Audio by Mrs. Nandini Sripad
ಶ್ರೀ ಅಪ್ಪಾವರ ಮೇಲೆ ಹರಪನಹಳ್ಳಿ ಶ್ರೀ ವೆಂಕಟದಾಸರ ಕೃತಿ
(ವರದ ವೆಂಕಟವಿಠಲ ಅಂಕಿತರು)
ರಾಗ ಆನಂದಭೈರವಿ ಮಿಶ್ರಛಾಪುತಾಳ
ಬಿಟ್ಹ್ಯಾಂಗೆ ಇರಲಿನಾ ಕೃಷ್ಣಾರ್ಯರನು ಇ - ।
ನ್ನೆಷ್ಟು ದಿವಸಕೆ ಬಾಹೋನೇ ॥ ಪ ॥
ಇಷ್ಟು ದಿವಸವು ಮಹಿಮೆ ತಿಳಿಯಲಿಲ್ಲವೆ ನಿಂಗೆ ।
ಕಟ್ಟಿ ಹಾಕಿದ ತನ್ನ ಕರುಣಪಾಶದಿ ಸಖಿಯೆ ॥ ಅ ಪ ॥
ಮಂದಗಮನೆ ಕೇಳೆ , ಬಂದು ಊರಿಗೆ ಪ್ರಭೂ ।
ಒಂದೇಳು ದಿನವಾಯಿತೇ ।
ಸಂದೇಹದವಳು ನಾನೆಂದು ತಿಳಿದದಕೆನ್ನ ।
ಸುಂದರಗೇ ಬ್ಯಾಸರಾಯಿತೇ ।
ಒಂದೂ ನುಡಿಯದೆ ದೋಷವೃಂದಗಳೆಣಿಸಿದರೆ ।
ಮಂದಿಯಲಿ ಮಾನ ಹೋಯಿತೇ ॥
ಒಂದೂ ತಿಳಿಯದಲೆ ನಾ ಹೊಂದಿದಾನಂದದಿರೆ ।
ಒಂದಿರುಳೇ ಕಲೆತು ಆನಂದಪಡಿಸಿದ ಸಖನಾ ॥ 1 ॥
ಮನಸಿನೊಳಗಿದ್ದದನು ನೆನೆಸಿಕೊಳ್ಳುತಿರಲು ಅದ - ।
ನನುಸರಿಸಿ ತಾ ನುಡಿದನೇ ।
ಮುನಿಸ್ಯಾಗಬ್ಯಾಡೆಂದು ಮುದ್ದಿಸಿ ಕರಪಿಡಿದು ।
ಘನ ಸುಸೇವಕಳೆಂದನೇ ।
ವನಿತೆ ಕೇಳೆಲೆ ನೀನು , ಮಾಡಿದಪರಾಧಗಳ ।
ಎಣಿಸಿ ಕಳೆದಿಹೆನೆಂದನೇ ॥
ಕನಸಿನಲಿ ಬಂದು ಕಾಣಿಸಿಕೊಂಬೆ ಎಂದು ದು - ।
ಮ್ಮನಸನಾಗ ಬ್ಯಾಡೆಂದು ನುಡಿದಂಥ ಸುಮನಸನಾ ॥ 2 ॥
ಧೀರಗಾಭರಣವನು ಕೇಳಲೇಕಾಂತದಲಿ ।
ಚಾರುವಸ್ತ್ರವನಿತ್ತನೇ ।
ಬಾರಿಬಾರಿಗೆ ಬೇಡಿಕೊಂಡು ನಮೋನಮೋ ಮಾಡೆ ।
ಭೂರಿ ಹರಸುತ ನಿಂದನೇ ।
ಊರಿಗ್ಹೋಗುವೆನೆಂದು ಮೋರೆ ನೋಡುತ ಎನಗೆ ।
ಭಾರಿ ವಸ್ತ್ರವನಿತ್ತನೇ ॥
ಮಾರಪಿತ ವರದವೆಂಕಟವಿಠ್ಠಲನ ದಾಸಾ ।
ಬಾರದಿಪ್ಪೆನೆ ಎಂದು ಬಹುಭಾಷೆ ಕೊಟ್ಟವನಾ ॥ 3 ॥
*********
No comments:
Post a Comment