Friday, 27 August 2021

ನವರತುನದಿಂದಲೆಸೆವ vijaya vittala ankita suladi ಕೃಷ್ಣ ಮಹಿಮಾ ಸುಳಾದಿ NAVA RATUNADINDALESEVA KRISHNA MAHIMA SULADI

Audio by Mrs. Nandini Sripad

 ..

ಶ್ರೀವಿಜಯದಾಸಾರ್ಯ ವಿರಚಿತ 


 ಶ್ರೀಕೃಷ್ಣ ಮಹಿಮಾ ಸ್ತೋತ್ರ ಸುಳಾದಿ 


 ರಾಗ ನಾಟಿಕುರಂಜಿ 


 ಝಂಪೆತಾಳ 


ನವ ರತುನದಿಂದಲೆಸೆವ ಮುಕುಟದೊಳಗೊಂದು

ರವಿಯ ಹರಳಿನ ಕಾಂತಿ ಪೇಳಲಳವಲ್ಲ

ಭುವನ ಪಾತಾಳ ಗಗನವನು ಭೇದಿಸಿಕೊಂಡು

ಛವಿ ಕವಿದು ಮುಸುಕಿದದು ಕವಿಗಳೆಣಿಸಲೋಶವೇ

ದಿವಿಜ ಜೇಷ್ಟನು ಪವನ ದ್ವಿಜ ಪವನಾಶನ

ಶಿವ ವೃದ್ಧಶ್ರವನಗ್ನಿ ಜವನ ಸುರ ವೈಶ್ರವಣ

ದಿವಿಜ ರವಿಯಾದಿಗಳ ಅವಯವಾದಿಗಳಾಭರಣ

ಛವಿಗೆ ಅಪಾರಧಿಕ ಪ್ರತಿ ಛವಿ ಥಳಥಳಿಸೆ

ಎವೆದೆಗಿಯಾದತಿ ಸೋಜಿಗವನು ಪೊಂದಿ ನಿಂದರು

ಕವಿನಾಮ ವಿಜಯವಿಟ್ಠಲ ನಿನ್ನ ಸರಿ ಧೊರೆ

ಅವನಿಯೊಳಗಿಲ್ಲದಿರೆ ಈ ಪರಿ ರೂಪವನ್ನು

ತವ ಪಾದಕೆ ನಮೋ ನಮೋ ಮಾಯಾ ಲೀಲಾ ॥ 1 ॥ 


 ಮಟ್ಟತಾಳ 


ಪ್ರಳಯಾಳಲುವಿಲ್ಲಾ ಚಳಿ ಬಿಸಿಲು ಇಲ್ಲಾ

ಮಳಿಗಾಳಿ ಇಲ್ಲಾ ತಳಲಿದ ವನಗಳು

ಫಲಪುಷ್ಪದಲಿ ಮೀಸಲು ಗುಂದದಲೇವೆ

ಕಳೆ ಕಾಂತಿಗಳಿಂದ ಥಳ ಥಳ ಪೊಳೆವಂಥ

ಹೊಳಲಾದಾ ವೈಕುಂಠ ನೆಲೆಯವನು ತೊರೆದು

ಇಳಿಯೊಳು ಬಂದು ಗೋಕುಲದಲ್ಲಿ ಜನಿಸಿ ಗೋ -

ವಳನಾದದೇನು ವಿಜಯವಿಟ್ಠಲ ನಿನ್ನ

ನೆಲೆ ತಿಳಿಯದೆಂದು ಬಳಲುವರು ಸುರರು ॥ 2 ॥ 


 ತ್ರಿವಿಡಿತಾಳ 


ಮುಕುತಾ ವನದಲಿ ಮುಕುತ ಶುಕ ಹಂಸೆ

