ಶ್ರೀ ಕರ್ಜಿಗಿ ದಾಸಪ್ಪನವರ ಕೃತಿ
( ಶ್ರೀದವಿಠಲಾಂಕಿತ )
ರಾಗ : ಕಾಪಿ (ಭಜನಾಧಾಟಿ)
ನೋಡೆ ನೋಡೆ ಎನ್ನ ಮುಖವ ನೋಡತಕ್ಕದೆ
ನೋಡದಿರುವುದುಚಿತವೇ ಯವೆಯನಿಕ್ಕದೆ॥ಪ॥
ಯವೆಯನಕ್ಕದೆ ನೋಡಲೇನೊ ಮೀನಳಲ್ಲ ಎನ್ನ
ಧವನ ಬಿಟ್ಟು ದೂರ ಹೊಂದುವ ಗರತಿಯಲ್ಲ॥೧॥
ಭಾರ ಹೊರುವಳಲ್ಲ ಯಾಕಿಷ್ಟು ದೂರ ಬಂದಿ
ಭಾರಿ ಕೊಡದ ಹೊತ್ತು ನೀ ತರುವ ನೀರಾ॥೨॥
ಹೊತ್ತ ನೀರಾ ತಡದೆ ಎಲಾ ಮಂದರಾಚಲ
ಚಿತ್ತ ಚೋರ ಎನ್ನೊಳೆಷ್ಟು ಮಾಡುವಿ ಛಲಾ॥೩॥
ಛಲವು ಬಿಟ್ಟರೆ ಇನ್ನು ನಿನಗೆ ಬೆಲೆಯು ಇಲ್ಲ
ತಲೆಯ ತಗ್ಗಿಸಿ ನೆಲವ ನೋಡಿ ನಡಿವೆಯಲ್ಲಾ॥೪॥
ನಡೆಯ ಲೇಸು ತಲೆಯ ತಗ್ಗಿಸಿ ನೋಡಿ ಪೊತ್ತ
ಕೊಡದ ಹೊರೆಯ ಹೊಡಧ್ಯಾತಕೆನ್ನ ಕಾಡಿ॥೫॥
ನಿನ್ನ ಕಾಡಿ ಕೂಡ ಬಂದವನೊಳೆಷ್ಟು ಬಿಂಕ-
ವನ್ನು ತೋರಿ ಬರಿದೆ ಮಾಡುವರೆ ಸಿಟ್ಟು॥೬॥
ಸಿಟ್ಟುಮಾಡಲಿಕ್ಕೆ ನಾರಸಿಂಹಳೇನೊ ನಿನ್ನ
ಸಿಟ್ಟಿಗಂಜಿ ವಂಡಂಬಡುವಳಲ್ಲ ನಾನು॥೭॥
ನೀನೆ ವಡಂಬಡುವದಕ್ಕೆ ಮಾನಿನಿ ಮಣಿ
ಯೇನುಬೇಡಿದರು ಕೊಡುವೆ ನಿನಗೆ ನಾನೆ ಹೊಣೆ॥೮॥
ಬಾಳಲಾರೆ ಬೇಡಿಕೊಂಡಿ ತಿರುಕರಂತೆ ಛೀ
ಬಾಳುಗೇಡಿ ಎನ್ನೊಳ್ಯಾತಕಿನ್ನು ಭ್ರಾಂತೆ॥೯॥
ಭ್ರಾಂತಿ ಬಿಡದೆ ಬಾಲೆ ನಿನ್ನ ಬೆರೆಯಿದಲ್ಲದೆ ಇಷ್ಟು
ಪಂಥ ಮಾಡುವರೆ ಲೇಶ ಕರುಣವಿಲ್ಲದೆ॥೧೦॥
ಕರುಣವಿಲ್ಲದೆ ಹೆಂಗೊರಳ ಕೊಯಿದಿಯಂತೊ ಎನ್ನ
ಹರಣದೊಡೆಯನಾಹೆನೆಂಬ ಹವಣೆ ಸಾಕೊ॥೧೧॥
ಸಾಕು ಹವಣೆ ನಿನ್ನ ಸಂಗಸುಖವನಿತ್ತು ಎನ್ನ
ಯಾತಕತ್ತು ಅಂಜಿಸುವಿ ಕಂಗಳೊತ್ತು॥೧೨॥
ಅತ್ತು ಕಂಗಳೊತ್ತಲೇಸೆ ಪತ್ನಿ ವಿರಹವೆ
ಚಿತ್ತಚೋರ ಶಿಲೆಯಮ್ಯಾಲೆ ಬರದ ಬರಹವೆ॥೧೩॥
ಶಿಲೆಯಮ್ಯಾಲೆ ಬರೆಯಮ್ಯಾಲೆ ಶಿಲ್ಪಿ ನಾನು ಎನ್ನ
ನೆಲೆಯು ಕೇಳಿ ಕಂಡು ಬಲ್ಲರಿಯೆ ನೀನು॥೧೪॥
ಕಂಡು ಕೇಳಿ ಬಲ್ಲೆ ಕೃಷ್ಣ ಕಳ್ಳನೆಂಬುದಾ ಇಕೋ
ಗಂಡರುಳ್ಳ ಗರತೆರಿಂದ ಬೇಸಿಕೊಂಬುದಾ॥೧೫॥
ಗರತೇರಿಂದ ಬೈಸಿಕೊಂಬುವದೆ ಲಾಭ ಅನ್ಯ
ಪುರುಷನೆಂದು ನಾಚಿ ಮಾಡಬ್ಯಾಡ ಲೋಭಾ॥೧೬॥
ನಾಚಲ್ಯಾಕೆ ನಾ ದಿಗಂಬರಳೆ ಹೋಗೋ ದುರಾ-
ಲೋಚನೆಯ ಬಿಟ್ಟು ಧೈರ್ಯವಂತನಾಗು॥೧೭॥
ಧೈರ್ಯವಂತನಾಹೆನೇಕಾಂತ ನದ ನದಿ ಸ್ವಲ್ಪ
ಧೈರ್ಯವನ್ನುಮಾಡಿ ನೋಡು ಮದನ ಕದನದಿ॥೧೮॥
ಕದನಕೆ ಕಾಲ್ಗೆದರುವಂಥ ಕಲ್ಕಿ ನೀನು ಅಂತು
ಹದನನಗಲಿಕೊಂಬೆ ನಿಲ್ಲಲನಕ ನಿಲ್ಲೊ॥೧೯॥
ನಿಲ್ಲು ನಿಲ್ಲೆಂದರೆ ನಿಂತ ಶ್ರೀದವಿಠಲ
ವೊಡಂಬಟ್ಟ ಕೊಟ್ಟ ಸ್ವಪ್ರಸಾದ॥೨೦॥
***
No comments:
Post a Comment