Friday, 27 December 2019

ಹರನಾಡಿದ ತಾಂಡವ ತೋಮ್ ತಕಝಣ ಎಂದು ankita kembhavi bheemanodeya

ಹರನಾಡಿದ ತಾಂಡವ | 
ತೋಮ್ ತಕಝಣ ಎಂದು ||
ಶಿರದಲಿ ಧರಿಸಿದ ಸುರಗಂಗೆಯು ತಾ| 
ಭರದಿಂದಲಿ ಭೋರ್ಗರೆಯುತಲಿರುತಿರೆ ||

 ಧಿಂ ಧಿಂ ಧಿಮಿಕಿಟ ಧಿಮಿಕಿಟ ಧಿಮಿಧಿಮಿ |
ಧಿಂಧಾ ತಿರಕಿಟ ತಿರಕತ ಗದುಗನ ||
ವೃಂದಾರಕ ಸಂದೋಹವು ಬಗೆಬಗೆ 
ವೃಂದವಾದ್ಯಗಳಂದದಿ ನುಡಿಯಲು|| 

 ಫಣಿಫಣಗಣಗಳು ಫೂತ್ಕರಿಸಲು ಫಣಿಮಣಿ 

ಗಣಗಳ ಥಳಥಳ ಬೆಳಕಿನ ಸೆಳೆಗಳು |
ಕುಣಿಕುಣಿದಾಡುವ ಗಣಗಳ ಮಧ್ಯದಿ 
ಫಣಿಭೂಷಣ ಶಿವ ಮೈಮನ ಮರೆತು|| 

 ಕಿಡಿಯೊಡೆಯಿತು ನಡುಗಣ್ಣಿನ ಕುಡಿಯಲಿ 

ಮಿಡಿಫಣಿಗಳು ಜಡೆಯಡಿ ಅಡಗುತಲಿರೆ |
ಕಡು ಕೆಂಜೆಡೆಗಳ ಗಢಣವು ಬಿರಿಯಲು 
ಗಡಡಮರುಗ ಡಮಡಮ ಬಾರಿಸಿ||

 ಅಂಬುಧಿ ಯುಗಿ ಯುಗಿ ಕುಂಬಿಣಿ 

ಥಕಥಕ ಅಂಬರದಲಿ ಕಾದಂಬಿನಿಯೋಡಲು |
ಭಂ ಭಂ ಭಂ ಭಂ ಶಂಖವನೂದಲು 
ತ್ರ್ಯಂಬಕ ಗೌರೀ ಚುಂಬಕ ಧಿತ್ತೈ ||

 ಸೋಮಕಲಾನಿಧಿ ಕಾಮನಿವಾರಕ 

ರಾಮನಾಮ ಮಧುಪ್ರೇಮಿ ಮಹೇಶ್ವರ |
ವಾಮದೇವ ಗಿರಿಜಾಧವ ಕೆಂಭಾವಿ ಭೀಮನೊಡೆಯ 
ಶ್ರೀ ರಾಮನ ಒಲಿಸಲು||
 ಶ್ರೀ ಕೆಂಭಾವಿ ಭೀಮದಾಸರ ಕೃತಿ
 ಶ್ರೀ ರಾಯಚೂರು ಶೇಷಗಿರಿದಾಸರ ಗಾಯನ(7:03)
******

No comments:

Post a Comment