ಶ್ರೀರಾಗ - ಆದಿತಾಳ
Audio by Mrs. Nandini Sripad
ಸೇವಕತನದ ರುಚಿಯೇನರಿದ್ಯೋ |
ದೇವ ಹನುಮರಾಯ | ವೈರಾಗ್ಯ ಬೇಡಿದೆ ||ಪಲ್ಲವಿ||
ಉದಧಿಯ ದಾಟಿ ಸೀತೆಯ ಕ್ಷೇಮ ತಂದಾಗ
ಮದುವೆಯ ಮಾಡೆನ್ನಬಾರದಿತ್ತೇ
ಪದದಿ ಪಾಷಾಣವ ಪೆಣ್ಣ ಮಾಡಿದವಗೆ
ಇದು ಏನಸಾಧ್ಯವೊ ಹನುಮ ನೀನೊಲ್ಲದೆ ||೧||
ಕ್ಷಣದಲಿ ಸಂಜೀವನ ಗಿರಿ ತಂದಾಗ
ಹಣ ಹೊನ್ನು ಬೇಡಲು ಕೊಡದಿದ್ದನೇ ರಾಮ
ವಿನಯಿ ವಿಭೀಷಣನಿಗೆ ರಾಜ್ಯವಿತ್ತವನಿಗೆ
ಇದು ಏನಸಾಧ್ಯವೊ ಹನುಮ ನೀನೊಲ್ಲದೆ ||೨||
ಸಾರ್ವಭೌಮನು ಮೆಚ್ಚಿದಾಗಲೆ ನೀ ಪೋಗಿ
ಉರ್ವಿಯ ಬೇಡಲು ಕೊಡದಿದ್ದನೇ ರಾಮ
ಸರ್ವವ ತೊರೆದು ಶ್ರೀ ಪುರಂದರ ವಿಠಲನ
ನಿರ್ವ್ಯಾಜ ಸೇವೆಯ ಬೇಡಿದೆಯೋ ಹನುಮ ||೩||
***
Sevakatanada ruciyenaridyo |
Deva hanumaraya | vairagya bedide ||pallavi||
Udadhiya dati siteya kshema tandaga
Maduveya madennabaraditte
Padadi pashanava penna madidavage
Idu enasadhyavo hanuma ninollade ||1||
Kshanadali sanjivana giri tandaga
Hana honnu bedalu kodadiddane rama
Vinayi vibishananige rajyavittavanige
Idu enasadhyavo hanuma ninollade ||2||
Sarvabaumanu meccidagale ni pogi
Urviya bedalu kodadiddane rama
Sarvava toredu sri purandara vithalana
Nirvyaja seveya bedideyo hanuma ||3||
***
pallavi
sEvakatneda ruci enaLedyO dEva hanumarAya nI vairAgya bEDi
caraNam 1
udadhiya langhisi sIteya kaNDu bandAga maduveya mADenna bhAraditte
padadi bhASANa peNNa mADidavanige idu Enu AscaryavO nI bhayasalollade
caraNam 2
kSaNadoLu sanjIvana giri tandAga haNa honnu bEDalu koDadihane
vanajAkSi siridEvi arasu udAranige khaNavAgihudu Enu bhayasalOllade
caraNam 3
sArvabhaumanu tAne mecci bandAgale urviya bEDalu koDadihane
sarvava toredu shrI purandara viTTalana nirvyAja bhakuti bEDi koNDyallade
***
ಸೇವಕತನದ ರುಚಿಯೇನರಿದ್ಯೋ
ದೇವ ಹನುಮರಾಯ ವೈರಾಗ್ಯ ಬೇಡಿ
ಉದಧಿಯ ದಾಟಿ ಸೀತೆಯ ಕಂಡು ಬಂದಾಗ
ಮದುವೆಯ ಮಾಡೆನ್ನಬಾರದಿತ್ತೆ
ಪದದಿ ಪಾಷಾಣ ಪೆಣ್ಣ ಮಾಡಿದವನಿಗೆ
ಇದು ಏನಾಶ್ಚರ್ಯವೊ ನೀ ಬಯಸಲೊಲ್ಲದೆ
ಕ್ಷಣದೊಳು ಸಂಜೀವನಗಿರಿ ತಂದಾಗ
ಹಣ ಹೊನ್ನು ಬೇಡಲು ಕೊಡದಿಹನೆ
ವಿನಯದ ವಿಭೀಷಣಗೆ ರಾಜ್ಯವಿತ್ತ-
ವನೀಗೇನಾಶ್ಚರ್ಯವೊ ಹನುಮ ನೀನೊಲ್ಲದೆ
ಸಾರ್ವಭೌಮನು ತಾನೆ ಮೆಚ್ಚಿ ಬಂದಾಗಲೆ
ಉರ್ವಿಯ ಬೇಡಲು ಕೊಡದಿಹನೆ
ಸರ್ವವ ತೊರೆದು ಶ್ರೀಪುರಂದರವಿಠಲನ
ನಿರ್ವಾಜ ಭಕುತಿಯ ಬೇಡಿಕೊಂಡ್ಯಲ್ಲದೆ...
