Sunday, 5 December 2021

ಉಗಾಭೋಗಗಳು ಮೊದಲಕಲ್ಲು ಶೇಷದಾಸ ankita guruvijayavittala UGABHOGAGALU MODALAKALLU SHESHADASA

ಮೊದಲಕಲ್ಲು ಶ್ರೀಶೇಷದಾಸರ ಆಪತ್ತು ಪರಿಹಾರ ಉಗಾಭೋಗಗಳು 


ಈ ಮೂರು (1, 2, 3)ಉಗಾಭೋಗಗಳು ಕಲ್ಲೂರು ಕೃಷ್ಣಪ್ಪನ ಮೇಲೆ ಆಪತ್ತು ಬಂದಾಗ ಪ್ರಾರ್ಥನಾ ಮಾಡಿ ರಚಿಸಿದ್ದು. ಭೂಮಿಗಳೆಲ್ಲ ಅನಧಿಕಾರದಿಂದ ಬ್ರಾಹ್ಮಣರ ಹೆಸರಲಿ ಇನಾಂ ಬರದ ಕಾರಣ ಇನಾಂ ಕಮೀಶನ್ ಚರ್ಚಾ ಕಾಲ ಅಪರಾಧಿ ಎಂದು ತೋಪಿನ ಬಾಯಿಗೆ ಕೊಡಲು ತೋಪು ಹಾರಲಿಲ್ಲ. ಆಜ್ಞಾವಾಯಿತು. ಆಗ ಶೇಷದಾಸರು ಶ್ರೀಹರಿಯನ್ನು ಪ್ರಾರ್ಥಿಸಿ ಕೃಷ್ಣಪ್ಪನಿಗೆ ಮಂತ್ರಾಕ್ಷತೆಯನ್ನು ಕೊಟ್ಟು ಅನುಗ್ರಹಿಸುತ್ತಾರೆ.


 1)  

ರಾಗ : ರಂಜನಿ
audio Vid.Sumukh Maudgalya


ಭಕ್ತವತ್ಸಲನೆಂಬ ಬಿರಿದುಳ್ಳ ದೇವ ನಿನ್ನ

ಭಕುತಿಯಿಂದಲಿ ನಮಿಸಿ ಬಿನ್ನೈಸುವೆ 

ರಿಕತನ್ನ ಬಿನ್ನಪವ ಮನಕತಂದು ವೇಗ ಆ-

ಸಕುತಿಯಿಂದಲಿ ಗ್ರಹಿಸಿ ಸಫಲ ಮಾಡೋ 

ಭಕುತನಾದ ಇವಗೆ ಲೌಕಿಕದಿಂದ ಬಂದ

ವಿಕಟರೂಪವಾದ ದುರಿತದಿಂದ 

ಮುಕುತನ್ನ ಮಾಡುವದು ಕರುಣದಿಂದಲಿ ವೇಗ

ಶಕಟಭಂಜನ ಕೃಷ್ಣ ಉತ್ಕೃಷ್ಟನು

ಮುಕುತಿದಾಯಕ ಗುರುವಿಜಯವಿಠಲ 

ಮಮದ್ಭಕ್ತನ ಪ್ರಾಣ ಪ್ರೀತಿ ಎಂಬೋದು ಸತ್ಯಮಾಡೊ॥

***


2) 

