Tuesday, 18 May 2021

ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ ankita prasanna

 ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ

ಸುವಿನೋದವ ಪಡೆದರು ಸುರನರಜನರು ॥ ಪಲ್ಲವಿ ॥


ಪವನಸುತರ ಮತ ಭುವಿಯಲಿ ಸುಲಭದಿ

ವಿವರಿಸಿ ಜನರಿಗೆ ಪ್ರವಚನವೆಸಗಲು ॥ ಅನುಪಲ್ಲವಿ ॥


ಗುರು ಬ್ರಹ್ಮಣ್ಯರ ವರಪದಕಮಲಗಳ

ಪರತರಭಕುತಿಯಲಿ

ಪರಿಪರಿ ಸೇವಿಸಿ ಗುರುಕರುಣದಲಿ

ಹರುಷವ ಪೊಂದುತಲಿ

ವರವ ಪಡೆದ ಭೂಸುರ ರಾಮಾರ್ಯರ

ಪರಸತಿಯುದರದಿ ವಹ್ನಿಪುರದೊಳವ-

ತರಿಸುತ ಧರೆಯೊಳು ಸುಜನಗಣವನು-

ದ್ಧರಿಸಲು ಮುದದಲಿ ಸಿರಿಪತಿಭಕುತನು ॥ ೧ ॥


ಅತಿಬಾಲ್ಯದಿ ಗುರ್ವಾಜ್ಞೆಯನನುಸರಿಸಿ

ಯತಿಯಾಶ್ರಮ ವಹಿಸಿ

ಕ್ಷಿತಿಯೊಳಪರೋಕ್ಷಜ್ಞಾನಿಗಳೆಂದು

ಪ್ರಥೆಯನು ಪೊಂದಿದ ಲಕ್ಷ್ಮೀನಾರಾಯಣ-

ಯತಿಯಲಿ ಶಾಸ್ತ್ರಾಮೃತ ಪಾನಮಾಡುತ

ಅತಿಸುಲಭದ ಶ್ರುತಿತತಿಗಳ ಸಾರವ

ಕ್ಷಿತಿಸುರರೊಳಗತಿ ಹಿತದಲಿ ಅರುಹಲು ॥ ೨ ॥


ಗಜಗಹ್ವರದೇಶದ ನರಪತಿಗಳಿಗೆ

ನಿಜವರಕರುಣದಲಿ

ವಿಜಯಾಭ್ಯುದಯಗಳನು ಸತತ ಪೊಂದಿಸುತ

ರಜತಕನಕ ನವಮಣಿಗಣಯುತ ವಾ-

ರಿಜವನು ಪೋಲುವ ಸಿಂಹಾಸನದಲಿ

ಬಿಜಯವ ಗೈಯ್ಯುತ ಸುಜನಸಮೂಹಕೆ

ನಿಜಪದಯುಗಳಾಂಬುಜ ಸೇವೆ ನೀಡಲು ॥ ೩ ॥


ನಂದಿತೀರ್ಥರ ವರಶಾಸ್ತ್ರಗಳನ್ನು

ಚಂದದಿ ವಿವರಿಸಲು

ಚಂದ್ರಿಕಾನ್ಯಾಯಾಮೃತ ಮೊದಲಾದ

ಗ್ರಂಥಗಳನು ರಚಿಸಿ

ಮಂದಜನಕೆ ಮುಚುಕುಂದನ ಶುಭಗುಣ

ವೃಂದಗಳನು ಸುಖದಿಂದ ಬೋಧಿಸಲು

ಅಂದಪದಗಳನು ರಚಿಸುತ ಶುಭಗುಣ-

ಸಾಂದ್ರನ ಭಜನಾನಂದ ಪೊಂದಿಸಲು ॥ ೪ ॥


ವಿಜಯೀಂದ್ರ ವಾದಿರಾಜ ಮೊದಲಾದ

ನಿಜವರಶಿಷ್ಯರುಗಳ

ವ್ರಜಕೆ ಶಾಸ್ತ್ರಾರ್ಥಗಳು ಬೋಧಿಸುತ

ದ್ವಿಜಕುಲಸಂಭವರಾದ ಪುರಂದರ

ಸುಜನಶಿರೋಮಣಿ ಕನಕಪ್ರಮುಖ

ಪೂಜಿತ ಪದಯುಗಳಾಂಬುಜ ಯತಿಶೇಖರ

ವಿಜಯಸಾರಥಿಯು ಪ್ರಸನ್ನ ನಾಗಲೆಂದು ॥ ೫ ॥

***


No comments:

Post a Comment