ನಮ್ಮ ಹರಿದಾಸ ಸಾಹಿತ್ಯದಲ್ಲಿ ಸ್ತುತಿ ಪದಗಳು, ಪ್ರಾರ್ಥನಾ ಪದಗಳು, ಶರಣಾಗತಿಯ ಕುರಿತಾದ ಪದಗಳು, ನವವಿಧಭಕುತಿಯ ಕುರಿತಾದ ಪದಗಳು, ಎಚ್ಚರಿಕೆಯ ಪದಗಳು, ಸಂದೇಶಾತ್ಮಕ ಪದಗಳು, ಕ್ಷೇತ್ರಸ್ಥ ಮೂರ್ತಿಯ ಪದಗಳು, ವೈರಾಗ್ಯದ ಪದಗಳು ಹೀಗೆಲ್ಲ ಒಂದು ವಿಶೇಷವಾದ ವಿಷಯಗವನ್ನು ಮಾಧ್ಯಮವನ್ನಾಗಿಟ್ಟುಕೊಂಡು ಪರಮಾತ್ಮನ, ಗುರುಗಳ, ದಾಸರ ಸ್ತುತಿಗಳನ್ನು ಮಾಡಿದ್ದನ್ನ ಮಾಡ್ತಿರೋದನ್ನ ದಾಸರಪದಗಳಲ್ಲಿ ಸರ್ವೇಸಾಧಾರಣ ಕಾಣುತ್ತೇವೆ. ಇವೆಲ್ಲದಕ್ಕಿಂತ ವಿಶೇಷವಾಗಿ ನನಗೆ ಅತ್ಯಂತ ಇಷ್ಟವಾದುವು ಎಂದರೆ ನಿಂದಾಸ್ತುತಿಗಳು. ನಿಂದೆಯನ್ನು ಮಾಡುತ್ತಿದ್ದಂತೆಯೇ ಇದ್ದು ಗುಣಗಳನ್ನು ತಿಳಿಸುವ ಈ ನಿಂದಾಸ್ತುತಿಗಳದ್ದು ದಾಸಸಾಹಿತ್ಯದಲ್ಲಿ ಅದಕ್ಕೇ ಆದ ವಿಶೇಷಸ್ಥಾನವಿದ್ದದೆ.
ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ ಎನ್ನುವ ಶ್ರೀ ಕನಕಪ್ಪನ ಪದ ಲಕ್ಷ್ಮೀದೇವಿಯರು ನಿನಗಿಂತ ಕಮ್ಮಿ ಏನೂ ಇಲ್ಲ ನೋಡಪ್ಪಾ ಎಂದು ಹೇಳುತ್ತಲೇ, ಪರಮಾತ್ಮನ ಗುಣಗಳನ್ನ ತಿಳಿಸುವ ನಿಂದಾಸ್ತುತಿಯೇ ಆಗಿದೆ.
ಎಂಥಾ ಚೆಲುವಗೆ ಮಗಳನ್ನ ಕೊಟ್ಟನು ಗಿರಿರಾಯನು ನೋಡಮ್ಮಮ್ಮಾ ಎನ್ನುವ ಪದದಲ್ಲಿ ರುದ್ರದೇವರು ಸ್ಮಶಾನದಲ್ಲಿರುವವರು, ಭಸ್ಮ ಹಚ್ಚಿಕೊಳ್ಳುವವರು, ಭಿಕ್ಷೆ ಬೇಡುವವರು ಒಂದು ಕಡೆ ಸ್ಥಿರತೆ ಇಲ್ಲ. ಅಂತಹವನಿಗೆ ಹೋಗಿ ನೀನು ಮುದ್ದಿನ ಮಗಳನ್ನ ಕೊಟ್ಟು ಮದುವೆ ಮಾಡ್ತಿದ್ದಿ ಅಲ್ಲವೆ ಎಂದು ಪರ್ವತರಾಜನನ್ನು ಕೇಳಿದಂತೆ, ರುದ್ರದೇವರ ನಿಂದೆ ಮಾಡಿದಂತಿರುವ ಈ ಪದದಲ್ಲಿಯೂ ರುದ್ರದೇವರ ಗುಣಗಳನ್ನು ವಿವರಿಸುತ್ತಲೇ ಎಲ್ಲೇ ವಾಸವಿದ್ದರೂ ಮಂಗಳ ಸ್ವರೂಪರು, ವೈಷ್ಣವೋತ್ತಮರು ಎಂದೇ ಉದ್ಘೋಷಣ ಮಾಡುತ್ತಾರೆ ಶ್ರೀಮತ್ಪುರಂದರದಾಸಾರ್ಯರು.
