾತ್ರೆ ತೀರ್ಥಂಗಳಿಗೆ ಹೋಗುತ್ತ ಶ್ರೀ ಹರಿಯ
ಸ್ತೋತ್ರಗಳ ಮಾಡಿ ಸಾಧನೆ ಮಾಡಿಕೊಂಬರೊ||೪||

ಕಷ್ಟ ಸೌಖ್ಯಂಗಳನೆ ಕಲಿವರಗರ್ಪಿಪರು
ಇಟ್ಟು ತೊಟ್ಟಿದ್ದು ಹರಿಕೊಟ್ಟನೆಂಬುವರು
ಸೃಷ್ಟೀಶ ಸಿರಿ ವಿಜಯ ವಿಠಲನ ಪದ ಪದ್ಮ
ಮುಟ್ಟಿ ಭಜಿಸಿ ಮುಕ್ತಿ ಸಾಮ್ರಾಜ್ಯ ಪಡೆಯುವರು||೫||
********

No comments:

Post a Comment