Sunday, 1 August 2021

ಕಂಗಳಿಂದಲಿ ನಿನ್ನ ಕಂಡೆ ನಾನೀಗ ಹಿಂಗಿತೇ ಎನ್ನ ಅಘದ್ಹಿಂಡು ಕಾವೇರಿ ankita gopalakrishna vittala

 ನದೀದೇವತೆಗಳು

ಕಂಗಳಿಂದಲಿ ನಿನ್ನ ಕಂಡೆ ನಾನೀಗ

ಹಿಂಗಿತೇ ಎನ್ನ ಅಘದ್ಹಿಂಡು ಕಾವೇರಿ ಪ.


ಮಂಗಳಾಂಗಿಯೆ ಶ್ರೀ ರಂಗನಾಥನ ಪದ

ಭೃಂಗಳೆನಿಸಿ ಜನರ ಪಾವನಗೈವೆ

ತುಂಗವಿಕ್ರಮ ಹರಿಗೆ ಮೂಲರೂಪಳಾಗಿ

ಅಂಗ ಶುದ್ಧಿಯಗೈವೆ ಪಾಪಿಗಳ ಸತತ 1

ಎಲ್ಲೆಲ್ಲಿ ನೋಡೆ ಶ್ರೀರಂಗನ್ನ ಸೇವಿಸುವೆ

ಪುಲ್ಲಲೋಚನೆ ನಿನ್ನ ಬಗೆಯರಿವೆನೆ

ಬಲ್ಲ ಭಕ್ತರು ಬಂದು ನಿನ್ನಲ್ಲಿ ಸ್ನಾನವಗೈದು

ಉಲ್ಲಾಸದಿಂದ ಆನಂದಪಡುತಿಹರೆ 2

ನೊರೆಸುಳಿಗಳಿಂದ ಭೋರ್ಗರೆಯುತ್ತ ಹರಿ ಇರುವ

ಅರಮನೆಯೆ ವೈಕುಂಠವೆಂದು ಸೂಚಿಸುತ

ಹರಿಸದನ ಸುತ್ತಿರುವೆ ವಿರಜೆ ನಾನೆಂದೆನುತ

ಅರುಹುವಾ ತೆರದಿ ಬಹು ರಭಸದಿಂ ಪರಿವೆ 3

ನಿನ್ನ ಧ್ವನಿ ಇಂಪೆಂದು ಆನಂದದಿಂದಾಲಿಸುತ

ಚನ್ನ ಶ್ರೀರಂಗ ತಾ ಪವಡಿಸಿಹನೆ

ಘನ್ನ ಮಹಿಮಳೆ ಸಕಲ ಜೀವರಾಶಿಯ ಪೊರೆವೆ

ಎನ್ನ ಮನ ಹರಿಪದದಿ ನಲಿವಂತೆ ಮಾಡೆ 4

ನಿನ್ನನೇ ವಿರಜೆ ಎಂತೆಂದು ಭಾವಿಸಿ ಈಗ

ಎನ್ನ ಗುರುಗಳ ದಯದಿ ಸ್ನಾನಗೈದೆ

ಇನ್ನು ಶ್ರೀ ವೈಕುಂಠದೊಡೆಯನಾ ತೋರಮ್ಮ

ಘನ್ನ ಶ್ರೀ ಗೋಪಾಲವಿಠ್ಠಲನ 5

****


No comments:

Post a Comment