ಇಂತದ್ದೇ ಶ್ರೀ ಕನಕದಾಸಾರ್ಯರ ಪದ - ಸಿರಿಯ ಮದವೇ ಮುಕುಂದ ನಿನ್ನ ಚರಣ ಸೇವಕನ ಬಿನ್ನಹ ಪರಾಕೆಲೋ ದೇವಾ - ಈ ಪದದಲ್ಲಿ ಸಿರಿದೇವಿಯ ಓಲಗದಲ್ಲೇ ಇರುವವನು ನೀನು, ನಿನಗೇನು ದುಡ್ಡಿನ ಕಡಿಮೆ, ಸೃಷ್ಟಿ ಮಾಡುವವನೇ ನಿನ್ನ ದೊಡ್ಡ ಮಗ, ಜೀವರ ಶ್ವಾಸ ನಿಯಾಮಕ ನಿನ್ನ ಚಿಕ್ಕ ಮಗ, ಸೊಸೆ ನೋಡಿದರೆ ವಾಗ್ದಾವಿ, ದೇವತೆಗಳೆಲ್ಲರೂ ನಿನ್ನ ಸೇವಕರು. ಇಂತಹವನಿಗೆ ನನ್ನಂತ ಭಕ್ತನ ಬಾಧೆ ಏನು ತಾನೇ ಗೊತ್ತಾಗುತ್ತೆ ಬಿಡು ಸ್ವಾಮೀ ಎಂದು ಕನಕಪ್ಪ ಪರಮಾತ್ಮನನ್ನು ನಿಂದೆ ಮಾಡುತ್ತಲೇ, ಇಡೀ ಜಗತ್ತನ್ನು ಸೃಷ್ಟಿಮಾಡುವ ಬ್ರಹ್ಮದೇವರು ನಿನ್ನ ಮಗ, ವಾಯುದೇವರು ನಿನ್ನ ಚಿಕ್ಕಮಗ, ಸಿರಿದೇವಿ ನಿನ್ನ ಮಡದಿ ಹೀಗೆ ತಾರತಮ್ಯವನ್ನು ಹೇಳುತ್ತ ಹರಿಯೇ ಸರ್ವೋತ್ತಮ ಎನ್ನುವ ಶ್ರೀಮದಾಚಾರ್ಯರ ತತ್ವವನ್ನು ನಿರೂಪಣೆ ಮಾಡುತ್ತಾರೆ. ನಾವೀಗ ನೋಡಿದ್ದು ಶ್ರೀ ನಾರದಾವತಾರಿಗಳದ್ದು, ಶ್ರೀ ಯಮಾಂಶ ಸಂಭೂತರದು ಅವೂ ಸಹ ಎರಡೇ ಪದಗಳು . ಈ ಎರಡೇ ಉದಾಹರಣೆಗಳಲ್ಲಿ ಆನಂದ ಇಷ್ಟು ಸಿಗಬೇಕಾದರೆ ದಾಸರೆಲ್ಲರು ಮಾಡಿದ ನಿಂದಾಸ್ತುತಿಗಳಲ್ಲಿನ ಗುಣಚಿಂತನೆಗಳನ್ನು ನೋಡಿದಾಗ ಅದೆಷ್ಟು ಸುಖವಲ್ಲವೆ.
