Wednesday, 1 September 2021

ಮುಕ್ತನಾವನೋ ಜೀವನ್ಮುಕ್ತನಾವನೋ ankita gurujagannatha vittala

 ..


ಮುಕ್ತನಾವನೋ ಜೀವನ್ಮುಕ್ತನಾವನೋ ಪ


ಮುಕ್ತನಾವನಿವರ ಪಾದಾಸಕ್ತನಾಗಿ ಸರ್ವಕರ್ಮ

ಭಕ್ತಿಯಿಂದ ನೀಡಿ ವಿಷಯಾಸಕ್ತನಾಗದವನಿಗಿನ್ನ ಅ.ಪ


ಉದಯಕಾಲದಲ್ಲಿ ಎದ್ದು ನದಿಯಸ್ನಾನಮಾಡಿ ಇವರ

ಪದುಮಸಮಪಾದಯುಗಳ ಹೃದಯದಲ್ಲಿ ಭಜಿಪಗಿನ್ನ 1


ಮನಸುಮಾತುಕಾಯದಿಂದ ಮನಿಯು

ವನಿತೆ ಧಾನ್ಯ ಧನುವು

ತನಯ ಪ್ರಾಣ ಇವರ ಪಾದವನಜಕರ್ಪಿಸಿರುವಗಿನ್ನ 2


ಊಟ ಕೂಟ ನೋಟಮಾಟ ಪಾಠ ಆಟ ಕಾಟ ಇವರ

ಆಟ ಎಂದು ವಿಷಯ ಉದಧಿ ದಾಟುವಾವಗಿನ್ನಮತ್ತೆ 3


ಉಕ್ತ ಕರ್ಮದಲ್ಲಿ ಮನ ಸಕ್ತನಾಗಿ ಹರಿಯ ಪಾದ

ಭಕ್ತಿಯಿಂದ ಭಜಿಸಿ ಪಾಪಮುಕ್ತನಾಗುವವಗಿನ್ನ 4


ಶಕ್ತಿ ಇದ್ದರೊಳಗೆ ಹರಿಯ ಭಕ್ತಜನರ ಭಜಿಸಿ ಸರ್ವೋ

ದ್ರಿಕ್ತ ವಿಭೂತಿ ಮನದಿ ವ್ಯಕ್ತಮಾಡಿದವಗಿನ್ನ 5


ಮೋದತೀರ್ಥ ಶಾಸ್ತ್ರಸಾರ ಸ್ವಾದ ಮನದಿ ತಿಳಿದು ಅವರ

ಹಾದಿಹಿಡಿದು ಬುಧರ ದಿವ್ಯ ಪಾದಯುಗಳ ಭಜಿಪಗಿನ್ನ 6


ಶಿರದಿ ಇದ್ದ ಹರಿಯ ರೂಪ ಅರಿದು ಮನಸಿನಿಂದ ನಿತ್ಯ

ಶಿರದಿ ಕಾರ್ಯಮಾಡಿ ತಾನು ಹಿರಿದು ಹಿಗ್ಗುವಗಿನ್ನ 7


ನೇತ್ರಮೊದಲಾದ ಸರ್ವಗಾತ್ರದಲ್ಲಿ ಇರುವ ತೀರ್ಥ

ಕ್ಷೇತ್ರಮೂರ್ತಿ ತಿಳಿದು ತನ್ನ ಗಾತ್ರನಿರ್ಮಲ ಮಾಳ್ಪಗಿನ್ನ 8


ಈಶ ಹರಿಯು ಸರ್ವ ಜೀವ ದಾಸರೆಂದು ತನ್ನ ಹೃದಯೋ

ಪಾಸನಾವ ಮಾಡಿ ವಿಷಯ ಆಶೆಬಿಟ್ಟು ಇರುವಗಿನ್ನ 9


ಎನು ಮಾಳ್ಪ ಕರ್ಮವೆಲ್ಲ ಶ್ರೀನಿವಾಸ ಮಾಳ್ಪನೆಂದು

ಜ್ಞಾನದಿಂದ ಸರ್ವರಲ್ಲಿ ಧ್ಯಾನಮಾಳ್ಪ ಮನುಜಗಿನ್ನ 10


ಶ್ವಾನ ಗೋವು ದ್ವಿಜ ಮತ್ತೆ ಅನಿ ಮೊದಲು ಸರ್ವರಲ್ಲಿ

ಜ್ಞಾನಗಮ್ಯ ತಾನು (ತಾನೆ) ಸಮಾನನೆಂದವಗಿನ್ನ 11


ಕಲ್ಲು ಮಣ್ಣು ಹೊನ್ನು ಲೋಹ ಬಲ್ಲ

ಬೇವು ಅಮೃತ ವಿಷವು

ಎಲ್ಲ ಸ್ವಾದು ಸಮವೆಂದು ಅಲ್ಲಿ ಇಚ್ಚೇ ಮಾಡದವಗಿನ್ನ 12


ಕರ್ತೃ ಕ್ರಿಯಾ ಕರ್ಮದೊಳು ಪತ್ರ ಪುಷ್ಪತೋಯ ಫಲದಿ

ವೃತ್ರಸೂದನನುಜ ಸರ್ವಕರ್ತೃ ಎಂಬವಗಿನ್ನ 13


ನಾಥ ನೀನು ನಿನ್ನ ಪಾದ ದೂತ ನಾನು ಎಂದು ನಿತ್ಯ

ಪಾತಕಾರ್ಯ ಮಾಡಿದಾಗ್ಯು ಪೂತನೆನಿಪನವನಗಿನ್ನ 14


ಸಿಟ್ಟು ಶೋಕ ಹರ್ಷ ಮೋಹ ಸುಟ್ಟು ಗುರುಜಗನ್ನಾಥ

ವಿಠಲನ್ನ ಭಜಿಸಿ ಜಗದಿ ಶಿಷ್ಟ ನಾಗಿರುವಗಿನ್ನ 15

***


No comments:

Post a Comment