Sunday, 5 December 2021

ಅನುದಿನ ನೆನೆಯೆಲೊ ಹನುಮನಿಗತಿಪ್ರಿಯ ankita prasanna

 ರಾಗ -  :  ತಾಳ -


ಅನುದಿನ ನೆನೆಯೆಲೊ ಹನುಮನಿಗತಿಪ್ರಿಯ l 

ಪರಮಪಾವನ ರಾಮನಾಮ ll ಪ ll


ಇನಕೂಲಭೂಷಣ ಮುನಿಜನತೋಷಣ l

ಜಾನಕೀರಮಣನ ನಾಮ ll ಅ ಪ ll


ಗೌತಮಸತಿಯ ಪುನೀತಳ ಮಾಡಿ ಪ್ರ l 

ಖ್ಯಾತಿ ಪೊಂದಿದ ದಿವ್ಯನಾಮ l

ಶೀತಲಕಿರಣಭೂಷಣನ ಧನುವ ಮುರಿದು l 

ಸೀತೆಯ ಪೊಂದಿದ ನಾಮ ll 1 ll


ಜನಕನ ವಚನವನುಳಿಸುವ ನೆವದಲಿ l 

ವನವಾಸ ಮಾಡಿದನ ನಾಮ l 

ವನದಲಿ ಖರದೂಷಣಮುಖ ದನುಜರ l

ಹನನ ಮಾಡಿದ ದಿವ್ಯನಾಮ ll 2 ll


ಶರಭಂಗಮುನಿಗೆ ಪರಮಪದವನಿತ್ತ l

ಪರಮಪವಿತ್ರನ ನಾಮ l 

ವರಿಸಲು ಬಂದ ಶೂರ್ಪನಖಿ ನಾಸಿಕಕರ್ಣ l 

ಮುರಿಸಿದವನ ಶುದ್ಧನಾಮ ll 3 ll 


ಭೂಮಿಜೆಯನು ಮೋಸದಿಂದ ಅಗಲಿಸಿದ l

ಮಾರೀಚನ ಕೊಂದ ನಾಮ l 

ಸ್ವಾಮಿಯ ಪ್ರೇಮಕ್ಕೆ ಮಡಿದ ಜಟಾಯುಗೆ l 

ಅಭಯಹಸ್ತವನಿತ್ತ ನಾಮ ll 4 ll


ಆ ಮಹಾಹನುಮನ ಕಾಮಿತದಂತೆ l 

ಮಹೇಂದ್ರಸುತನ ಕೊಂದ ನಾಮ l 

ಕೋಮಲ ಕಮಲ ಸುಹೃದ ತನಯನಿಗೆ l 

ಸಾಮ್ರಾಜ್ಯವನಿತ್ತ ನಾಮ ll 5 ll


ಹರಿಪರಿವಾರದಿಂ ಶರಧಿಯೋಳ್ ಸೇತು l

ಬಂಧನವ ಮಾಡಿದ ರಾಮನಾಮ l

ದುರುಳ ರಾವಣಮುಖ ರಕ್ಕಸರನೆ ಕೊಂದು l

ಧರಣಿಸುತೆಯ ಕಂಡ ನಾಮ ll 6 ll


ಶರಣವ ಪೊಂದಿದ ಭಕುತ ವಿಭೀಷಣಗೆ l

ಕರುಣವ ತೋರಿದ ನಾಮ l

ತರುಣಿ ಸೀತೆ ಲಕ್ಷ್ಮಣರಿಂದ ಕೂಡಿ ಪು l

ಷ್ಪಕವನೇರಿದ ಸಾಧುನಾಮ ll 7 ll


ಉರುತರ ತಪದಲಿ ನಿರತನಾದ ತಮ್ಮ l

ಭರತನ ಉಳಿಸಿದ ನಾಮ l 

ದೊರೆತನ ಪೊಂದಿ ಸಕಲ ಸುಜನರುಗಳಿಗೆ l

ಪರತರ ಸುಖವಿತ್ತ ನಾಮ ll 8 ll


ತನ್ನ ಭಕುತರೊಳು ಉನ್ನತನೆನಿಸಿದ l

ಘನ್ನಮಾರುತಿಗೊಲಿದ ನಾಮ ಪ್ರ l

ಸನ್ನನಾಗಿ ಸಂತತ ಇವನಿಗೆ ತನ್ನ l 

ಸಹಭೋಗ ಸುಖವಿತ್ತ ನಾಮ ll 9 ll

***


No comments:

Post a Comment