ಅಂತಹ ನಿಂದಾಸ್ತುತಿಯಲ್ಲಿನ ಒಂದು ಪದವಿದು. ಶ್ರೀಮತ್ಪುರಂದರದಾಸಾರ್ಯರು ಹನುಮಪ್ಪನ ನಿಂದೆಯ ಮಾಡುತ್ತಿದ್ದಂತೆಯೇ ಮೇಲ್ನೇಟಕ್ಕೆ ಕಾಣುತ್ತಿರುವ ಈ ಪದದಲ್ಲಿ ಪರಮಾತ್ಮನಲ್ಲಿ ನೈಜ ಭಕ್ತಿ, ವೈರಾಗ್ಯ ದಾಸ್ಯತ್ವಗಿಂತ ಬೇರ್ಯಾವುದೂ ಜಗತ್ತಿನಲ್ಲಿ ಮಾನ್ಯವಾದದ್ದಿಲ್ಲ ಎಂದು ತೋರಿಕೊಡುವಂತದ್ದಾಗಿದೆ.
ದೇವಾ ಹನುಮರಾಯ ಅದೇನು ರಾಮನ ಸೇವಕತನದಲ್ಲಿನ ರುಚಿಯನ್ನು ಅರಿದ್ಯೋ (ಅರ್ಥಾತ್ ಅರಿತೆಯೋ, ಕಂಡಿದ್ಯೋ) ನೀನು ಬರೀ ವೈರಾಗ್ಯ ಬೇಡಿದ್ಯಲ್ವಾ ಎಂದು ಪ್ರಶ್ನೆಹಾಕುವಂತಿರುವ ಪಲ್ಲವಿಯಿಂದ ಆರಂಭಿಸಿ ಇಂತಹವು ಕೇಳಬಹುದಲ್ವಾ ಇದನ್ನು ಯಾಕೆ ಕೇಳಲಿಲ್ಲ? ಎಂದು ಹೇಳುತ್ತಲೇ ಅವೆಲ್ಲವೂ ತುಚ್ಛ ವಿಷಯಗಳು ಎಂದೇ ತೋರಿಸಿಕೊಡ್ತಾರೆ ಶ್ರೀನಾರದಾವತಾರಿಗಳು.
ಉದಧಿಯ ದಾಟಿ ಸೀತೆಯ ಕಂಡು ಬಂದಾಗ
ಮದುವೆಯ ಮಾಡೆನ್ನಬಾರದಿತ್ತೆ
ಪದದಿ ಪಾಷಾಣ ಪೆಣ್ಣ ಮಾಡಿದವನಿಗೆ
ಇದು ಏನಾಶ್ಚರ್ಯವೊ ನೀ ಬಯಸಲೊಲ್ಲದೆ
ಅಷ್ಟು ದೊಡ್ಡ ಮಹಾ ಸಮುದ್ರವನ್ನು ದಾಟಿ ನಿನ್ನ ಒಡೆಯನ ಮಡದಿಯನ್ನು ಕಂಡು ಬಂದು ಆಕೆಯ ಇರುವಿಕೆಯನ್ನು ಹೇಳಿದಾಗ ಬದಿಲಾಗಿ ನಿನಗೂ ಮದುವೆ ಮಾಡೆಂದು ಆ ರಾಮನನ್ನ ಕೇಳಬಾರದಿತ್ತಾ ? ಬರೀ ಸ್ಪರ್ಶ ಮಾತ್ರದಿ ಕಲ್ಲನ್ನು ಹೆಣ್ಣಾಗಿ ಮಾಡಿದ ಅದ್ಭುತಚರಿತನಿಗೆ (ಗೌತಮರ ಶಾಪದಿಂದ ಕಲ್ಲಿನಂತಿದ್ದ ಅಹಲ್ಯಾದೇವಿಯರಿಗೆ ಶಾಪವಿಮೋಚನಾ ಪ್ರಸಂಗ) ನಿನಗೆ ಮದುವೆ ಮಾಡೋದೇನೂ ಕಷ್ಟದ ಕೆಲಸವಂತೂ ಅಲ್ಲವಲ್ವಾ? ಇದನ್ನ ಬಿಟ್ಟು ಮದುವೆ ಬೇಡ ಏನೂ ಬೇಡ ನಿನ್ನ ಸೇವಕನಾಗಿದ್ದರೆ ಸಾಕೆಂದು ವೈರಾಗ್ಯವನ್ನು ಬೇಡಿದ್ದು ಆಶ್ಚರ್ಯವೇ ಸರಿ ಎಂದು ಹೇಳುತ್ತಲೇ ಎಷ್ಟೇ ದೊಡ್ಡ ಕಾರ್ಯ ಮಾಡಿದರೂ ಸಹ ಅದಕ್ಕೆ ಪ್ರತ್ಯುಪಕಾರವನ್ನು ಪಡೆಯಬಾರದೆನ್ನುವ ಸಂದೇಶವನ್ನೂ ತೋರಿಕೊಡುತ್ತಾರೆ ಮೊದಲ ನುಡಿಯಲ್ಲಿ
