Sunday, 8 December 2019

ಹರಿದಾಸನು ನಾನಲ್ಲ ಹರಿ mohana vittala ankita suladi ಸಾಧನಾ ವಿಚಾರ ಸುಳಾದಿ HARIDASANU NAANALLA HARI SAADHANA VICHAARA SULADI


Audio by Mrs. Nandini Sripad


Audio by Vidwan Sumukh Moudgalya

ಶ್ರೀ ಮೋಹನದಾಸಾರ್ಯ ವಿರಚಿತ  ಸಾಧನಾ ವಿಚಾರ ಸುಳಾದಿ

ರಾಗ ಕಾನಡ 

ಧ್ರುವತಾಳ

ಹರಿದಾಸನು ನಾನಲ್ಲ ಹರಿ ಭಕುತಿ ಎನಗಿಲ್ಲ 
ಧರೆಯೊಳು ಒಂದು ವೇಷವ ಧರಿಸಿ ತಿರುಗುವೆನು ನಾನು 
ತರುಣಿ ಮಕ್ಕಳು ಸಹೋದರ ಮೊದಲಾದವರ 
ಪೊರೆವೆನೆನುತ ಡಂಭ ವಿರಚಿಸಿ ಶರಣ ನೆಂತೆಂದು 
ಕರೆಸಿಕೊಂಬೆನೊ ಬಹಿರದಲ್ಲಿ ಅನ್ಯರಿಂದಲೆ 
ಸಿರಿಪತಿ ನಿನ್ನ ಪಾದ ಸ್ಮರಿಸದಲೆ 
ಪರಮ ದಯಾಳು ಮೋಹನ್ನವಿಠ್ಠಲರೇಯಾ 
ಕರಣ ಶುದ್ಧನಾಗದೆ ತಿರುಗಿದೆ ಪೊಟ್ಟಿಗಾಗಿ  ॥ 1 ॥

ಮಟ್ಟತಾಳ

ದೇಶ ದೇಶಕೆ ಧನದ ಆಶೆಗಾಗಿ ಪೋಗಿ 
ಕಾಶಿಗ್ಹೋಗುವೆನೆಂದು ಕಾಸು ಹಣವ ತಂದು 
ಈ ಸಂಸಾರಕ್ಕೆ ನಾ ಸಮರ್ಪಿಸಿ 
ತೋಷ ಪಡುವೆ ದುರಿತ ರಾಸಿ ಯಂದರಿಯದಲೆ 
ಭೂಸುರರು ಎನ್ನ ವಾಸದಲ್ಲಿಗೆ ಬರಲು 
ಗ್ರಾಸವೀಯದೆ ಅಪಹಾಸ ಮಾಡುವೇನು 
ದೋಷವರ್ಜಿತ ನಮ್ಮ ಮೋಹನ್ನವಿಠ್ಠಲ 
ಘಾಸಿಯಾದೆನೊ ಯಮ ಪಾಶಕ್ಕೆ ಗುರಿಯಾಗಿ  ॥ 2 ॥

