Saturday, 1 May 2021

ಸಂಜೀವರಾಯ ನಿನ್ನಂಘ್ರಿಯುಗ್ಮವ ತೋರೋ ankita venkatanatha

" ಶ್ರೀ ಹನುಮಂತ ದೇವರ ಜನುಮದಿನ  ಶುಭಾಶಯಗಳು " 

" ಶ್ರೀ ಮುಖ್ಯಪ್ರಾಣ ಒಂದು ಚಿಂತನೆ  "

ರಚನೆ : ಆಚಾರ್ಯ ನಾಗರಾಜು ಹಾವೇರಿ 


ಸಂಜೀವರಾಯ ನಿನ್ನಂಘ್ರಿ -

ಯುಗ್ಮವ ತೋರೋ ।

ಅಂಜನೀ ಕಂದ ಹನು-

ಮಂತರಾಯಾ ।। ಪಲ್ಲವಿ ।।


ಅಂಚಿಗಮನನೇ 

ಬ್ರಹ್ಮ ಪದಾರ್ಹನೇ ।

ಅಂಚಿವಾಹನನೇ ಸಲಹೋ 

ಕುಂತೀ ಸುತಾ ।। ಚರಣ ।।


ಮಧ್ಯಾಲಯಜ ಮಧ್ಯ-

ಸಿಂಧೂರವದನ ಪ್ರಿಯಾ ।

ಸೂತ್ರನಾಮಕ ಸೂತ್ರ -

ನೀನೇ ಜೀವರಿಗೆಲ್ಲಾ ।। ಚರಣ ।।


ವೇದವ್ಯಾಸ ವೇಂಕಟನಾಥನ ಸುತನೇ ।

ಮುದತೀರ್ಥರೆಂದು ಖ್ಯಾತಿಯ -

ಪಡೆದೋ ಜಗದೊಳು ।। ಚರಣ ।। 

****


" ವಿವರಣೆ "

ಸಂಜೀವ = ಪ್ರಾಣದಾತ 

ಸಂಜೀವರಾಯ = ಶ್ರೀ ಆಂಜನೇಯ ದೇವರು 

ಅಂಚಿಗಮನ = ಶ್ರೀ ವಾಯುದೇವರು 

ಅಂಚಿವಾಹನ = ಹಂಸವಾಹನ 

" ಮಧ್ಯಾಲಯಜ "

ಶ್ರೀ ಮಧ್ಯಗೇಹ ಭಟ್ಟರ ಪುತ್ರರಾದ.....

" ವಿಶ್ವಗುರು ಶ್ರೀಮನ್ಮಧ್ವಾಚಾರ್ಯರು "

ಸೂತ್ರ = ಶ್ವಾಸ 

ಲೋಕ ಕಂಟಕರಾದ ರವಾಣಾದಿ ರಾಕ್ಷಸರ ಸಂಹಾರಕ್ಕಾಗಿ ಅವತರಿಸಿದ ಸೀತಾಪತಿ ಶ್ರೀ ರಾಮಚಂದ್ರದೇವರ ಸುತ್ತಮುತ್ತಲೂ ಇದ್ದು ಅಮೋಘ ರೀತಿಯಿಂದ - ಜ್ಞಾನಪೂರ್ಣರಾದ ಅಂತೆಯೇ ಶ್ರೀ ಹನುಮಂತದೇವರೆಂದು ಪ್ರಖ್ಯಾತರಾಗಿ ಸೇವೆ ಮಾಡಿದರು. 

ಕಂಸ ಶಿಶುಪಾಲಾದಿ ದೈತ್ಯರನ್ನು ಸಂಹರಿಸಿ ಭೂಭಾರ ಹರಣಕ್ಕಾಗಿ ಮತ್ತು ಶಿಷ್ಟ ರಕ್ಷಣ ಪೂರ್ವಕ ಧರ್ಮ ಸಂಸ್ಥಾಪನೆಗಾಗಿ ಅವತರಿಸಿದ ಶ್ರೀ ಕೃಷ್ಣನನ್ನು - ಯುದ್ಧಾದಿ ಅನಿತರ ಸಾಧಾರಣ ಭಯಂಕರ ಕೃತಿಗಳಿಂದ ಶ್ರೀ ಭೀಮಸೇನ ರೂಪದಿಂದ ಸಂತೋಷಗೊಳಿಸಿದರು. 

