ಕಾಖಂಡಕಿ ಶ್ರೀ ಮಹಿಪತಿರಾಯರು
ಹತ್ತಿಲಿಹ ವಸ್ತುನೋಡೊ ಮನವೆ ನಿತ್ಯ ನಿಜನಿರ್ಗುಣವ ಕೂಡೊ ಮನವೆ ಪ
ಅತ್ತಲಿತ್ತಲಾಗದಿರು ಮನವೆ ಚಿತ್ತ ಚಂಚಲ ಮಾಡದಿರೆನ್ನ ಮನವೆ ಉತ್ತುಮ ಸುಪಥ ನೋಡು ಮನವೆ ನೆತ್ತಿಯೊಳಿಹ ಸುವಸ್ತು ಕೂಡೊ ಮನವೆ 1
ಹೋಕಹೋಗದಂತೆ ಎನ್ನ ಮನವೆ ಏಕರಸವಾಗಿ ಕೂಡೊ ಎನ್ನ ಮನವೆ ನಾಲ್ಕು ಶೂನ್ಯವ ಮೆಟ್ಟಿ ನೋಡು ಮನವೆ ಜೋಕೆಯಿಂದ ಜ್ಯೋತಿರ್ಮಯ ಕೂಡೊ ಮನವೆ 2
ಧನ್ಯವಿದು ರಾಜಯೋಗಮನವೆ ಭಿನ್ನವಿಲ್ಲದೆ ಬೆರೆದು ಕೂಡೊ ಮನವೆ ಚೆನ್ನಾಗಿ ಚಿನ್ಮಯ ನೋಡು ಮನವೆ ಅನ್ಯಪಥವಿನ್ಯಾತಕ ನೋಡು ಮನವೆ 3
ಗರ್ವಗುಣ ಹಿಡಿಯದಿರು ಮನವೆ ನಿರ್ವಿಕಲ್ಪನ ತಿಳಿದು ನೋಡು ಮನವೆ ಪೂರ್ವಪುಣ್ಯಹಾದಿ ಇದು ಮನವೆ ಸರ್ವರೊಳು ವಸ್ತುಮಯ ಒಂದೆ ಮನವೆ 4
ದೃಷ್ಟಿಸಿ ಆತ್ಮನ ನೋಡು ಮನವೆ ಪುಷ್ಟವಾಗಿ ಘನದೋರುವದು ಮನವೆ ಭ್ರಷ್ಟವಾಗಿ ಬಾಳಬ್ಯಾಡ ಮನವೆ ನಿಷ್ಠನಾಗಿ ನಿಜನೆಲೆಯಗೊಳ್ಳ ಮನವೆ 5
ಏರಿ ಆರುಚಕ್ರ ನೋಡು ಮನವೆ ಪರಮಾನಂದ ಸುಪಥ ಕೂಡೊ ಮನವೆ ಆರು ಅರಿಯದ ಹಾದಿ ಮನವೆ ತೋರಿಕೊಡುವ ಸದ್ಗುರು ಎನ್ನ ಮನವೆ 6
ಹರಿಭಕ್ತಿಯೊಳಗಿರು ಮನವೆ ಸಿರಿ ಸದ್ಗತಿ ಸುಖವ ಕೂಡೊ ಮನವೆ ಗುರುವಾಕ್ಯ ನಂಬಿ ನಡೆ ಮನವೆ ಪರಲೋಕಕ್ಕೆ ಸೋಪಾನವಿದು ಮನವೆ 7
ಪರದ್ರವ್ಯಗಲ್ಪದಿರು ಮನವೆ ಪರಸತಿಯ ನೋಡದಿರೆನ್ನ ಮನವೆ ಪರರ ನಿಂದ್ಯ ಮಾಡದಿರು ಮನವೆ ದಾರಿ ಹೋಗದಿರು ದುಷ್ಟರ ನೀ ಮನವೆ 8
ಸಜ್ಜನರ ಸಂಗ ಮಾಡೊ ಮನವೆ ಹೆಜ್ಜೆವಿಡಿದು ಪರಲೋಕ ಕೂಡೊ ಮನವೆ ಭೆಜ್ಜರಿಕೆ ಹಿಡಿಯೊ ಎನ್ನ ಮನವೆ ದುರ್ಜನರ ಸಂಗ ಮಾಡಬ್ಯಾಡೊ ಮನವೆ 9
ಕಂಗಳ ತೆರೆದು ನೋಡು ಮನವೆ ಮಂಗಳಾತ್ಮನ ಶ್ರೀಪಾದ ಕೂಡೊ ಮನವೆ ಹಿಂಗದಂತೆ ಕೂಡೊ ಬ್ಯಾಗೆ ಮನವೆ ಗಂಗೆಯೊಳು ಜಲಬೆರೆದಂತೆ ಮನವೆ 10
ಭೇದ ಬುದ್ಧಿಯ ಮಾಡಬ್ಯಾಡ ಮನವೆ ಸಾಧುಸಂತರ ಸುಬೋಧ ಕೇಳು ಮನವೆ ಭೇದಿಸಿ ತಿಳಿದುನೋಡು ಮನವೆ ಸದಮಲ ಬ್ರಹ್ಮ ಸೂಸುತಿದೆ ಮನವೆ 11
ಯುಕ್ತಿ ನಿನಗಿದು ನೋಡು ಮನವೆ ಭಕ್ತವತ್ಸಲ ಸ್ಮರಿಸು ಮನವೆ ಮುಕ್ತಿಯಿಂದಧಿಕಸುಖ ಮನವೆ ಭಕ್ತಿರಸದೊಳು ಮುಳಗ್ಯಾಡು ಮನವೆ 12
ಲೇಸು ಲೇಸು ಮಹಿಪತಿ ಸು ಮನವೆ ದಾಸನಾಗಿರುವ ವಾಸುದೇವನ ಮನವೆ ಭಾಸಿ ಪಾಲಿಪನ ಕೂಡೊ ಎನ್ನ ಮನವೆ ಭಾಸ್ಕರ ಮೂರ್ತಿಯ ನೋಡು ಮನವೆ 13
***
No comments:
Post a Comment