kruti by Nidaguruki Jeevubai
ಸಾರಿದೆನೊ ನಿನ್ನ ಶ್ರೀನಿವಾಸ
ಪಾರುಗಾಣಿಸೊ ಎನ್ನ ಉದ್ಧರಿಸೊ ಶ್ರೀಶ ಪ
ವಾರಿಜಾಕ್ಷನೆ ನಿನ್ನ ಚಾರುಚರಣದ ಸ್ಮರಣೆ
ಬಾರಿ ಬಾರಿಗೆ ಮಾಳ್ಪ ಭಾಗ್ಯವೀಯೊ
ಸಾರಸಾಕ್ಷನೆ ಸಂಸಾರ ದು:ಖದಿ ಎನ್ನ
ಸೇರದಂದದಿ ಮಾಡೋ ಸರ್ವವಂದಿತ ಕೃಷ್ಣ 1
ಅಂಬುಜಾಕ್ಷನೆ ನಿನ್ನ ನಂಬಿದೆನೊ ಈ ಭವದ
ಬಂಧ ತಪ್ಪಿಸಿ ಕಾಯೊ ಇಂದಿರೇಶ
ಹಿಂದು ಮುಂದ್ಯಾರಿಲ್ಲವೆಂದು ನಂಬಿದೆ ನಿನ್ನ
ಛಂದದಿಂದ ಸಲಹೊ ಮಹೇಂದ್ರತೀರ ನಿವಾಸ 2
ಸುಂದರಾಂಗನೆ ದೇವ ವಂದಿಸುವೆ ತವಪಾದ
ಧ್ವಂದ್ವ ಭಜಕರ ಸಂಗ ಬಂದುನೀಡೈ
ಇಂದಿರಾರಮಣನೆ ನಂದಗೋಪನ ಕುವರ
ಬಂದು ಭಕುತರ ಪೊರೆವ ಆನಂದ ಮೂರುತಿ ಕೃಷ್ಣ3
ಶರಣಜನರನು ಪೊರೆಯೆ ತ್ವರಿತದಲಿ ಬಂದು ಈ
ಗಿರಿಯ ಮಧ್ಯದಿನಿಂದೆ ಮಧುಸೂದನ
ಶರಣುಶರಣೆಂದು ನಿನ್ನಡಿಗೆರಗುವ ಜನರ
ದುರಿತವೆಲ್ಲವ ಕಳೆದು ಪೊರೆವ ದಯಾನಿಧಿ ಕೃಷ್ಣ4
ಕನಕಗರ್ಭನ ಪಿತನೆ ಕಡುಲೋಭವನೆ ಬಿಟ್ಟು
ದೃಢವಾದ ಅಭಯವನು ದಯಪಾಲಿಸೊ
ಪೊಡವಿಗೊಡೆಯನೆ ದೇವ ಕಮಲನಾಭವಿಠ್ಠಲ
ಬಿಡದೆ ನಿನ್ನನು ಭಜಿಪ ಧೃಢ ಮನವ ನೀಡೈ5
***
No comments:
Post a Comment