ಮಧುನಾಮಕ ದೈತ್ಯನಿಗೆ ಶತ್ರುವಾದ ಶ್ರೀ ವೇದಾವ್ಯಾಸೋsಭಿನ್ನ ಶ್ರೀ ಹರಿಯ ಸತ್ತತ್ತ್ವ ಪ್ರಸಾರದಲ್ಲಿ ನಾಯಕರಾದ -

ಅಂದರೆ..... 

ಶ್ರೀ ಮನ್ವೇದವ್ಯಾಸ ಪ್ರಣೀತ ಬ್ರಹ್ಮಮೀಮಾಂಸಾ ಶಾಸ್ತ್ರಕ್ಕೆ ಹಾಗೂ ಅವರಿಗೆ ಸಮ್ಮತವಾದ ಭಾಷ್ಯಗಳನ್ನು ರಚಿಸಿ ಅವರ ಅಪ್ಪಣೆಯಂತೆ ಆ ಬ್ರಹ್ಮ ಮೀಮಾಂಸಾ ಶಾಸ್ತ್ರದ ಪ್ರಸಾರ ಕಾರ್ಯದ ನಾಯಕರಾದ - ಆನಂದಪ್ರದ ಶಾಸ್ತ್ರ ಪ್ರವರ್ತಕರಾದ್ದರಿಂದ " ಶ್ರೀಮನ್ಮಧ್ವಾಚಾರ್ಯ " ರೆಂಬ ಅನ್ವರ್ಥಕ ನಾಮದಿಂದ ಸೇವಿಸಿದ - ಮಂಗಳಕರ ಮತಿಗಳಾದ ವೇದಾಭಿಮಾನಿನಿಯಾದ ಶ್ರೀ ಭಾರತೀದೇವಿಯರ ಪತಿಗಳೇ ಶ್ರೀ ವಾಯುದೇವರು. 

ಸ್ವಾಮೀ! 

ನೀವು ಪುಂಡರೀಕಾಕ್ಷನೂ - ಸುರಪಕ್ಷಪಾತಿಯೂ - ಪರಮ ಪುರುಷೋತ್ತಮನಾದ ಶ್ರೀ ವಾಸುದೇವನ ಕುಡಿನೋಟದಿಂದ ಸಾಕ್ಷಾತ್ಕರಿಸಿಕೊಂಡ ಸಕಲ ಪುರುಷಾರ್ಥವುಳ್ಳವರೂ - ಯಾವಾಗಲೂ ನೀವು ಮುಕ್ತಿಯೋಗ್ಯ ಸಜ್ಜನರ ಹಿತವನ್ನು ಬಯಸಿ ಅವರಿಗೆ ಬೆಮ್ಬಳರಾಗಿದ್ದೀರಿ. 

" ವಿಷ್ಣುರ್ಹಿ ದಾತಾ ಮೊಕ್ಷಸ್ಯ 

ವಾಯುಸ್ತು ತದನುಜ್ಞಯಾ "

ಎಂಬ ಪ್ರಮಾಣ ಭಾವ ಇಲ್ಲಿ ಸೂಚಿತವಾಗಿದೆ. 

ದಕ್ಷ ಪ್ರಜಾಪತಿಯ ಗರ್ವಹರಣ ನಿಪುಣರಾದ - ವಿಷಮಾಕ್ಷರಾದ ಶ್ರೀ ರುದ್ರದೇವರನ್ನು ಸಂರಕ್ಷಿಸಿದ ಮಹಾನುಭಾವರು ನೀವು ( ಶ್ರೀ ವಾಯುದೇವರು ). 

ಇಲ್ಲಿ.. 

" ವಾಯುರಸ್ಮಾಉಪಾಮಂಥತ್ಬಿನಿಷ್ಟಸ್ಮಾಕುನನ್ನಾಮ ಕೇಶಿ ವಿಷಸ್ಯ ಮಾತ್ರೇಣ ಯದ್ರುದ್ರೇಣಪಿಬತ್ಸಹ " 

ಎಂಬ ಶ್ರುತಿ ಪ್ರತಿಪಾದ್ಯವಾದ ಮಹಿಮೆ ಸೂಚಿತವಾಗಿದೆ. 

ಅಂದರೆ......

