Sunday 5 December 2021

ವಿಷ್ಣು ಪಾದವ ನೋಡಿದೆ ಎನ್ನ ಮನ ದಿಷ್ಟ ಫಲಗಳ ankita bheemesha krishna VISHNU PAADAVA NODIDE ENNA MANA DISHTA PHALAGALA



ವಿಷ್ಣುಪಾದವ ನೋಡಿದೆ ಎನ್ನ ಮನ-

ದಿಷ್ಟ ಫಲಗಳ ಬೇಡಿದೆ

ವಿಷ್ಣು ಪಾದವ ನೋಡ್ಯಭೀಷ್ಟ ಫಲಗಳ ಬೇಡಿ

ಶ್ರೇಷ್ಠಪಾದಕೆ ಶಿರವ ಮುಟ್ಟಿಸ್ವಂದನೆ ಮಾಡಿ ಪ


ಗಂಗೆ ಹುಟ್ಟಿದ್ದ ಪಾದ ಇದು ನೋಡೆ

ಗಯನ ಮೆಟ್ಟಿದ್ದ ಪಾದ

ತಂಗಿ ದ್ರೌಪದಿದೇವಿಪತಿಗೆ ಸಾರಥಿಯಾಗಿ

ಸಂಗ್ರಾಮದಿ ರಥವ ನÉಲಕೊತ್ತಿ ಉಳುಹಿದ ಪಾದ 1


ಧ್ವಜ ವಜ್ರಾಂಕುಶದ ಪಾದ ಶಂಖವು

ಚಕ್ರಪದ್ಮರೇಖ್ಯುಳ್ಳ ಪಾದ

ಮಧುರೆಯಲಿ ಮಾವನ ಮಂಚಿಕೆಯಲ್ಹಾರಿ

ವಧೆಯ ಮಾಡಿ ಮಾತೆಬದಿಲಿ ಬಂದ ಪಾದ 2


ಬಲಿಯ ಶಿರ ತುಳಿದ ಪಾದ

ನೆಲನ ಮೂರಡಿಯ ಮಾಡಿದ್ದ ಪಾದ

ಶಿಲೆಯಾದಹಲ್ಯೆಯ ಉದ್ಧಾರವನು ಮಾಡಿ

ಮಲತಾಯಿಯ ಮಾತಿಗರಣ್ಯ ತಿರುಗಿದ ಪಾದ 3


ಖಗನ ಹೆಗಲೇರೊ ಪಾದ ಕಾಳಿಫಣ

ಜಿಗಿದು ತುಳಿದಂಥ ಪಾದ

ಅಗರ ಕೇಸರಿ ಗಂಧದಿಂದ ಪೂಜಿತ ಪಾದ ಕಾ-

ಲುಗುರಿನಲಿ ಬ್ರಹ್ಮಾಂಡ ಕಟಾಹ ಸೀಳಿದ ಪಾದ 4


ಲಕ್ಷ್ಮಿ ಸೇವಿಸುವ ಪಾದ ಈ ಗಯದಿ

ಸಾಕ್ಷಾತ ಹರಿಯ ಪಾದ

ಕುಕ್ಷಿಯಲಿ ತ್ರಿಜಗವಿಟ್ಟು ರಕ್ಷಿಸುವಂಥ

ಮೋಕ್ಷಪ್ರದ ಭೀಮೇಶಕೃಷ್ಣಮೂರುತಿ ಪಾದ 5

***


No comments:

Post a Comment