ರಾಗ : ಅಠಾಣ

audio Vid.Sumukh Maudgalya

ಭಕ್ತರ ಮನೋರಥ ಪೂರ್ಣಮಾಡುವಲ್ಲಿ

ಉತ್ಕೃಷ್ಟವಾದ ಕಾಮಧೇನು ಎನಿಪೆ

ಭಕ್ತರ ಅಪರಾಧ ಸಹನ ಮಾಡುವಲ್ಲಿ ಧಾ-

ರಿತ್ರಿಗೆ ಸಮಾನನೆನಿಪ ಸಾರ್ವಭೌಮ 

ಭಕ್ತರಮ್ಯಾಲೆ ಮಹ ಕರುಣ ಮಾಡುವಲ್ಲಿ 

ಪಿತೃ ಮಾತೃ ಭ್ರಾತೃ ಗುರು ಸಮಾನನೆನಿಪೆ

ಭಕ್ತರ ಅಭಿಮಾನ ಸಹನಮಾಡುವಲ್ಲಿ

ಮಿತ್ರನೆನಿಸಿಕೊಂಬೆ ಅನಿಮಿತ್ತ ಬಂಧು

ಭಕ್ತರ ದುರಿತ ಕಳೆದು ಕಾವ ವಿಷಯದಲ್ಲಿ

ಛತ್ರನೆನಿಪ ಸತತ ಸನ್ಮಂಗಳಾಗ

ಭಕ್ತರ ನಿಂದಕರ ನಿಗ್ರಹ ಮಾಡುವಲ್ಲಿ

ಮೃತ್ಯು ಯಮಗೆ ಸದೃಶನೆನಿಪದೇವ 

ಭೃತ್ಯವತ್ಸಲ ಗುರುವಿಜಯವಿಠಲರೇಯ 

ಭಕ್ತರ ಪೊರೆವ ಬಿರಿದು ನಿನ್ನದಯ್ಯ॥

***


3) 

ರಾಗ : ವರಾಳಿ
audio Vid.Sumukh Maudgalya


ಶತ್ರು ಮಿತ್ರಗಳಲ್ಲಿ ಸಮಸ್ಥಿತನಾಗಿ ನೀನೆ

ಪ್ರಕೃತಿಯು ಜೀವಕಾಲ ಅನುಸರಿಸೀ

ಕೃತ್ಯವಮಾಳ್ಪನಾಗಿ ಜೀವರ್ಗೆ ಸುಖ ದುಃಖ

ಮೊತ್ತಗಳುಣಿಸುವಿ ನಿಯಮದಂತೆ

ಕರ್ತೃನೆಂದು ನಿನ್ನ ನೆರೆನಂಬಿ ಇಪ್ಪವರಿಗೆ ಇದು

ಕೃತ್ಯಗಳಲ್ಲವೆಂದು ಶಾಸ್ತ್ರಸಿದ್ಧ

ಚಿತ್ತಕ್ಕೆ ತಂದು ವೇಗ ಶತ್ರುಸಹಸವನ್ನು

ವ್ಯರ್ಥಮಾಡಿ ಭಕ್ತನಾದವನ 

ಹತ್ತಲಿ ಕರೆದು ದಯದೃಷ್ಟಿಯಿಂದಲಿ ನೋಡಿ

ಉತ್ತಮವಾದ ಸುಖವೈದಿಪದೊ

ಭಕ್ತವತ್ಸಲ ಗುರುವಿಜಯವಿಠಲ ರೇಯ

ಎತ್ತಲಿದ್ದರು ನಿನ್ನ ಪೊಂದಿದವನು॥

***



4)  

ರಾಗ : ಚಾರುಕೇಶಿ

audio Vid.Sumukh Maudgalya


ದೈತ್ಯನ್ನ ವಧೆಗಾಗಿ ಶಪಥ ಮಾಡಲಾಗಿ

ಕೃತ್ತಿವಾಸನ ದ್ವಾರ ಕೃಪೆಯ ಮಾಡಿ

ಕತ್ತಲೆಗೈಸಿ ಶಿರ ಕಿತ್ತಿ ಚಂಡಾಡಿಸಿ

ಭಕ್ತನ ಪ್ರತಿಜ್ಞೆಕ್ಕೆ ಗೆಲೆಸಿದಂಥ

ಸತ್ಯವಾದ, ರೂಢಿ ತ್ರಿಜಗವು ಬಲ್ಲದು

ಪೃಥ್ವಿಪಾಲಕನಾದ ಸಾರ್ವಭೌಮನು ಪರಮ-

ರಿಕ್ತ ಅನುಭವ ಪೇಳಿ ಹಿಗ್ಗುವಂತೆ

ಉತ್ತಮೋತ್ತಮ ನಿನ್ನ ಇನಿತು ತಿಳಿದು

ಭಕ್ತಿಯಿಲ್ಲದೆ ಸಥೆಯಿಂದ ನುಡಿದಂಥ

ಉಕ್ತಿಗೆ ವ್ಯಾಹತಿ ತಂದದಕ್ಕ ನಿನ್ನ

ಮಿತ್ರತ್ವ ಏನುಂಟು ಇದರೊಳಗೆ

ಭೃತ್ಯರ ಅಭಿಮಾನ ಕಾಯದಿದ್ದರೆ ಒಡೆಯ

ಕೀರ್ತಿಯೈದುವೆನೇನೋ ಮಾನ್ಯನಾಗಿ

ಸತ್ಯಸಂಕಲ್ಪ ಗುರುವಿಜಯವಿಠಲರೇಯ 

ಈ ತೆರದಲಿ ಮಾಡದಲಿರು ಎಂದಿಗನ್ನ॥


5) 