ಕ್ಷಣದೊಳು ಸಂಜೀವನಗಿರಿ ತಂದಾಗ
ಹಣ ಹೊನ್ನು ಬೇಡಲು ಕೊಡದಿಹನೆ
ವಿನಯದ ವಿಭೀಷಣಗೆ ರಾಜ್ಯವಿತ್ತ-
ವನೀಗೇನಾಶ್ಚರ್ಯವೊ ಹನುಮ ನೀನೊಲ್ಲದೆ
ತನ್ನ ಪ್ರೀತಿಯ ತಮ್ಮ ಮೂರ್ಛಿತನಾದಾಗ ಒಂದೇ ಕ್ಷಣದಲಿ ಹಾರಿ ಮೂಲಿಕೆಯನ್ನು ತಗೊಂಡು ಬಾ ಎಂದರೇ ಇಡೀ ಸಂಜೀವನ ಪರ್ವತವನ್ನೇ ತಂದು ಉಪಕಾರ ಮಾಡಿದ್ದಿ ಆ ಉಪಕಾರಕ್ಕೆ ಬದಿಲಾಗಿ ಹಣ, ಬಂಗಾರವಾದರೂ ಕೇಳಬಾರದಿತ್ತಾ ? ಅಷ್ಟು ದೊಡ್ಡ ಕಾರ್ಯ ಕ್ಷಣದಲಿ ಮಾಡಿ ನಿನ್ನ ಒಡೆಯನ ತಮ್ಮನನ್ನು ಬದುಕಿಸಿದ್ದಕ್ಕೆ ಏನಾದರೂ ಲಾಭವಿರೋದಾದರೂ ಕೇಳಬೇಕಾಗಿತ್ತಲ್ಲವೆ? ರಾವಣನನ್ನು ಕೊಂದು ಆ ಲಂಕಾ ರಾಜ್ಯಕ್ಕೆ ವಿಭೀಷಣನನ್ನು ರಾಜನನ್ನಾಗಿ ಮಾಡಿದ ಮಹಾನ್ ವೀರನಿಗೆ ನಿನಗೆ ಹಣ, ಬಂಗಾರ ಕೊಡೋಷ್ಟೂ ಶಕ್ತಿಯಿದೆ ಅಲ್ವಾ ಅದನ್ನು ಕೇಳದೇ ಬರೇ ನಿನ್ನ ಸೇವಕನಾಗಿ ಇದ್ದುಬಿಡ್ತೇನೆ ಸ್ವಾಮೀ ಅಂತ ಹೇಳಿದ್ಯಲ್ವಾ ಎಂಥಾ ಅಮಾಯಕನಿದ್ದಿಯಲ್ಲಪ್ಪಾ ನೀನು ಎಂದು ಹೇಳುತ್ತಲೇ ರಾಜ್ಯಕ್ಕಿಂತಲೂ ಹಣ, ಹೊನ್ನುಗಳಿಗಿಂತಲೂ ಪರಮಾತ್ಮನಲ್ಲಿ ಭಕ್ತಿ, ವಿಷಯಗಳಲ್ಲಿ ವಿರಕ್ತಿ ಕೇಳಿದರೇ ಮಾತ್ರ ಪರಮಾತ್ಮ ಪ್ರಸನ್ನನಾಗುತ್ತಾನೆಂದು ತೋರಿಸಿಕೊಡ್ತಿದ್ದಾರೆ.
ಸಾರ್ವಭೌಮನು ತಾನೆ ಮೆಚ್ಚಿ ಬಂದಾಗಲೆ
ಉರ್ವಿಯ ಬೇಡಲು ಕೊಡದಿಹನೆ
ಸರ್ವವ ತೊರೆದು ಶ್ರೀಪುರಂದರವಿಠಲನ
ನಿರ್ವಾಜ ಭಕುತಿಯ ಬೇಡಿಕೊಂಡ್ಯಲ್ಲದೆ...
