..
kruti by ವರದೇಶ ವಿಠಲರು varadesha vittala dasaru
ಭಾರತೀಶನೆ ಉದ್ಧರಿಸುವದೆನ್ನ ಪ
ಭಾರತೀಶ ಕಂಸಾರಿ ಪ್ರೀಯ ಸಂ -
ಸಾರ ಬಂಧನ ನಿವಾರಿಸೊ ಜವದಿ ಅ.ಪ
ಅಂಜನಾದೇವಿಯ ಸಂಜಾತನೆ ಭವ
ಭಂಜನ ಹರಿಪದಕಂಜಾರಾಧಕ 1
ಮಾರುತಿ ನಿನ್ನ ಸುಕೀರುತಿ ತ್ರಿಜಗದಿ
ಸಾರುತಲಿದೆಯುದ್ಧಾರಕನೆಂದು 2
ಹರಿಕುಲಜಾತನೆ ಹರಿಸಂಪ್ರೀತನೆ
ಹರಿಹಯ ವಿನುತನೆ ಹರಿದುರಿತವನು 3
ಕಾಮಿತ ಫಲದ ನಿಸ್ಸೀವÀು ಪರಾಕ್ರಮಿ
ಪ್ರೇಮವ ಕೊಡು ಶ್ರೀ ರಾಮನ ಪದದಿ 4
ಕುಂತಿ ಕುಮಾರಾದ್ಯಂತ ವಿದೂರನೆ
ಅಂತರಂಗದಿ ಹರಿಚಿಂತನೆಯಕೊಡು 5
ಧರ್ಮಾನುಜಸದ್ಧರ್ಮ ಸ್ಥಾಪಕನೆ
ಕಿರ್ಮೀರಾಂತಕ ನಿರ್ಮಲ ಚರಿತ 6
ಭೀಮನೆ ಸುದ್ಗುಣ ಧಾಮನೆ ಕುರುಕುಲ
ಸೋಮನೆ ಸುರಮುನಿಸ್ತೋಮನಮಿತನೆ 7
ಅರ್ಜುನಾಗ್ರಜನೆ ದುರ್ಜನ ಶಿಕ್ಷಕ
ಧೂರ್ಜಟಿವಂದ್ಯನೆ ಮೂರ್ಜಗ ಕರ್ತಾ 8
ಆರ್ಯನೆ ಕೃತ ಸತ್ಕಾರ್ಯನೆ ಜಗದೊಳು
ನಾರ್ಯಕುರುಪನೂರು ಶೌರ್ಯದಿ ತರಿದ 9
ಕರಿವರದನ ಚರಣಾರವಿಂದ ಯುಗ
ನಿರುತ ಸ್ಮರಿಪತೆರ ಕರುಣಿಸು ಭರದಿ 10
ದುಷ್ಟದ್ವಂಸಕನೆ ಶಿಷ್ಟಪಾಲಶ್ರೀ -
ಕೃಷ್ಣನಂಘ್ರಿಯಲಿ ನಿಷ್ಠೆಯ ತೋರೋ 11
ಮಧ್ಯಗೇಹ ಸುತ ಸದ್ವೈಷ್ಣವ ಯತಿ
ಅದ್ವೈತಕರಿ ಹರಿ ಸಿದ್ಧಾಂತ ಕರ್ತಾ 12
ಮಿಥ್ಯಾವಾದಿಬಾಯಿ ಎತ್ತದಂತ ಶ್ರು -
ತ್ಯರ್ಥವ ಪೇಳ್ದ ಸಮರ್ಥನಹುದು ನೀ 13
ಹರಿಸರ್ವೋತ್ತಮ ಸಿರಿಯು ಅಕ್ಷರಳು
ಸುರರೊಳು ನೀನೆ ಪಿರಿಯನು ಸತ್ಯ 14
ಸದಮಲಚರಿತನೆ ಹೃದಯದ ತಿಮಿರವ
ವದೆದು ತರಿವುದಕೆ ಉದಿತ ಭಾಸ್ಕರ 15
ಮೂರು ರೂಪಾತ್ಮಕ ಸಾರಿದೆಯನ್ನಯ್ಯs
ಪಾರದುರಿತ ಪರಿಹಾರವ ಗೈಸೊ 16
ಹೇಸಿಕೆ ಭವದಲಿ ನಾಶಿಲುಕಿಹೆ ವರ -
ದೇಶ ವಿಠಲನ ಸೋಶಿಲಿ ತೋರೊ 17
***
No comments:
Post a Comment