ರಾಗ : ಹಂಸಾನಂದಿ

audio Vid.Sumukh Maudgalya

ಇನ್ನೆಷ್ಟು ಕಾಲಕ್ಕು ಮರಿಯಾದಂತೆ ಮಾಡಿಸಿದಿ

ಉನ್ನತಮಹಿಮ ನಿನ್ನ ಇಚ್ಛಕ್ಕೆ ಯದಿರಾರೊ

ಇನ್ನಾದರೂ ಕೃಪೆಯಿಂದ ನೋಡದಿರೆ

ಘನ್ನವಾದ ದುಃಖದಿಂದ ಕಡಿಗೆ ಐದುವಿನೆಂತೊ

ಚಿನ್ಮಯಮೂರುತಿ ಗುರುವಿಜಯವಿಠಲರೇಯ 

ಎನ್ನ ಅಪರಾಧ ನಿನಗೆ ಅರ್ಪಿತವು॥

***

6)

ದಾಸರು ಈ ಉಗಾಭೋಗವನ್ನು ಶ್ರಾವಣ ಮಾಸ ಶುಕ್ಲಪಕ್ಷ ಬಿದಿಗೆ ಸ್ಥಿರವಾರದಂದು ರಚಿಸಿದ್ದು.

ರಾಗ : ಹಿಂದೋಳ 

audio Vid.Sumukh Maudgalya


ಗುರು ವಿಜಯರಾಯರಂದು ಸಮ್ಮುಖದಲ್ಲಿ ಬಂದು

ಪರಿವ್ಯಾಪ್ತನಾದ ಶ್ರೀಹರಿಯ ವಿವಿಕ್ಷದಿ

ಪರಿಪರಿ ವಿಧದಿಂದ ಸ್ತುತಿಸಿ ಪ್ರಾಂತ್ಯದಲ್ಲಿ 

ಗುರುವಿಜಯವಿಠಲನ್ನ ಸೇವಕ ನೀನೆಂದು

ಕಾರಣದಿಂದ ನಿನಗೆ ಇದೇ ಮುದ್ರಿಕವು ಎಂಬ 

ತೆರವಾದ ಸಂಜ್ಞವೆಂದು ಸೂಚಿಸಿದಿ

ಪರಮ ಧನ್ಯನಾದೆ ಗುರು ವಿಜಯದಾಸರಿಗೆ 

ಚರಣ ಸೇವಕನಾದೆ ನಿನ್ನ ದಯದಿ

 ಗುರುಗಳ ದ್ರೋಹದಿಂದ ಮುಕ್ತನಾಗಿ ನಿನ್ನ

ಕುರುಹು ಕಾಣುವ ಅಧಿಕಾರಿಯಾದೆ

ಪರಿಪೂರ್ಣ ಕೃಪಾನಿಧೆ ಗುರುವಿಜಯವಿಠಲ ನಿನ್ನ 

ಕರುಣದ ಫಲವಿದೆ ಬಾಳಿದದಕೆ.॥

***


7) 

ರಾಗ : ಖರಹರಪ್ರಿಯ 

audio Vid.Sumukh Maudgalya

ವಿಜಯನಾಮವು ಎನಗೆ ಸಾರ್ಥಕ ಮಾಳ್ಪೆನೆಂದು

ಕುಜನ ಮರ್ದನ ನಿನಗೆ ನೀನೆ ಒಲಿದು

ವಿಜಯಸಾರಥಿ ಎನಿಸಿ ಎನ್ನಲ್ಲಿ ನಿಲ್ಲದಿರೆ

ವಿಜಯನಾಮವು ಸಫಲವಾಗುವದೆ?