ಇಡೀ ಜಗತ್ತಿಗೆ ಒಡೆಯನು, ಚಕ್ರವರ್ತಿಯು ಆದಂತಹ ಸ್ವಾಮಿ ತಾನೇ ಮೆಚ್ಚಿ ಏನು ಬೇಕು ಎಂದು ಕೇಳಿದಾಗ ಭೂಮಿಯನ್ನಾದರೂ ಬೇಡಬೇಕಿತ್ತಲ್ವಾ? ಇಷ್ಟೊಂದು ಸಹಾಯ ಮಾಡಿದ ನಿನಗೆ ಇಡೀ ಭೂಮಿಗೇ ಅಲ್ಲದೇ ೧೪ ಲೋಕಗಳಿಗೆ ಒಡೆಯನಾದ ಶ್ರೀರಾಮಚಂದ್ರನಿಗೆ ಭೂಮಿ ಕೊಡುವುದೇನು ದೊಡ್ಡವಿಷಯವಂತೂ ಅಲ್ಲವಲ್ಲವೇ? ಸರ್ವವನ್ನೂ ತೊರೆದು - ಈ ಎಲ್ಲವನ್ನೂ ಬಿಟ್ಟು ಶ್ರೀ ಪುರಂದರವಿಠಲನಲ್ಲಿ ನಿರ್ವಾಜ ಭಕುತಿಯ - ಅರ್ಥಾತ್ ಯಾವುದೇ ಕಾಮನೆಗಳಿಲ್ಲದೆ, ಸರ್ವಾಂತರ್ಯಾಮಿಯಾದ, ತನಗೂ ಅಂತರ್ಯಾಮಿಯಾದ, ಸರ್ವಪ್ರೇರಕನಾದ, ಎಲ್ಲರ ನಿಯಾಮಕನು, ಎಲ್ಲರ ಬಿಂಬನಾಗಿರುವ ಸ್ವಾಮಿಯಲ್ಲಿ ದಾಸತ್ವವನ್ನು ಬೇಡಿದ್ದು ಪರಮಾಶ್ಚರ್ಯವಾದುದ್ದು ಎಂದು ಹೇಳುತ್ತಲೇ - ಹನುಮಂತ ದೇವರು ಸ್ವರೂಪದಿಂದಲೇ ಪರಮಾತ್ಮನ ದಾಸರು ಎನ್ನುವಂತಹ ಅದ್ಭುತವಾದ ವಿಷಯವನ್ನು ತಿಳಿಸುತ್ತಾರೆ. ಹಾಗೆ ಹೇಳುತ್ತಲೇ ಹನುಮಪ್ಪನ ಭಕ್ತರಾದ, ಆತನ ಮತದಲ್ಲಿ ಹುಟ್ಟಿ ಬಂದು ಹನುಮನ ಮನೆಯವರಾದ ನಾವೂ ಸಹ ಪರಮಾತ್ಮನಲ್ಲಿ ನಿರ್ವ್ಯಾಜ ಭಕ್ತಿಯನ್ನೇ ಬೇಡಬೇಕು ಹೊರತು ಅಶಾಶ್ವತವಾದ, ಹಣ, ಭಂಗಾರ, ಮಡದಿ, ಮಕ್ಕಳು, ಭೂಮಿ ಈ ಯಾವುದೇ ಯಾವುದೇ ಲೌಕಿಕ ಅಪೇಕ್ಷಗಳನ್ನು ಕೇಳಲೇಬಾರದು ಎನ್ನುವ ಎಚ್ಚರಿಕೆಯನ್ನೂ ಕೊಡ್ತಿದ್ದಾರೆ ಶ್ರೀಮತ್ಪುರಂದರದಾಸಾರ್ಯರು.