ಅಮೃತ ಮಥನ ಕಾಲದಲ್ಲಿ ಕಾಲಕೂಟ ವಿಷವು ಉದಯಿಸಿದಾಗ ಅದರ ತಾಪ - ಕಷ್ಟಗಳನ್ನು ಸಹಿಸಲಾಗದೇ ದೇವತೆಗಳು ತಲ್ಲಣಿಸುತ್ತಿದ್ದಾಗ ನೀವೇ ( ಶ್ರೀ ವಾಯುದೇವರೇ ) ಆ ಕಾಲಕೂಟ ವಿಷವನ್ನು ಪಾನ ಮಾಡಿ - ಉಳಿದ ಸ್ವಲ್ಪ ಭಾಗವನ್ನು ಕರದಿಂದ ಮಥಿಸಿ - ಅದರ ತೀವ್ರತೆಯನ್ನು ನಿವಾರಿಸಿ ಶ್ರೀ ರುದ್ರದೇವರಿಗೆ ಕೀರ್ತಿ ಬರಲೋಸುಗ ಅವರಿಗೆ ಅದನ್ನು ಕೊಟ್ಟು - ಶ್ರೀ ರುದ್ರದೇವರನ್ನು ಸಂರಕ್ಷಿಸಿದಿರಿ ಎಂದು ಶ್ರುತಿಯು ಸ್ತೋತ್ರ ಮಾಡಿರುವ ವಿಚಾರವು ಇಲ್ಲಿ ಸೂಚಿತವಾಗಿದೆ. 

ಇಂತು ಮಹಾ ಮಹಿಮೋಪೇತರಾದ ಶ್ರೀ ಪವಮಾನರೇ! 

ಸೃಷ್ಟಿ ಕಾಲದಲ್ಲಿ ಶ್ರೀ ಮಹಾಲಕ್ಷ್ಮೀ ಪತಿಯಾದ ಶ್ರೀಮನ್ನಾರಾಯಣನು ಮೊದಲು ನಿಮ್ಮನ್ನು ಸೃಜಿಸಿದನು. 

ಆದ್ದರಿಂದಲೇ ನೀವು.....

" ಜಗತ್ತ್ರಾಣೋ ಜ್ಯೇಷ್ಠಪುತ್ರಃ " 

ಅಂದರೆ.......

ಶ್ರೀ ಹರಿಯ ಜ್ಯೇಷ್ಠ ಪುತ್ರರೆಂದು ಸರ್ವರಿಂದಲೂ ವಂದ್ಯರಾಗಿದ್ದೀರಿ. 

ಅಂಥಾ ಮಹಾ ಮಹಿಮರಾದವರೇ ಶ್ರೀ ಪಾವನ ಪವಮಾನರು! 

" ಸರ್ವ ಗುಣ ಭರಿತರು " 

ಶ್ರೀ ವಾಯುದೇವರು ಹನುಮ - ಭೀಮ - ಮಧ್ವಾವತಾರಗಳಲ್ಲೂ ಸಕಲ ಗುಣ ಭರಿತರು ಎಂಬುದನ್ನು ಈ ಕೆಳಗಿನ " ಮಹಾಭಾರತ ತಾತ್ಪರ್ಯ ನಿರ್ಣಯದ 2 / 149, 158, 159 ಶ್ಲೋಕ " ಗಳನ್ನು ಅವಲೋಕಿಸಿದರೆ ತಿಳಿಯುತ್ತದೆ. 

ಜ್ಞಾನೇ ವಿರಾಗೇ ಹರಿಭಕ್ತಿಭಾವೇ 

ಧೃತಿಸ್ಥಿತಿ ಪ್ರಾಣಬಲೇಷು ಯೋಗೇ ।

ಬುದ್ಧೌ ಚ ನಾನ್ಯೋ ಹನುಮತ್ಸಮಾನಃ 

ಪುಮಾನ್ ಕದಾಚಿತ್ ಕ್ವಚ ಕಶ್ಚನೈವ ।। 

ತತ್ತ್ವಜ್ಞಾನ ವಿಷ್ಣುಭಕ್ತೌ ಸ್ಥೈರ್ಯೇ 

ಧೈರ್ಯೇ ಪರಾಕ್ರಮೇ ।

ವೇಗೇ ಚ ಲಾಘವೇ ಚೈವ 

ಪ್ರಲಾಪಸ್ಯ ಚ ವರ್ಜನೆ ।। 

ಭೀಮಸೇನ ಸಮೋ ನಾಸ್ತಿ 

ಸೇನಯೋರುಭಯೋರಪಿ ।

ಪಾಂಡಿತ್ಯೇ ಚ ಪಟುತ್ವೇ ಚ 

ಶೂರತ್ವೇsಪಿ ಬಲೇsಪಿ ಚ ।। 

" ಹನುಮಾನ್ ಶಬ್ದಾರ್ಥ " 

ಮತ್ಕರೋತ್ಸೃಷ್ಟವ್ರಜೇಣ 

ಹನುರಸ್ಯ ಯಥಾsಹತಃ ।

ನಾಮ್ನಾ ವೈ ಕಪಿಶಾರ್ದೂಲೋ 

ಭವಿತಾ ಹನುಮಾನಿತಿ ।। 

" ಹನುಮಂತ " 

ಎಂಬ ಹೆಸರನ್ನು ಇನ್ನೊಂದು ರೀತಿಯಿಂದ ನೋಡಬಹುದು. 

