Tuesday, 15 October 2019

ನೋಡಿ ಮರುಳಾಗದಿರು ಪರಸತಿಯರ ankita neleyadikeshava

ನೋಡಿ ಮರುಳಾಗದಿರು ಪರಸತಿಯರ || ಪಲ್ಲವಿ ||
ನಾಡೊಳಗೆ ಕೆಟ್ಟವರ ಪರಿಯ ನೀನರಿತು || ಅನುಪಲ್ಲವಿ ||

ಶತ ಮಖವನೆ ಮಾಡಿ ಸುರಸಭೆಗೈದ ನಹುಷ ತಾ
ಆತುರದಿ ಶಚಿಗೆ ಮನಸೋತು ಭ್ರಮಿಸಿ
ಅತಿ ಬೇಗ ಚಲಿಸಂದು ಬೆಸಸಲಾ ಮುನಿಯಿಂದ
ಗತಿಗೆಟ್ಟು ಉರಗನಾಗಿದ್ದ ಪರಿಯ ನೀನರಿತು || ೧ ||

ಸುರಪತಿಯು ಗೌತಮನ ಸತಿಗಾಗಿ ಕಪಟದಿಂ
ಧರೆಗೆ ಮಾಯವೇಷ ಧರಿಸಿ ಬಂದು
ಪರಮ ಮುನಿಶಾಪದಿಂ ಅಂಗದೊಳು ಸಾ
ವಿರ ಕಣ್ಣಾಗಿ ಇದ್ದ ಪರಿಯ ನೀನರಿತು || ೨ ||

ಸ್ಮರನ ಶರತಾಪವನು ಪರಿಹರಿಸಲರಿಯದಲೆ
ದುರುಳ ಕೀಚಕನು ದ್ರೌಪದಿಯ ಕೆಣಕಿ
ಮರುತಸುತ ಭೀಮನಿಂದಿರುಳೊಳಗೆ ಹತನಾದ
ನರಕುರಿಯೆ ನಿನ್ನ ಪಾಡೇನು ಧರೆಯೊಳಗೆ || ೩ ||

ಹರನ ವರವನು ಪಡೆದು ಶರಧಿಮಧ್ಯದೊಳಿದ್ದು
ದುರುಳ ದಶಶಿರನು ಜಾನಕಿಯನೊಯ್ಯೆ
ಧುರದೊಳಗೆ ರಘುವರನ ಶರದಿಂದ ಈರೈದು
ಶಿರಗಳನೆ ಹೋಗಾಡಿಸಿಕೊಂಡ ಪರಿಯ ನೀನರಿತು || ೩ ||

ಇಂಥಿಂಥವರು ಕೆಟ್ಟು ಹೋದವರೆಂಬುದನರಿತು
ಭ್ರಾಂತಿಯನೆ ಬಿಟ್ಟು ಭಯಭಕ್ತಿಯಿಂದ
ಅಂತರಾತ್ಮಕ ಕಾಗಿನೆಲೆಯಾದಿ ಕೇಶವನ ನಿ
ರುತವು ನೀ ಭಜಿಸಿ ಸುಖಿಯಾಗೊ ಮನುಜ || ೪ ||
******

No comments:

Post a Comment