ಪಿಕ ಭೃಂಗ ನಾನಾಕ ಪಕ್ಷಿಗಳಾ

ನಿಕರ ಕಿಲ ಕಿಲಿ ಶಬ್ದ ಸದಾ ಮುಕುಳಿದ ನಗೆಯಲ್ಲಿ

ಕಕ ಕಕ ಕಾಯೆಂದು ಝೇಂಕರಿಸುತಿರೇ

ಮುಕುತಾಮುಕುತಾ ಬೊಮ್ಮರ ಭಕುತಿ ರಸದಿಂದ ಹ -

ಸ್ತಕರಾಗಿ ನಿಂದು ಭ್ರಾಮಕರಾಗಿ ತುತಿಸೆ 

ವಿಕಸಿತ ಕಮಲಾಂಬಕದ ಕೊನೆಯಿಂದ 

ಮುಕುತಾಮುಕುತರನ್ನು ನೋಡುವ ದೇವಾ

ಅಕಳಂಕನಾಗಿ ಇದೇ ಗೋಕುಲದಿ ಜನಿಸೀ

ಸಕಲ ಗೋಮಕ್ಕಳ ಕೈಯ್ಯ ಬೈಸಿಕೊಂಡದ್ದೇನೊ

ಅಖಿಳ ಜೀವಕ್ಕೆ ಭಿನ್ನ ಶಾಶ್ವತ ವಿಜಯವಿಟ್ಠಲ 

ಸುಖಸಾಂದ್ರ ನಿನ್ನ ಮಕ್ಕಳಾಟಿಕೆ ಸೋಜಿಗವೋ ॥ 3 ॥ 


 ಅಟ್ಟತಾಳ 


ಮೀಸಲಾಭರಣ ಭೂಷಣ ನಾನಾಕ

ಲೇಸಾದ ಪುಷ್ಪದ ಮಾಸದ ಮಾಲಿಕೆ

ಭಾಸಿತದಲಿ ಪೀತ ವಸನ ಶೋಭಿಸುತಿರೆ

ಏಸು ಶಿಂಗಾರ ಬಿಟ್ಟು ಗೋಸಂಕುಲ ಕಾಯ್ದು

ವೇಷಧಾರಕನಾಗಿ ಕೀಸಲಯದ ಬಳ್ಳಿ

ನೀ ಸುತ್ತಿ ಶಿರಕೆ ಮಾನೀಸನಾಗಿ ಜೀವ ರಾಸಿ ಕೂಡಾಡಿದೆ 

ಕೇಶವ ವಿಜಯವಿಟ್ಠಲ ನಿನ್ನ ಲೀಲೆಯ

ಏಸೇಸು ದಿನಕೆ ಎಣಿಸಲು ಮಿತಿಯುಂಟೇ ॥ 4 ॥ 


 ಆದಿತಾಳ 


ಜಗತ್ತಿನೊಳಗೆ ಇದ್ದ ಗುಣಕೆ

ಮಿಗಿಲಯ್ಯಾ ನಿನ್ನ ಗುಣಗಳು

ಅಗಣಿತ ರಾಶಿಗಳು ಬಗೆಬಗೆಯಿಂದ ಇರಲು

ಮಗುವಿಗೆ ಎಲ್ಲಾರೊಳು ಹಗಲಿರಳು ನಗೆಯಿಂದ

ಹಗರಣವಾದಾನೆಂಬೊ ಜಗದೊಳಗಾಶ್ಚರ್ಯವೇನೋ

ಖಗ ಗಮನಾ ವಿಶ್ವಾತ್ಮಾ ವಿಜಯವಿಟ್ಠಲ ನಿನ್ನಾ

ವಿಗಡ ನಾಟಕಕ್ಕೆ ಕೈಮುಗಿದು ಶರಣೆಂಬೆ ॥ 5 ॥ 


 ಜತೆ 


ಅಪ್ರಾಕೃತನಾಗಿ ಪ್ರಾಕೃತದಲಿ ಮೆರೆದೆ

ಅಪ್ರಮೇಯ ನಾಮಾ ವಿಜಯವಿಟ್ಠಲ ಅನಾದಿ ॥

****


No comments:

Post a Comment