ಹನುಮಾನ್ ಶಬ್ದಕ್ಕೆ....

" ಹನುರಸ್ಯ ಅಸ್ತೀತಿ ಹನುಮಾನ್ " 

ಎಂದು ವಿಗ್ರಹ. 

" ಹನು " ಎಂಬುದಕ್ಕೆ.....

" ಹನ್ ಹಿಂಸಾಗತ್ಯೋಃ " ಎಂಬ ಧಾತು ಪಾಠದಂತೆ. 

" ಗತಿ " ಎಂದೂ......

" ಹನುಮಾನ್ " ಎಂದರೆ " ಗತಿಮಾನ್ " ಎಂದರ್ಥ. 

" ಗತಿ " ಎಂದರೆ " ಜ್ಞಾನ. 

" ಯೇ ಗತ್ಯರ್ಥಕಾಃ ತೇ ಜ್ಞಾನಾರ್ಥಕಾಃ " 

ಆದ್ದರಿಂದ " ಹನುಮಾನ್ " ಎಂದರೆ " ಜ್ಞಾನವನ್ " ಎಂದರ್ಥ. 

ಜ್ಞಾನ ಎಂಬುದು ವಿಷ್ಣು ಭಕ್ತ್ಯಾದಿ ಇತರ ಸರ್ವ ಗುಣಗಳಿಗೂ ಉಪಲಕ್ಷಕ. 

ಆದುದರಿಂದ " ಹನುಮಾನ್ " ಎಂಬುದಕ್ಕೆ " ಜ್ಞಾನಾದಿ ಸರ್ವ ಗುಣವಾನ್ " ಎಂದೇ ಅರ್ಥ. 

ಈ ವಿಷಯವನ್ನು " ಐತರೇಯೋಪನಿಷದ್ಭಾಷ್ಯ " ದಲ್ಲಿ.. 

" ಹನು ಶಬ್ದೋ ಜ್ಞಾನವಾಚೀ 

ಹನುಮಾನ್ ಮತಿಶಬ್ದಿತಃ " 

" ಪ್ರಾಣ ಶಬ್ದಾರ್ಥ " 

" ಪ್ರಾಣ " ಎಂದರೆ......

ಸಕಲೇಂದ್ರಿಯಗಳ ಚಟುವಟಿಕೆಗಳನ್ನೂ ನಡೆಸಲು ಪ್ರೇರೇಪಿಸುವರು. 

ಈ ವಿಷಯವನ್ನು " ಐತರೇಯೋಪನಿಷದ್ಭಾಷ್ಯ " ಹೀಗೆ ಹೇಳಿದೆ. 

ಪ್ರಕರ್ಷೇಣ ಆನಯತಿ ಚೇಷ್ಟಯತಿ 

ತತ್ತದಿಂದ್ರಿಯ ವ್ಯಾಪಾರಾನ್ ಕಾರಯತೀತಿ 

ಪ್ರಾಣಃ ಆನ ಚೇಷ್ಟಾಯಮ್ ।। 

ಶರೀರವನ್ನು ಬದುಕುವಂತೆ ಮಾಡುವವರಾದ್ದರಿಂದಲೂ " ಪ್ರಾಣ " ಎಂದು ಕರೆಯಲ್ಪಡುವವರು. 

" ಪ್ರಾಣಃ " 

ಪ್ರಕರ್ಷೇಣ ಆನಯತಿ ಜೀವಯತೀತಿ ಪ್ರಾಣಃ ಅನ ಪ್ರಾಣನೇ ।। 

ಪೂರ್ಣಾನಂದ ಹೊಂದಿರುವುದರಿಂದ....

ಆಣಾ = ಭಾರತೀ. 

ಅವಳಗಿಂತಲೂ ಹೆಚ್ಚಿನ ಸುಖವುಳ್ಳವರಾದ್ದರಿಂದ ವಾಯು ಪ್ರಾಣಃ. 

