Sunday, 1 August 2021

ಅಂದು ಇಂದು ಎಂದೆಂದಿಗೂ ಗೋವಿಂದನೆ ಗತಿ ನಮಗೆಂದು shreeda vittala ankita suladi ಸುಳಾದಿ

 ..

kruti by Srida Vittala Dasaru  Karjagi Dasappa

ಹರಿಯ ಸ್ತುತಿ

(ಸುಳಾದಿ)


ಧ್ರುವತಾಳ

ಅಂದು ಇಂದು ಎಂದೆಂದಿಗೂ ಗೋ-

ವಿಂದನೆ ಗತಿ ನಮಗೆಂದು

ಇಂದಿರೇಶ ವಿಧಿವಂದ್ಯ ನಮೋ ನತಬಂಧು

ಎಂದರಾನಂದವೀವ ನಮಗೆಂದೂ

ಬಂದ ಬಂದ ಭಯ ವೃಂದಗಳೋಡಿಸಿ

ಹಿಂದು ಮುಂದು ಎಡಬಲದೊಳಗಿಹ ನಿ -

ದ್ರ್ವಂದ್ವನ ದಯಕೇನೆಂಬೆ ಮು -

ಕುಂದನ ಮೊರೆಹೋಗದಿರಲು ಭವ

ಬಂಧನ ಬಿಡಿಸುವರಾರಿಳೆಯೊಳು

ನಂದನಂದನ ಶ್ರೀದವಿಠಲನ

ಪೊಂದಿ ನೋಡು ಸುಖಸಾಂದ್ರನ ಹೇ ನಮಗೆಂದು1


ಮಟ್ಟತಾಳ

ಪಾಪಪುರುಷ ನಮ್ಮ ಸಮೀಪಕೆ ಬರಲ್ಯಾಕೆ

ಪಾಪಪಂಕವನು ಲೇಪಿಸಿಕೊಳಲ್ಯಾಕೆ

ಪಾಪಿಮನವೆ ಲಕ್ಷ್ಮೀಪತಿಯ ವ್ಯಾಪಾರವ ನೋಡು

ಪಾಪಗಳೀಡ್ಯಾಡು ರೂಪವೆ ಅಣುಮಹ -

ದ್ರೂಪವೆ ಗುಣ ನಾಮರೂಪವೇ ಸತ್‍ಚಿತ್ಸುಖ

ರೂಪಾತ್ಮಕ ನಿತ್ಯ ಆಪನ್ನಪಾಲ ಶ್ರೀದವಿಠಲ ತ್ರಿಜಗ -

ದ್ವ್ಯಾಪಕ ಸರ್ವ ಪ್ರಾಪಕನ ನೆರೆ ನಂಬು 2


ಝಂಪೆತಾಳ

ನವನೀಲನೀರದ ಶಾಮಸುಂದರನ

ಸವಿನೋಟ ಕೂಟ ಬ್ಯಾಟದಿ ಗೋಪಲಲನ

ನಿವಹ ತನ್ಮಯವಾಯ್ತು ನೀನಾದರವನ

ವ್ಯವಹಾರವನುಸುರಿಸುವರೆ ರಮಾಧವನ

ನವವಿಧಭಕುತಿ ಭಾಗ್ಯವ ಪಡಿಯೋ ಪಡೆದಪರೆ

ಶ್ರವಣಮಂಗಳ ಭಾಗವತ ಕೇಳು ಕೇಳುವರೆ

ಕವಿಜನರ ಕರುಣಕ್ಕೀಡಾಗು ಈಡಾಗುವರೆ

ಭುವನದೊಳಗುಳ್ಳ ಪುಣ್ಯತೀರ್ಥಕ್ಷೇತ್ರ

ಅವನಾದರು ಮಾಡು ಪವನಾಂತರಾತ್ಮ

ಶ್ರೀದವಿಠಲ ನಿನ್ನ ಸಾಕುವನು ನಿತ್ಯ ಕೃತಕೃತ್ಯ 3


ಅಟ್ಟತಾಳÀ

ನಾನ್ಯಾಕವನನುಸರಿಸುವೆನೆಂಬಿಯಾ

ನೀ ಬಿಟ್ಟರೆ ಬಿಡಲರಿಯನು ಕೇಳು

ತಾನೆ ತನ್ನರ್ಚನೆಗೊಂಬ ಬಿಂಬ ಮ -

ಹಾನುಭಾವರೆಲ್ಲರು ಬಲ್ಲರು ಕೇಳು

ದೀನನಾಥ ನಮ್ಮ ಶ್ರೀದವಿಠಲನಿ -

ಗೇನೆಂದೆನವನ ಕಾರುಣ್ಯಕೆ ನಮೋ ನಮೋ 4


ಆದಿತಾಳ

ಅಂತು ಇಂತು ಈ ಕಲಿಕಾಲದೊಳು

ಸೆಂತರ ಬೀಳದೆ ಬಹು ಕಾಲಾ

ಸಂತೈಸುವ ಸಂತರ ಕಾಲವ ಪಿಡಿ

ಅಂತಕನವರಿಗೆ ನೀ ಪಾಲಾ

ಎಂತಾಗುವಿಯೊ ಆಂತ್ವರದೆ ಬಿಡು

ಭ್ರಾಂತಿಯ ಇನ್ನಾದರು ಬರಿದೆ

ಚಿಂತಿಸದಿರು ತನು ಮನ ಧನ ವನಿತೆಯ -

ರಂತರಿಸುವರಲ್ಲದೆ ನಿನಗೇನು

ಸ್ವತಂತ್ರವಿಲ್ಲ ನಿಜಮಂತ್ರವಿದೆ ಮಾ-

ಹಂತರೊಡೆಯ ಭಗವಂತನ ಮರೆಯದೆ

ಚಿಂತಿಸು ಚಿತ್ಸುಖಮಯನ ನೀ ಚಿಂತಿಸು5


ಜತೆ

ಆತ್ಮಾಂತರಾತ್ಮ ಸರ್ವಾತ್ಮನ ಬಿಡದೆ ಮ -

ಹಾತ್ಮರೊಡೆಯ ಶ್ರೀದವಿಠಲಾತ್ಮನ ನೆರೆನಂಬೋ

***


No comments:

Post a Comment