ತ್ರಿವಿಡಿತಾಳ

ವಿತ್ತವಿದ್ದವನ ಮನಿಯೊಳು ಪೋಗಿ ಕುಳಿತು ಬಲು 
ಉತ್ತಮನೆಂದವನ ಸ್ತೋತ್ರವ ಮಾಡಿ 
ಹತ್ತೆಂಟು ಪುಸಿ ವಾರ್ತೆ ಪೇಳೆ ಅವನು ಈ 
ಹೊತ್ತು ಬನ್ನಿರಿ ಎನ್ನೆ ಹರುಷದಿಂದ 
ಹತ್ತೈದು ದೇವತಾರ್ಚನೆಯ ಸಾಮಗ್ರಿಯ 
ತತ್ಥಳಿಸುವಂತೆ ವಿರಚಿಸುವೆ 
ಸುತ್ತ ಧೂಪ ದೀಪವೆತ್ತಿ ನೈವೇದ್ಯವ 
ಹತ್ತಿಲಿರಿಸಿಕೊಂಡು ಮುಸುಕು ಇಟ್ಟು 
ಚಿತ್ತ ಶುದ್ಧಿಯಿಲ್ಲದಲೆ ಬಹಿರದಲ್ಲಿ ಕರ -
ವೆತ್ತಿ ಪಿಟಿ ಪಿಟಿ ಎಂದು ತುತಿಸುವೆನೊ 
ಮತ್ತೇನು ಮಂತ್ರ ತಂತ್ರವು ಬಾರದೆನ್ನೆ 
ಹತ್ತೀಲಿ ಸೇರಲೀಸೆನೋ ಸ್ವೋತ್ತುಮರ 
ಎತ್ತ ನೋಡಲು ಎನ್ನ ಹತ್ತಿಲಿ ಹೊದ್ದಿದವರು 
ಮುತ್ತಿಕೊಂಡು ಕಾಗೆ ಬಳಗದಂತೆ 
ಚಿತ್ತಜನಯ್ಯಾ ಮೋಹನ್ನವಿಠ್ಠಲ ನಿನ್ನ 
ಭೃತ್ಯನೆನಿಸಿ ಸ್ವಸ್ಥ ಚಿತ್ತದಿಂದಿರದ್ಹೋದೆ ॥ 3 ॥

ಅಟ್ಟತಾಳ

ಕಾಮ ಕ್ರೋಧ ಲೋಭ ಮದ ಮತ್ಸರಂಗಳು 
ರೋಮ ರೋಮ ಕೂಪದೊಳು ತುಂಬಿಕೊಂಡು 
ಭೂಮಿ ಸುರದೇಹ ಬಂದೀಹದೆಂತೆಂಬ 
ಈ ಮಹಾ ಗರ್ವದಿಂದಾಡುವೆ ಸುಜನರ 
ಶ್ರೀಮನೋಹರ ನಿನ್ನ ತಾಮರಸಾಂಘ್ರಿ 
ನಿಷ್ಕಾಮದಿಂದಲಿ ಭಜಿಸಿ ಮರೆ ಪೋಗಲಿಲ್ಲವೊ 
ಭೂಮಿ ಭಾರಕನಾಗಿ ತನುವ ಪೊರೆದೆ ನಿನ್ನ 
ನಾಮಾಮೃತವನು ಪ್ರೇಮದಿ ಸವಿಯದೆ 
ಸಾಮಜವರದ ಮೋಹನ್ನವಿಠ್ಠಲ ಅ 
ನಾಮಧೇಯನಾದೆ ಪಾಮರರೊಡಗೂಡಿ  ॥ 4 ॥

ಆದಿತಾಳ

ಅನ್ಯರ ಪದಾರ್ಥವ ತಂದು ನಿನ್ನ ಮುಂದೆ ಸಮರ್ಪಿಸಲು 
ಎನಗೇನು ಬರುವದೊ ಬಲು ಪುಣ್ಯ ಅದರಿಂದ 
ತನ್ನ ಕರದಿಂದಲಿ ಉದಕವನ್ನು ತಂದು ತುಲಸಿಯಿಂದ 
ನಿನ್ನ ಪೂಜೆ ಮಾಡಲು ಪ್ರಸನ್ನನಾಗಿ ಪಾಲಿಸುವಿ 
ಮುನ್ನೆ ಒಬ್ಬ ಕುಚೇಲಂಗೆ ಮನ್ನಿಸಿ ಪದವಿಯನಿತ್ತೆ 
ನಿನ್ನ ಮಹಿಮೆ ಎಣಿಪರಾರೊ 
ಘನ್ನ ಮಹಿಮ ಮೋಹನ್ನವಿಠ್ಠಲರೇಯಾ 
ಅನ್ಯರಲಿ ಪೋಗಿ ಪಾಪಕೊಂಡು ಬರುವೆನೊ  ॥ 5 ॥

ಜತೆ 

ಕೆರೆ ನೀರು ಕೆರೆಗೆ ಚೆಲ್ಲಿ ವರಗಳು ಪಡೆದಂತೆ 
ಕರುಣಾಳು ಮೋಹನ್ನವಿಠ್ಠಲ ನರ್ಚಿಸು ಮನವೆ ॥
***********

No comments:

Post a Comment