ನಮಗೆ ಜಡವಸ್ತುಗಳಿಂದ ಸಾಧನೆ, ಪೂಜೆ ಮಾಡಬೇಕಾದರೂ, ಸಂಧ್ಯಾವಂದನೆಗಾಗಿ ಪಾತ್ರೆಗಳ ಮೇಲೆ, ದಾನ ಮಾಡಬೇಕಾದರೆ ಹಣ ಎನ್ನುವುದರಮೇಲೆ ನೈವೇದ್ಯ ಮಾಡಬೇಕಾದರೂ ಅಕ್ಕಿ ಬೇಳೆ ಇತ್ಯಾದಿ ಜಡವಸ್ತುಗಳ ಮೇಲೆ ಆಧಾರಪಡಬೇಕಾಗುತ್ತದೆ. ಆದರೆ ಮುಖ್ಯಪ್ರಾಣದೇವರು ಋಜುಗಳು, ಲಕ್ಷ್ಮೀದೇವಿಯರನಂತರದಲಿ ಶ್ರೇಷ್ಠರಾದವರು ಅವರಿಗೆ ಈ ಜಗತ್ತಿನ ಪ್ರತಿಯೊಂದು ಪದಾರ್ಥದಲ್ಲಿಯೂ ಪರಮಾತ್ಮನ ವಿಶ್ವರೂಪಕಾಣುವಂತಹ ಸಾಮರ್ಥ್ಯವಿದೆ ಅವರಿಗೆ ಯಾವ ಅಡ್ಡಿಯೂ ಅಧಿಷ್ಟಾನವೂ ಇಲ್ಲದ ಕಾರಣ ಪರಮಾತ್ಮನನ್ನು ನೇರವಾಗಿಯೇ ಕಾಣಬಲ್ಲರು. ಜೀವರಲ್ಲಿಯೂ ಮೂಲೇಶನ ಪಾದದಡಿಯಲ್ಲಿಯೇ ಅವರ ವಾಸವೂ. ಹೀಗಾಗಿ ಕೇಳಲಿಲ್ಲ ಅಂತ ಮಾತ್ರಕ್ಕೆ ಸ್ವಾಮಿ ಕೊಡುವುದು ಬಿಟ್ಟಿದ್ದನಾ ಅಂದರೆ ಅದೂ ಸಹ ಇಲ್ಲ. ಸೇವೆ ಮಾಡಿದ ಮಾತ್ರಕ್ಕೆ ಬ್ರಹ್ಮ ಪದವಿಯನ್ನು ನೀಡಿದ ಪರಮಾತ್ಮನನ್ನು ಬೇಡುವ ಆವಶ್ಯಕತೆಯೇ ಪ್ರಾಣದೇವರಿಗೂ ಬರಲಿಲ್ಲ. ಕೊನೆಯ ನುಡಿಯಲ್ಲಿ ಹೇಳಿದಂತೆ ನಿರ್ವ್ಯಾಜ ಭಕ್ತಿ ಇರುವ ಅರ್ಥಾತ್ ಸ್ವರೂಪದಲ್ಲಿಯೇ ಭಕ್ತಿ ಇರುವ ಮುಖ್ಯಪ್ರಾಣದೇವರಿಗೆ , ಇಡೀ ಬ್ರಹ್ಮಾಂಡಕ್ಕೆ ಒಡೆಯನನ್ನಾಗಿ ಮಾಡಿದ ಸ್ವಾಮಿಯಲ್ಲಿ ಭಕ್ತಿ ಬೇಡಿದರೆ ಸಾಕಲ್ಲವೆ? ಮೊದಲ ನುಡಿಯಲ್ಲಿ ಮದುವೆ ಮಾಡಬಾರದಿತ್ತಾ ಅನ್ನುವುದನ್ನು ನೋಡಿದಾಗ ಈಗಾಗಲೇ ಮುಖ್ಯಪ್ರಾಣದೇವರಿಗೆ ಭಾರತಿದೇವಿಯರಂತಹ ಹೆಣ್ಣನ್ನು ಕೊಟ್ಟಿದ್ದಾನೆ ಸ್ವಾಮಿ, ಬ್ರಹ್ಮಪದವಿಗೆ ಬಂದಾಗ ಸರಸ್ವತೀದೇವಿಯದನ್ನೇ ಕೊಟ್ಟಾಗ ಮತ್ತೆ ಮದುವೆಯ ವಿಷಯ ಕೇಳುವ ಆವಶ್ಯಕತೇಯಿಲ್ಲ.
ಎರಡನೆಯ ನುಡಿಯಲ್ಲಿ ಹಣ ಹೊನ್ನು ಎನ್ನುವುದನ್ನು ಬೇಡಲಿಲ್ಲ ಅಂತ ವ್ಯಂಗ್ಯ ಮಾಡಿದಾಗ, ಅದಕ್ಕಿಂತ ಹೆಚ್ಚಿನ ಜ್ಞಾನವನ್ನೇ ನೀಡಿದ್ದಾನೆ ಪರಮಾತ್ಮ .ಶ್ರೀ ವಿಜಯಪ್ರಭುಗಳು ಹೇಳಿದಂತೆ ಜ್ಞಾನಕ್ಕೆ ಅಧಿದೇವತೆಯೇ ಮುಖ್ಯಪ್ರಾಣದೇವರು ಅವರಿಗೆ ಜಡವಸ್ತುಗಳಿಂದ ಯಾವ ಪ್ರಯೋಜನವೂ ಆಗಬೇಕಿಲ್ಲ.
