ankita ತಿರುಮಲೇಶಹರಿವಿಠಲ
ಶ್ರೀಶ ಮುಖ್ಯಪ್ರಾಣಪತಿ ಪದ ದ್ವಂದ್ವ ಪದ್ಮಾರಾಧಕ
ದೋಷವೆಣಿಸದೆ ವಾಸುದೇವನ ದಾಸವೃಂದದ ಪೋಷಕ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 1
ಹೀನ ಮಾನವ ನಾನು ನಿಮ್ಮಯ ಧ್ಯಾನ ಮಾಡದೆ ಬಳಲಿದೆ
ನಾನು ನನ್ನದು ಎಂಬ ವರ್ತುಲದಲ್ಲಿ ಸುತ್ತುತ ತೊಳಲಿದೆ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 2
ಸ್ನಾನ ಸಂಧ್ಯಾ ಜಪವ ತೊರೆದು ನಿಂದ್ಯ ಕರ್ಮವ ಮಾಡಿದೆ
ಮಾನವಂತರ ಮನವ ನೋಯಿಸಿ ಮಂದ ಜನರನು ಕೂಡಿದೆ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 3
ಘನವನರಿಯದೆ ಪರರ ಮಾನಿನಿ ಸಂಗ ಸುಖವನು ಬಯಸಿದೆ
ತನುವ ಭರಿಸಲು ಎಂಜಲೆನ್ನದೆ ಶ್ವಾನನಂದದಿ ಚರಿಸಿದೆ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 4
ಮಧ್ವಶಾಸ್ತ್ರದ ಶುದ್ಧ ಜ್ಞಾನದ ಗಂಧ ಗಾಳಿಯನರಿಯದೆ
ಬದ್ಧ ಜನರನು ದೇವರೆನ್ನುತ ಅಪದ್ಧ ವಾದವ ಮಾಡಿದೆ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 5
ವೇದಶಾಸ್ತ್ರವ ತುಚ್ಛೀಕರಿಸುತ ಶ್ರೀಶನಾಜ್ಞೆಯ ಮೀರಿದೆ
ವೇದವೇದ್ಯನ ದಿನದಿ ಬಯಸುತ ಉದರ ಪೋಷಣೆ ಮಾಡಿದೆ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 6
ಹರಿಯ ಚರಿತೆಯು ಕಿವಿಗೆ ಬೀಳಲು ಬಧಿರನಂತೆ ನಟಿಸಿದೆ
ಹರಿಯ ದಾಸರು ಬಂದು ಕರೆಯಲು ಕುಂಟು ನೆಪವನು ಪೇಳಿದೆ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 7
ಶರಣಜನ ಸಂರಕ್ಷಕ ನಿಮ್ಮ ಚರಣ ಪಿಡಿದಿಹೆ ರಕ್ಷಿಸಿ
ತಿರುಮಲೇಶಹರಿವಿಠಲರಾಯನ ಪಾದ ಪಂಕಜ ತೋರಿಸಿ
ರಾಘವೇಂದ್ರರೆ ನಿಮ್ಮ ನಂಬಿದ ಕಿಂಕರನ ಮಾತ ಲಾಲಿಸಿ
ರಾಘವೇಂದ್ರರೆ ನಿಮ್ಮ ಕರುಣಾವೃಷ್ಟಿ ಹರಿಸುತ ಪಾಲಿಸಿ 8
***
No comments:
Post a Comment