Monday 2 August 2021

ಸಾಕು ಸಾಕೊ ನಿನ ಸಂಗ ಶ್ರೀಕಾಂತ ನೃಹರಿ ankita gopalakrishna vittala

ಸಾಕು ಸಾಕೊ ನಿನ ಸಂಗ ಶ್ರೀಕಾಂತ ನೃಹರಿ

ಯಾಕಿಂತು ನಿರ್ದಯವೊ ಭಕ್ತರೊಳು ನಿನಗೆ ಪ.


ಕರಿಗಿರಿ ಶಿಖರದಲಿ ನೆಲಸಿರುವ ನೃಹರಿಯೆ

ಗುರುಗಳು ಸಹಿತದಲಿ ನಿನ್ನ ಗಿರಿ ಏರಿ

ಪರಮ ಸಂತೋಷದಲಿ ದರುಶನಕೆ ನಾ ಬರಲು

ಸಿರಿಸಹಿತ ಪವಡಿಸಿ ಕದವ ಹಾಕಿಸಿದೆ 1

ಬಂದ ವರ ಭಕ್ತರಿಗೆ ಸಂದರುಶನವ ಕೊಡದೆ

ಮಂದಿರದ ಬಾಗಿಲ್ಹಾಕಿಸಿದೆಯಲ್ಲೊ ದೇವ

ಇಂದೆನ್ನ ಮನಕೆ ಪರಿತಾಪವನೆ ಕೊಟ್ಟೆ

ಚಂದವೇ ನಿನಗಿನ್ನು ಮಂದರೋದ್ಧರನೆ2

ನಿನ್ನ ದರುಶನ ಕೊಡದ ಘನ್ನ ಪಾಪವನೆ ನಾ

ಮುನ್ನೇನ ಮಾಡಿದೆನೊ ಪನ್ನಗಶಯನ

ಎನ್ನ ಕೊರಗಿಸುವುದು ಇನ್ನು ನಿನಗೆ ಹಿತವೆ

ಮನ್ನಿಸಿ ಸಲಹಬೇಕಿನ್ನು ಶ್ರೀ ಹರಿಯೆ 3

ಕದವೇಕೆ ಹಾಕಿಸಿದ್ಯೊ ಪದುಮನಾಭನೆ ದೇವ

ಒದಗಿ ಬಹ ಭೃತ್ಯರನು ಒದೆದು ನೂಕಿ

ಯದುವೀರ ನಿನಗಿನ್ನು ಎಷ್ಟು ನಿದ್ರೆಯೊ ಕಾಣೆ

ಕದನವಾಡುವೆ ನಿನ್ನೊಳು ಪ್ರಹ್ಲಾದವರದ 4

ವರಭಕ್ತರು ಕಾದಿರಲು ದರುಶನ ಕೊಡದೆ ನೀ

ಸಿರಿಸಹಿತ ಪವಡಿಸಿದೆ ಘನವೆ ನಿನಗಿನ್ನು

ಸುರವಂದ್ಯ ಗೋಪಾಲಕೃಷ್ಣವಿಠ್ಠಲ ಹೃದಯ

ಅರಮನೆಯೊಳು ನೆಲಸಿ ಸಲಹಯ್ಯ ಸತತ 5

****


No comments:

Post a Comment