ಮೂರನೆಯ ನುಡಿಯಿಂದ
ಶ್ರೀಮದಾಚಾರ್ಯರು ಶ್ರೀಅಣುಭಾಷ್ಯದಲ್ಲಿ ಮುಖ್ಯಪ್ರಾಣ ವಶೇ ಸರ್ವಂ ಸ ವಿಷ್ಣೋರ್ವಶಗಃ ಸದಾ ಎಂದು ತಿಳಿಸಿದಂತೆ ಮುಖ್ಯಪ್ರಾಣದೇವರ ವಶದಲ್ಲಿಯೇ ಸದಾ ಇಡೀ ಜಗತ್ತಿದೆ. ಅಂತಹ ಮುಖ್ಯಪ್ರಾಣದೇವರಿಂದೊಡಗೂಡಿದ ಎಲ್ಲವೂ ಸಹ ಸದಾ ವಿಷ್ಣುವಿಗೆ ವಶ ಎನ್ನುವುದು ಸಿದ್ಧವಾದ ಮಾತು.
ಅವರಿಗೆ ಬೇರೆ ರಾಜ್ಯಗಳ ಆವಶ್ಯಕತೆಯೂ ಇಲ್ಲ ಅನ್ನೋದು ಸೂಕ್ಷ್ಮ. ಒಟ್ಟಿನಲ್ಲಿ ನಿರರ್ಥಕ ವಿಷಯಗಳಿಗಿಂತಲೂ ಸರ್ವೋತ್ತಮವಾದ ಭಕ್ತಿ. ವೈರಾಗ್ಯಗಳು ಮಾತ್ರ ಭಗವಂತನಲ್ಲಿ ಸದಾ ಬೇಡಬೇಕು. ಅವು ಮುಖ್ಯಪ್ರಾಣದೇವರ ಸ್ವರೂಪದಲ್ಲಿಯೇ ಇದೆ ಅಂತಾರೆ, ಹಾಗೆಯೇ ತಾಯಿ ಲಕ್ಷ್ಮೀದೇವಿಯರ ನಂತರದಲ್ಲಿ, ಶ್ರೀಮುಖ್ಯಪ್ರಾಣದೇವರು ಮಾತ್ರ ಪರಮಾತ್ಮನ ದಾಸರಲ್ಲಿ ಆದ್ಯರು ಎನ್ನುವ ವಿಷಯವನ್ನು ದಾಸೋಹಂ ಕೋಸಲೇಂದ್ರಸ್ಯ ಎನ್ನುವ ಮಾತನ್ನೇ ಇಲ್ಲಿ ನಿರೂಪಣೆ ಮಾಡಿದ್ದಾರೆ ಶ್ರೀಮತ್ಪುರಂದರದಾಸಾರ್ಯರು.....
ಭಕ್ತಿ ನಿರ್ವ್ಯಾಜವಾಗಬೇಕೆಂದರೇ ಮನಸ್ಸು ನಿಶ್ಚಲವಾಗಿರಬೇಕು ಮನೋಭಿಮಾನಿಗಳ ಅನುಗ್ರಹವಿರಲೇಬೇಕು. ಆ ಮನೋ ನಿಯಾಮಕರಾದ ರುದ್ರದೇವರಲ್ಲಿ ಶರಣುಹೋದಾಗ ಮಾತ್ರ ನಮಗೆ ಮನಸು ಪರಮಾತ್ಮನ ಪಾದದೆಡೆ ಒಂದು ಕ್ಷಣವಾದರೂ ನಿಲ್ಲಿಸಲು ಸಾಧ್ಯ. ಪಾರ್ವತೀಪತಿ ರುದ್ರದೇವರು, ಭಾರತೀಪತಿ ಶ್ರೀ ಮುಖ್ಯಪ್ರಾಣದೇವರು ಇಬ್ಬರ ಅಂತರ್ಯಾಮಿಯಾದ ಶ್ರೀರಾಮಚಂದ್ರದೇವರು ನಮಗೆ ಸಾಧನೆಯ ಸ್ವಚ್ಛ ಹಾದಿಯನ್ನು ದಯಪಾಲಿಸಲಿ ಎಂದು ಭಕ್ತಿಯಿಂದ ಬೇಡಿಕೊಳ್ಳುತ್ತಾ....
ಜೈ ವಿಜಯರಾಯ
Smt. Padma Sirish
ನಾದನೀರಾಜನದಿಂ ದಾಸಸುರಭಿ
****
No comments:
Post a Comment