ಭುಜಗತಲ್ಪನೆ ಈ ಸೊಬಗು ದೃಢವಾಗದಲೆ

ಕುಜನಮಣಿಯಾದ ಕಲಿಕೃತ ಕಲ್ಮಷದಿ

ರಜತಮೋ ಗುಣದಿಂದ ಬದ್ಧನಾಗಿ

ಅಜಯವುಳ್ಳವನಾದೆ ಬಲು ವತ್ಸರವು ನೋಡು

ವಿಜಯಸಖನೆಂಬೊ ಕರುಣವಿತ್ತು

ಸುಜನ ಪೋಷಕನೆ ಕೇಳಂದು ಸ್ವಪ್ನದಲಿ

ನಿಜವಾಗಿ ದಶನಾಮ ಸಫಲಮಾಳ್ಪೆನೆಂದು

ನಿಜಮುಖದಿಂದ ಪೇಳುವೆನು ವೇಗ

ತ್ಯಜನೆ ಮಾಡದೆ ವಾಕ್ಯತಂದುಕೊ ಮನನಕ್ಕೆ

ಸುಜನ ಕುಲಾಬ್ಧಿಚಂದ್ರ ಸುಗುಣಸಾಂದ್ರ

ವೃಜನಗಳೆಣಿಸದೆ ತ್ವರಿತದಿಂದಲಿ ಎನಗೆ

ವಿಜಯನಾಮವು ಸಫಲಮಾಡುವದು

ಭುಜಗಭೂಷಣವಂದ್ಯ ಗುರುವಿಜಯವಿಠಲರೇಯ 

ಋಜುಮಾರ್ಗವನೆ ಇತ್ತು ಪಾಲಿಸುವದು॥

***


8) 

ರಾಗ : ಸಾರಮತಿ

audio Vid.Sumukh Maudgalya

ಶಕ್ತಿ ಆಯುಧದಿಂದ ಸಲಹಿದನೆಂಬೊ ಘನತಿ

ವ್ಯಕ್ತಮಾಡಿಕೊಂಡು ಭುವನದಲ್ಲಿ 

ಭಕ್ತವತ್ಸಲನೆಂಬೊ ಬಿರಿದು ಮಾತ್ರಕ ಪಡದಿ

ಭಕ್ತನಲ್ಲಿ ನಿನಗೆ ವಾಂಛಲ್ಯ ನಿಜವಾಗೆ

ವಿಭಕ್ತವಾಯಿತು ಯಾಕೆ ಇಂದು ನೋಡ

ಅಯುಕ್ತವಾದ ಘೋರ ಸಂಸಾರದಲ್ಲಿ ತಂದು 

ನಕ್ತಂಚರರಿಗೆ ಸಹಾಯನಾಗಿ

ಹೊತ್ತು ಹೊತ್ತಿಗೆಪ್ರವಹರೂಪವಾದ ದುಃಖ

ಯುಕ್ತನಮಾಢಿ ಬಲು ದಣಿಸಿದದಕ ಪೂ-

ರ್ವೋಕ್ತ ಸಕ್ತವಾಯಿತ್ಯಾಕೆ ಇನಿತು ಕಠಿಣ ತನ

ಶುಕ್ತಿಯಲ್ಲಿ ರಜತ ಭ್ರಾಂತಿಯು ತೋರಿದಂತೆ

ಸಕ್ತನೆ ನಿನ್ನ ಕರುಣ ಇನಿತಾಯಿತೊ

ಸತ್ಯಮಂಗಳಮೂರ್ತಿ ನಿನಗೆ ನಿನ್ನ ಕ್ರೀಯಕ್ಕ

ಅಸತ್ಯವೆಂದಿಗೂ ಸಲ್ಲ ಶ್ರುತಿಸಮ್ಮತ

ಭೋಕ್ತಸಾರನೆ ಗುರುವಿಜಯವಿಠಲರೇಯ 

ಉಕ್ತಿಗೆ ವ್ಯಾಹತಿ ಬಾರದಂತೆ ನೋಡೊ॥

***


9) 