ಣ ಇತ್ಯೇವ ಹ್ಯಾನಂದಃ 

ಸಮುದೀರಿತಃ । 

ಆಣಾ ಸರಸ್ವತೀ ಪ್ರೋಕ್ತಾ 

ತತ್ಪ್ರಕೃಷ್ಟೋ ಸುಖತ್ವತಃ ।।

ಪ್ರಾಣ ಇತ್ಯುಚ್ಯತೇ ವಾಯುಃ 

ಇತಿ ತತ್ತ್ವವಿವೇಕ - ಛಾಂದೋಗ ಉಪನಿಷದ್ಭಾಷ್ಯ!!! 

" ಬಲ " ರೂಪರಾದುದರಿಂದಲೂ ವಾಯು " ಪ್ರಾಣಃ " ಪ್ರಾಣಃ ಬಲಂ ತದಭಿಮಾನಿತ್ವಾತ್ ಪ್ರಾಣಃ ।। 

" ಪ್ರಾಣ " ಎಂದರೆ ಉಳಿದ ಇಂದ್ರಿಯಾಭಿಮಾನಿಗಳೂ ಆಗುವರೆಂಬ ಕಾರಣದಿಂದ-  ಅವರಿಂದ ಪ್ರತ್ಯೇಕತೆಯನ್ನೂ ಮತ್ತು ಶ್ರೇಷ್ಠತೆಯನ್ನೂ ತಿಳಿಸಲು ಶ್ರೀ ವಾಯುದೇವರನ್ನು ಉಪನಿಷತ್ತುಗಳಲ್ಲಿ " ಮುಖ್ಯಪ್ರಾಣ " ಯೆಂತಲೂ - ಪ್ರಾಣಾಗ್ನಿ " ಯೆಂತಲೂ ಉಲ್ಲೇಖಿತವಾಗಿವೆ. 

ಶರೀರ ಪ್ರಾಣಗತವಾಗಿರುವಾಗ ನಮ್ಮೆಲ್ಲರಿಗೂ ಬಿರುದು ಬಾವಲಿಗಳು. 

ಆದರೆ ಪ್ರಾನವಶ ತಪ್ಪಿದರೆ " ಬಿದಿರೇ " ಗಟ್ಟಿ. 

ಕಾರಣ ಎಲ್ಲರ ಶರೀರಕ್ಕೂ ಎರಡಕ್ಷರದ " ಪ್ರಾಣ " ಬಿರುದೇ ಮುಖ್ಯ. 

ಆದ್ದರಿಂದ ಶ್ರೀ ಪ್ರಾಣರನ್ನು " ಶ್ರೀ ಮುಖ್ಯಪ್ರಾಣ " ರೆಂದು ಕರೆಯುತ್ತಾರೆ. 

" ಶ್ರೀ ಮುಖ್ಯಪ್ರಾಣದೇವರ ಕಾರುಣ್ಯವೇ ಮೋಕ್ಷದ ಮೂಲ "

" ಸ ವೇದೈತ್ಯಾತ್ ಪರಮಂ ಬ್ರಹ್ಮಧಾಮ " 

ಎಂಬುದಾಗಿ " ಅಥರ್ವಣೋಪನಿಷತ್ " ಶ್ರೀ ಮುಖ್ಯಪ್ರಾಣದೇವರ ಅನುಗ್ರಹಪಾತ್ರರಿಗೆ ಮಾತ್ರವೇ ಶ್ರೀ ಹರಿಯ ಸಾಕ್ಷಾತ್ಕಾರವೆಂದು ಸ್ಫುಟವಾಗಿ ಪ್ರತಿಪಾದಿಸಿದೆ. 

ಈ ಹಿನ್ನೆಲೆಯಲ್ಲಿ ಜೀವೋತ್ತಮರಾದ ಶ್ರೀ ಮುಖ್ಯಪ್ರಾಣದೇವರ ಮಹಿಮೆಯ ಅರಿವು ಮತ್ತು ಉಪಾಸನೆ ಅರಿಷ್ಟ ನಿವಾರಕ ಹಾಗೂ ಸಕಲ ವಿಧ ಮಂಗಲಕಾರಕ. ವೇದಾ - ಶಾಸ್ತ್ರ - ಸರ್ವಮೂಲ ಕೃತಿಗಳಲ್ಲಿ " ಪ್ರಾಣರ " ಮಹಿಮೆ ಅಪಾರವಾಗಿ ವರ್ಣಿತವಾಗಿವೆ. 

****



No comments:

Post a Comment