Saturday, 11 December 2021

ಕರಿಸೋ ಧಿಕ್ಕರಿಸೋ ಆದರಿಸೋ ಹೇಗಾದರೂ ಬರುವೆ ankita venugopala vittala KARISO DHIKKARISO AADARISO HEGAADAROO BARUVE



ಶ್ರೀ ಪಂಗನಾಮ ತಿಮ್ಮಣ್ಣದಾಸರ ಕೃತಿ 
 (ವೇಣುಗೋಪಾಲವಿಠ್ಠಲ ಅಂಕಿತ) 

ಕರಿಸೋ ಧಿಕ್ಕರಿಸೋ ಆದರಿಸೋ 
ಹೇಗಾದರೂ ಬರುವೆ , ನಿನ್ನಡಿಗೆ ನಾ ಬರುವೆ ॥ ಪ ॥

ತಿರುಮಲೇಶನೆ ನಿನ್ನ ಪದ ಸಂ -
ದರುಶನವು ಇಲ್ಲದಲೆ ಇಂದಿಗೆ
ವರುಷ ಸಂಪೂರ್ತಾಯ್ತು ಮನ ಎ -
ದ್ಹರಿದರಿದು ನಿನಗೆರಗುತಿದೆ ಶಿರ ॥ ಅ ಪ ॥

ಪಿಡಿದು ತಾಳಗಳ ತಮ್ಮಡಿಗಳೊಳಗೆ ಗೆಜ್ಜೆಕಟ್ಟಿ
ಗೆಜ್ಜೆಕಟ್ಟಿ ಆರ್ಭಟಿಸಿ ಮನಮುಟ್ಟಿ ॥
ಜಡೆಗರೆಯೆ ಸುಖಭಾಷ್ಫ ಪುಂಖಸ
ಒಡಲಗಂಟಲ ಬಿಗಿದು ಮೃದು ತೊದ -
ಲ್ನುಡಿಗಳನು ನುಡಿಸುವರ ಕಾಣದೆ
ಒಡಹುತಿದೆ ಎನ್ನ ಕಂಗಳೀ ಕೊನೆ ॥ 1 ॥

ದುರ್ವಾದಿಗಳು ನಿನ್ನ ಸರ್ವೋತ್ತಮತವ ಧಿಕ್ಕರಿಸಿ
ಧಿಕ್ಕರಿಸಿ ದುರ್ಮತವ ಕಿಕ್ಕರಿಸಿ ॥
ಹರಿಯೆ ನೀ ಸರ್ವೋತ್ತಮನು ಎಂ -
ದರಿತು ಡಂಗುರ ಹೊಯ್ಸಿ ಸಾರುವ
ಪರಮ ಭಾಗವತರಂಘ್ರಿ ಪಾಂಸಕೆ
ತೊರಬಡುತಲಿದೆ ಎನ್ನ ಈ ಮನ ॥ 2 ॥

ಬಗೆಬಗೆ ರತುನಗಳ್ ಬಿಗಿದ ವಾಹನಗಳನೇರಿ
ರಥವೇರಿ ಊದಿಸಲು ತುತ್ತೂರಿ ॥
ಹಗಲು ಪಂಜಿನ ಬೆಳಕಿನಲಿ 
ಝಗಝಗಿಪ ಹಾರಾವಳಿಯ ಬಿಳಿ ಛ -
ತ್ರಿಗಳ ನೆರಳಲಿ ಬರುವ ಚೆಲುವ ಚೆ -
ನ್ನಿಗನೆ ವೇಣುಗೋಪಾಲವಿಠ್ಠಲ ॥ 3 ॥
****

 ರಾಗ ಸಿಂಧುಭೈರವಿ    ಖಂಡಛಾಪುತಾಳ (raga, taala may differ in audio)

No comments:

Post a Comment