ರಾಗ : ರೇವತಿ 

audio Vid.Sumukh Maudgalya

ಅಂದಿನ ಗುರುದ್ರೋಹದಿಂದ ಇಂದು ಈ ಕುಂಭಿಣಿಗೆ

ಬಂದು ಬಾಹುಳ್ಯ ನೀಚ ದೇಹ ಧರಿಸಿ

ವೃಂದಕಾಮಗಳಿಂದ ಜನಿಸಿದ ಕ್ರೋಧ ಲೋಭ

ಸಂದೋಹ ಜನಕ ಸುಖ ದುಃಖ ತಾನೆ

 ಸಿಂಧುವಿನೊಳು ಮುಣಿಗಿಸಿ ಪರಮಾಪ್ತನಾದ

ಇಂದಿರಾಪತಿ ನಿನಗೆ ದೂರನಾದೆ

ಒಂದೊಂದು ಉಪಾಯದಿಂದೆ ನೀನೆ ಮತ್ತೆ 

ಹಿಂದಿನ ಕೃತ್ಯಕ್ಕೆ ಉಪೋದ್ಬಲಕನಾಗಿ

ಸಂಧಿಸಿದಿ ನಿನ್ನ ಯುಕ್ತಿಗೆ ಸಮ ಉಂಟೆ

ತಂದೆ ನಿನ್ನಯ ಪಾದ ದ್ವಂದ್ವಕ್ಕ ನಮಿಸುವೆ

ಎಂದೆಂದಿನಿತು ಮಾಳ್ಪುದುಚಿತವಲ್ಲ

ಮಂದರಧರನೀನು ಕರುಣಮಾಡುವದಕ್ಕ

ಎಂದೆಂದಿಗಾದರು ದ್ವಾರವಿದೆ

ಎಂದು ಬಿನ್ನೈಸಿದೆ ಬಲುವಿಧದಿಂದ ನಾನು 

ಕಂದನ ಬಿನ್ನಪವ ಮನಕ ತಂದು 

ಅವರಿಂದಲಿ ನುಡಿಸಿದ ನುಡಿಯು ವೇಗದಿಂದ

ಅಂದವಾಗಿ ಸಫಲ ಮಾಡುವದು

ಬಂಧು ಅನಿಮಿತ್ತ ಗುರುವಿಜಯವಿಠಲರೇಯ -

-ನೆಂದು ಕೊಂಡಾಡಿದರ್ಗೆ ಭಯವಿಲ್ಲ ಭಯವಿಲ್ಲ॥

***


10)  

ರಾಗ : ಪೂರ್ವಿಕಲ್ಯಾಣಿ

audio Vid.Sumukh Maudgalya


ಮೂರು ವರಗಳನ್ನು ಮೋದದಲಿತ್ತು

ಸ್ವರೂಪ ಸುಖದಲಿ ಜೀವಿಸೆಂದು

ನೀರಜಾಕ್ಷನೆ ಕರುಣಾ ಮಾಡಿದುದಕೆ

ಶಾರೀರೇಂದ್ರಿಯಗಳಿಗೆ ಸುಖವಾಯಿತೋ

ವಿವರ ತಿಳಿಯಲಿಲ್ಲ ಮೂರು ಬಗೆಯಿಂದ

ಪುರುಷಾರ್ಥಗಳ ಸ್ವರೂಪವ 

ಗುರುವಿಜಯರಂದು ಗೂಢ ಮಾತಿಲಿ

ಮೂರು ವರಗಳುಯಿತ್ತು ಬುದ್ಧಿ ಪೇಳಿ

ಪ್ರೇರೇಪಿಸಲಿಲ್ಲೆಂಬ ಸ್ಪಷ್ಟತ್ವಾಗಿ ಎನಗೆ

ವಾರಿಜಾಕ್ಷನೆ ಇಂದು ನೀನದರಂತೆ

ಮೂರು ವರಗಳ ಸೌಖ್ಯ ವೈದೆಯೆಂದು

ಔದಾರ ಮನಸಿನಿಂದ ಪೇಳಿದಲ್ಲದೆ

ತೋರಿಸಲಿಲ್ಲ ಅದರ ಕುರುಹು ಸಂಜ್ಞವನ್ನು

ಸಾರ ಸುಗುಣ ಪೂರ್ಣನೆ ನಿರ್ಮಲಾತ್ಮಾ

ಮೂರು ವಿಧವಾದ ಶಾಪ ತೀರಿದ ಬಗೆಯೊ ಮಾರಾರಿ

ಮರ್ದನನೆ ಕರುಣ ಮಾಡಿ

ಮೂರರಾಜ್ಞಾರೂಪ ತಿಳುಹಿ ವೇಗದಿಂದ

ಸಾರ ಸುಜನ ಕಾರ್ಯವಾಗುವಂತೆ ಕಲ್ಪಿಸುವದು

ಬರಿದೆದಂಧವ್ಯಾಕೆ ಮೋದ ದಯಾಸಿಂಧು ಕೃಷ್ಣ ಅ-

ಪಾರ ಮಹಿಮನೆ ಅಮಿತ ತೇಜ

ಕ್ರೂರಗಜಕೆಹರಿ ಗುರುವಿಜಯವಿಠಲರೇಯ 

ತೋರಿಸಯ್ಯಾ ಚರಣ ತ್ವರಿತದಿಂದ॥

***


11) 

