Friday 1 October 2021

ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ ankita varadesha vittala KAUSALYAJA VARA VAMSHODBHAVA SURA SAMSEVITA PADA RAMA HARE




ಜೈ ಜೈ ರಾಮ ಹರೇ ಜೈ ಜೈ ಕೃಷ್ಣ ಹರೇ

ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ
ಕಂಸಾದ್ಯಸುರರ ಧ್ವಂಸಗೈದ ಯದುವಂಶೋದ್ಭವ ಕೃಷ್ಣ ಹರೇ

ಮುನಿಮಖರಕ್ಷಕ ಧನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ
ಘನವರ್ಣಾಂಗ ಸುಮನಸರೊಡೆಯ ವನಜಾಸನ ಪಿತ ಕೃಷ್ಣ ಹರೇ

ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ ಸುಲಲಿತ ಗುಣನಿಧಿ ರಾಮ ಹರೇ
ಬಲು ವಕ್ರಾಗಿದ್ದ ಅಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಕೃಷ್ಣ ಹರೇ

ಹರ ಧನು ಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ರಾಮ ಹರೇ
ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಶರಣರ ಪಾಲಕ ಕೃಷ್ಣ ಹರೇ

ಜನಕ ಪೇಳೆ ಲಕ್ಷ್ಮಣ ಸೀತಾ ಸಹ ವನಕೆ ತೆರಳಿದ ರಾಮ ಹರೇ
ವನಕೆ ಪೋಗಿ ತನ್ನಣುಗರೊಡನೆ ಗೋವನು ಪಾಲಿಪ ಶ್ರೀ ಕೃಷ್ಣ ಹರೇ

ತಾಟಕಿ ಖರಮಧುಕೈಟಭಾದಿ ಪಾಪಾಟವಿ ಸುರಮುಖ ರಾಮ ಹರೇ
ಆಟದಿ ಫಣಿ ಮೇಲ್ ನಾಟ್ಯವನಾಡಿದ ಖೇಟವಾಹನ ಕೃಷ್ಣ ಹರೇ

ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ
ವಿದುರನ ಕ್ಷೀರಕೆ ಒದಗಿಹೋದ ಪದುಮನಾಭ ಜಯ ಕೃಷ್ಣ ಹರೇ

ಸೇವಿತ ಹನುಮ ಸುಗ್ರೀವನ ಸಖ ಜಗತ್ವಾವನ ಪರತರ ರಾಮ ಹರೇ
ದೇವಕಿ ವಸುದೇವರ ಸೆರೆ ಬಿಡಿಸಿದ ದೇವ ದೇವ ಕೃಷ್ಣ ಹರೇ

ಗಿರಿಗಳಿಂದವರ ಶರಧಿ ಬಂಧಿಸಿದ ಪರಮ ಸಮರ್ಥ ರಾಮ ಹರೇ
ಗಿರಿಯ ತನ್ನ ಕಿರಿ ಬೆರಳಲೆತ್ತಿ ಗೋವರನ ಕಾಯ್ದ ಕೃಷ್ಣ ಹರೇ

ಖಂಡಿಸಿ ದಶಶಿರ ಚೆಂಡಾಡಿದ ಕೋದಂಡಪಾಣಿ ರಾಮ ಹರೇ
ಪಾಂಡು ತನಯರಿಂದ ಚಂಡ ಕೌರವರ ದಿಂಡು ಕೆಡವಿಸಿದ ಕೃಷ್ಣ ಹರೇ

ತವಕದಿ ಅಯೋಧ್ಯಾಪುರಕೈದಿದ ತನ್ನ ಯುವತಿಯೊಡನೆ ರಾಮಹರೇ
ರವಿಸುತತನಯಗೆ ಪಟ್ಟವ ಕಟ್ಟಿದ ಭವತಾರಕ ಶ್ರೀ ಕೃಷ್ಣ ಹರೇ

ಭರತನು ಪ್ರಾರ್ಥಿಸಲರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ
ವರಧರ್ಮಾದ್ಯರ ಧರೆಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ

ಧರೆಯೊಳಗಜ್ಞಜನರನು ಮೋಹಿಪುದಕೆ ಹರನ ಪೂಜಿಸಿದ ರಾಮ ಹರೇ
ಹರನ ಪ್ರಾರ್ಥಿಸಿ ವರವನು ಪಡೆದ ಚರಿತೆ ಅಗಾಧವು ಕೃಷ್ಣ ಹರೇ

ಅತುಳ ಮಹಿಮ ಸದ್ ಯತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ
ಸಿತವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ

ರಾಮರಾಮ ಎಂದು ನೇಮದಿ ಭಜಿಪರ ಕಾಮಿತಫಲದ ರಾಮ ಹರೇ
ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ ವಿಠಲ ಕೃಷ್ಣ ಹರೇ
****

No comments:

Post a Comment