ರಾಗ : ಶುಭಪಂತುವರಾಳಿ

audio Vid.Sumukh Maudgalya


ಉದ್ಯುಕ್ತರಾಗಿ ಎನ್ನ ಯೋಗ್ಯತಯಿದ್ದನಿತು

ಸದ್ವಿರಾಗದಿಂದ ಧೇನಿಸುತ್ತ

ಹೃದ್ವನಜದಲ್ಲಿ ಪೋಗಿ ಕೈಮುಗಿದು ನಮಿಸಿದರು

ಛದ್ರ ಮೂರುತಿ ನಿನ್ನ ಕುರುಹ ಕಾಣಿಸಿಕೊಳದೆ

ಎದ್ದು ಪೋಗಿವಂತೆ ಮನಸು ಮಾಡಿ

ಕ್ಷುದ್ರವಾದ ವಿಷಯ ಜಾಲಗಳು ಎರಗಿಸಿ ಸ-

ಮುದ್ರ ಪೋಲುವ ದುಃಖ ಉಣಿಸಿ ಮರಳೆ ಬುದ್ಧಿ ಭ್ರಮಣವಾಗಿಯಿರುವ ಸಮಯದಲ್ಲಿ ಅ-

ಶುದ್ಧವಾದ ಹೀನ ಸ್ಥಳದಲ್ಲಿ

ಮುದ್ದು ಮೋಹನವಾದ ರೂಪದಿಂದಲಿ ತೋರಿ

ಬುದ್ಧಿಗೆ ವ್ಯಾಕುಲ ತೋರ್ಪದೇನೊ

ನಿದ್ರರಹಿತ ಇಂತು ವಿನೋದ ಮಾಡಿದರೆ

ಬದ್ಧನಾದ ಎನಗೆ ಸುಖವಾಹದೇ

ಕದ್ರುಗೀಶಯನ ನಿನ್ನ ಮನೋ ವಚನ ಕಾಯದಿಂದ

ಪಾದಪದ್ಮಕ್ಕೆರಗೀದ ಮ್ಯಾಲೆ ಇನಿತು ಮಾತೇ

ಮಧ್ವಾಂತರ್ಗತ ಗುರುವಿಜಯವಿಠಲರೇಯ 

ಶುದ್ಧಾನಂದವಿತ್ತು ವಿಷಯನಾಗು॥

***


12) 

ರಾಗ : ಮಧ್ಯಮಾವತಿ

audio Vid.Sumukh Maudgalya


ಒಂದು ಸ್ಮರಿಸುತಿರೆ ಆನಂದವಾಗುತಿದೆ ಮ-

ತ್ತೊಂದು ಸ್ಮರಿಸುತಿರೆ ಕ್ಲೇಶವಹದೊ

ಕುಂದು ಲೇಸಗಳು ಕಾಲಭೇದದಿಂದ ಸ-

ಮ್ಮಂಧ ಗೈಸಿದೆನಗೆ ಸಾರ್ವಭೌಮಾ

ಇಂದಿರಾಪತಿ ನಿನ್ನ ಸತ್ಯ ಸಂಕಲ್ಪವ 

ಮಂದನಾದವ ನಾನು ದಾಟುವೆನೆ

ಅಂದು ಮಾಡಿದ ಕರ್ಮ

ಒಂದೊಂದು ಸ್ಮರಿಸುತಿರೆ

ತಂದೆ ಎನ್ನಯ ಭಾಗ್ಯಕ್ಕೆಣೆಯಾವದೊ

ಇಂದಿನ ದುರ್ಭಾಕ್ಯಕ್ಕೆ ಎಣಿಸಿ ಗುಣಿಸಿ ನೋಡೆ

ಕುಂದಿಗೆ ಸಮ ಉಂಟೆ ವಸುಂಧರಿಲಿ

ಮಂದರೋದ್ಧಾರ ಗುರುವಿಜಯವಿಠಲ ನಿನ್ನ 

ಪೊಂದಿದವಗಿನಿತು ಫಲವೇನೊ॥

***

 



No comments:

Post a Comment